More

    ಶಾಲೆಗಳಲ್ಲಿ ಅಕ್ಷಯ ತರಕಾರಿ ಬುಟ್ಟಿ

    ಶ್ರವಣ್‌ಕುಮಾರ್ ನಾಳ ಪುತ್ತೂರು

    ಶಾಲೆಗಳಲ್ಲಿ ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕಾಂಶ ದೊರಕಿಸುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಯೋಜನೆಯಡಿ ಅಕ್ಷಯ ತರಕಾರಿ ಬುಟ್ಟಿ ಎಂಬ ವಿನೂತನ ಯೋಜನೆ ಜಾರಿಗೊಳಿಸಿದ್ದು, ಮಂಗಳೂರು, ಬೆಳ್ತಂಗಡಿಯಲ್ಲಿ ಯಶಸ್ವಿ ಕಂಡಿದೆ. ಈ ಯೋಜನೆಯ ರೂವಾರಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಪುತ್ತೂರಿಗೆ ವರ್ಗಾವಣೆಗೊಂಡ ಬಳಿಕ ಅದೇ ಯೋಜನೆಯನ್ನು ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಆರಂಭಗೊಳಿಸಿದ್ದಾರೆ.

    ಈಗಾಗಲೇ ಅವರು ತನ್ನ ವೃತ್ತಿ ಕಾರ್ಯದಲ್ಲಿ ಮಂಗಳೂರಿನಲ್ಲಿ ಪ್ರಥಮವಾಗಿ ಆರಂಭಿಸಿ ಬಳಿಕ ಬೆಳ್ತಂಗಡಿಯಲ್ಲಿ 2013ರಲ್ಲಿ ಬಿಇಒ ಆಗಿದ್ದ ವೇಳೆಯೂ ಆರಂಭಿಸಿ ಯಶಸ್ವಿ ಕಂಡಿದ್ದರು. ಈಗ ಪುತ್ತೂರು ತಾಲೂಕಿನಲ್ಲೂ ಈ ರೀತಿಯ ಹೊಸ ಕಾರ್ಯ ಆರಂಭಿಸಿದ್ದು, ಈಗಾಗಲೇ ಹಲವು ಶಾಲೆಗಳಲ್ಲಿ ಕಾರ್ಯಯೋಜನೆ ಪ್ರಗತಿಯಲ್ಲಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ಮಕ್ಕಳಿಗೆ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ವಾರದಲ್ಲಿ ಬೇರೆ ಬೇರೆ ರೀತಿಯ ಕಾಳು ಸೊಪ್ಪಿನ ಸಾಂಬಾರು ನಿಗದಿಪಡಿಸಲಾಗಿದ್ದರೂ ಎಲ್ಲವನ್ನು ಮಾರುಕಟ್ಟೆಯಿಂದ ಖರೀದಿಸಿ ತರಲಾಗುತ್ತಿದ್ದು, ಪೌಷ್ಟಿಕಾಂಶದ ಕೊರತೆ ಕಾಣುತ್ತಿತ್ತು. ಈ ನಿಟ್ಟಿನಲ್ಲಿ ಅಡುಗೆ ತಯಾರಿಸುವಾಗ ಮಕ್ಕಳಿಗೆ ಹೆಚ್ಚಿನ ತರಕಾರಿ ಲಭ್ಯವಾಗಲಿ ಎಂಬ ಉದ್ದೇಶದಿಂದ ಅಕ್ಷಯ ತರಕಾರಿ ಬುಟ್ಟಿ ಯೋಜನೆ ರೂಪಿಸಲಾಗಿದೆ.

    ಏನಿದು ಯೋಜನೆ?
    ಮಕ್ಕಳು, ಸಾರ್ವಜನಿಕರು ಹಾಗೂ ಪಾಲಕರು ಶಾಲೆಗಳಿಗೆ ಅವರು ಬೆಳೆಯುವ ತರಕಾರಿಯನ್ನು ಶಕ್ತಿಯನುಸಾರ ಶಾಲೆಗೆ ನೀಡಬಹುದು. ಒತ್ತಡವೇನಿಲ್ಲ. ಇದು ತರಕಾರಿಗಷ್ಟೆ ಸೀಮಿತ. ಅಕ್ಕಿ ಮತ್ತು ಬೇಳೆಯನ್ನು ಸರ್ಕಾರ ಪೂರೈಸುತ್ತದೆ. ಮಕ್ಕಳಿಗೆ ಹಸಿರು ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯಲಿ. ಪೌಷ್ಟಿಕಾಂಶ ಲಭ್ಯತೆ ಹೆಚ್ಚಾಗಲಿ ಎಂಬ ಉದ್ದೇಶದಿಂದ ಈ ಪ್ರಯತ್ನ ಹಮ್ಮಿಕೊಳ್ಳಲಾಗಿದೆ.

    ಹಾರಾಡಿ ಶಾಲೆಯಲ್ಲಿ ಯೋಜನೆ ಜಾರಿ
    ವಾರದ ಒಂದು ದಿನ ಅಕ್ಷಯ ತರಕಾರಿ ಬುಟ್ಟಿ ಯೋಜನೆ ಮಾಡಲಾಗಿದ್ದು, ಹಾರಾಡಿಯಲ್ಲಿ ವಾರದ ನಿಗದಿಪಡಿಸಿದ ಒಂದು ದಿನ ವಿದ್ಯಾರ್ಥಿಗಳು ಮನೆಯಲ್ಲಿ ಬೆಳೆದ ತರಕಾರಿಯನ್ನು ಶಾಲೆಗೆ ತರುತ್ತಾರೆ. ಇಲ್ಲಿ ಒಂದು ತರಕಾರಿಯಾದರೂ ಸರಿ ಅದನ್ನು ಶಾಲೆಗೆ ತಂದು ಕೊಡುತ್ತಿದ್ದಾರೆ. ವಿದ್ಯಾರ್ಥಿಗಳು ತಂದ ತರಕಾರಿಯನ್ನು ಮಧ್ಯಾಹ್ನ ಬಿಸಿಯೂಟಕ್ಕೆ ಸಾಂಬಾರು ಪದಾರ್ಥ, ಸೊಪ್ಪು ಪದಾರ್ಥ ಮಾಡಿ ಬಡಿಸಲಾಗುತ್ತಿದೆ. ಹಾರಾಡಿ ಶಾಲೆಯಲ್ಲಿ ಇದಕ್ಕೆ ಪೂರಕವಾಗಿ ಶಾಲೆಯ ವಠಾರದಲ್ಲಿ ತರಕಾರಿ ಗಿಡಗಳನ್ನು ಈಗಾಗಲೇ ನೆಡಲಾಗಿದ್ದು, ವಿದ್ಯಾರ್ಥಿಗಳೇ ಗಿಡಗಳಿಗೆ ನೀರು ಹಾಕಿ ಬೆಳೆಸುತ್ತಿದ್ದಾರೆ.

    ಪುತ್ತೂರು ತಾಲೂಕಿನ ಶೇ.75 ಶಾಲೆಗಳಲ್ಲಿ ಅಕ್ಷಯ ತರಕಾರಿ ಬುಟ್ಟಿ ಯೋಜನೆ ಯಶಸ್ವಿಯ ಹಂತದಲ್ಲಿದೆ. ಮಕ್ಕಳು ತಮ್ಮ ಮನೆಯಲ್ಲಿ ಬೆಳೆದ ತರಕಾರಿಗಳ ಪೈಕಿ ಒಂದೊಂದು ತರಕಾರಿ ಶಾಲೆಗೆ ತರುವ ಮೂಲಕ ಯೋಜನೆ ಯಶಸ್ವಿಗೊಳ್ಳುತ್ತಿದೆ. ಮಕ್ಕಳಿಗೆ ಸಮಾನ ಪ್ರಮಾಣದಲ್ಲಿ ತಾಜಾ ತರಕಾರಿಗಳ ಪೌಷ್ಟಿಕಾಂಶ ದೊರಕಿಸುವ ಉದ್ದೇಶದಿಂದ ದೊರೆಯಲು ಇಂತಹ ಯೋಜನೆ ಸಹಕಾರಿ.
    ಸಿ.ಲೋಕೇಶ್, ಬಿಇಒ ಪುತ್ತೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts