More

    ಬಹುಕಾಲದ ನಂತರ ಹಿಂದೂ ಜಾಗೃತವಾಗಿದ್ದಾನೆ! : ಚಕ್ರವರ್ತಿ ಸೂಲಿಬೆಲೆಯವರ ವಿಶ್ವಗುರು ಅಂಕಣ

    ಬಹುಕಾಲದ ನಂತರ ಹಿಂದೂ ಜಾಗೃತವಾಗಿದ್ದಾನೆ! : ಚಕ್ರವರ್ತಿ ಸೂಲಿಬೆಲೆಯವರ ವಿಶ್ವಗುರು ಅಂಕಣ

    ಕೊನೆಗೂ ಹಿಂದೂಶಕ್ತಿ ಜಾಗೃತವಾಗುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ. ಕಳೆದ ಆರೇಳು ದಶಕಗಳಿಂದ ನಿರಂತರವಾಗಿ ಪ್ರಹಾರಕ್ಕೆ ಒಳಗಾಗುತ್ತಲೇ ಬಂದು ತನ್ನ ತನವನ್ನೇ ಮರೆತಿದ್ದ ಹಿಂದೂ ಈಗ ಪ್ರತಿಭಟಿಸಲು ಸಜ್ಜಾಗಿದ್ದಾನೆ. ಬಹುಶಃ ಹಿಂದೂವಿನ ಪಾಲಿಗೆ ಇದು ನವೋದಯದ ಕಾಲ. ಹೌದು ನಾನು ಹೇಳುತ್ತಿರುವುದು ತನಿಷ್ಕ್ ಜ್ಯುವೆಲರ್ಸ್​ನ ಜಾಹೀರಾತಿನ ಕುರಿತಂತೆಯೇ.

    ಟಾಟಾದವರಿಗೆ ಸೇರಿದ ‘ತನಿಷ್ಕ್ ಏಕತ್ವಂ’ ಎನ್ನುವ ಹೆಸರಿನಲ್ಲಿ ಇತ್ತೀಚೆಗೆ ಒಂದು ಜಾಹೀರಾತು ಬಿಡುಗಡೆ ಆಯಿತು. ಹಿಂದೂ ಸೊಸೆಯ ಸೀಮಂತವನ್ನು ಮಾಡುವ ಮುಸ್ಲಿಂ ಪರಿವಾರದ ದೃಶ್ಯ ಅದರಲ್ಲಿತ್ತು. ಆ ಹೆಣ್ಣುಮಗಳು ತನ್ನ ಅತ್ತೆಗೆ ‘ನಿಮ್ಮಲ್ಲಿ ಈ ಸಂಪ್ರದಾಯ ಇಲ್ಲ ಅಲ್ಲವೇ?’ ಎಂದು ಕೇಳುವಾಗ, ‘ಮನೆಯ ಹೆಣ್ಣುಮಗಳನ್ನು ಖುಷಿಯಾಗಿಡುವ ಸಂಪ್ರದಾಯ ಎಲ್ಲ ಕಡೆಯೂ ಇದೆ’ ಎಂದು ಪ್ರತಿಕ್ರಿಯಿಸುತ್ತಾಳೆ. ಜಾತ್ಯತೀತತೆಯ ಕಲ್ಪನೆಯಿಂದ ಸಕಲ ಮಾನವರೂ ಒಂದೇ ಎಂಬ ದೃಷ್ಟಿಯಿಂದ ನೋಡುವ ಹಿನ್ನೆಲೆಯಲ್ಲಿ ಜಾಹೀರಾತು ಚೆನ್ನಾಗಿಯೇ ಇದೆ. ಆದರೆ ಜಾಹೀರಾತು ಪ್ರಕಟಗೊಂಡ ಸಂದರ್ಭ ಇದೆಯಲ್ಲ ಅದು ಮಾತ್ರ ಬಹಳ ಕೆಟ್ಟದ್ದಾಗಿದೆ. ಲವ್​ಜಿಹಾದಿನ ಪ್ರಕರಣಗಳು ದಿನೇದಿನೆ ಹೆಚ್ಚುತ್ತ, ಹಿಂದೂ ಹೆಣ್ಣುಮಕ್ಕಳನ್ನು ಮೋಸದಿಂದ ಮದುವೆಯಾಗುವ ಪೋಕರಿಗಳು ಹೆಚ್ಚುತ್ತಿರುವ ಹೊತ್ತಿನಲ್ಲಿ ತನ್ನ ರಕ್ಷಣೆ ತಾನು ಮಾಡಿಕೊಳ್ಳುವ ಅನಿವಾರ್ಯತೆಗೆ ಹಿಂದೂ ಸಿಲುಕಿದ್ದಾನೆ. ಮುಸಲ್ಮಾನ ಹೆಣ್ಣುಮಕ್ಕಳನ್ನು ಹಿಂದೂಗಳೇಕೆ ಮದುವೆಯಾಗಬಾರದು ಎಂಬ ಪ್ರಶ್ನೆಯನ್ನು ಅನೇಕ ಬುದ್ಧಿಜೀವಿಗಳು ಕೇಳುತ್ತಾರೆ. ಹಾಗೆ ಮುಸ್ಲಿಂ ಹುಡುಗಿಯನ್ನು ಸಹಜವಾಗಿ ಪ್ರೀತಿಸಿದ ಹಿಂದೂ ತರುಣರ ಹತ್ಯೆಯಾದಾಗ ಇವರುಗಳು ಬೀದಿಗೂ ಬರುವುದಿಲ್ಲ. ಪ್ರಶ್ನೆ ಇರುವುದು ಮುಸಲ್ಮಾನರ ಉದ್ದೇಶಗಳದ್ದು. ಭಾರತವನ್ನು ಒಮ್ಮೆ ತುಂಡರಿಸಿದ್ದಾಗಿದೆ. ಈಗ ಮತ್ತೊಮ್ಮೆ ತುಂಡರಿಸುವ ಕೆಲವರ ದೂರದೃಷ್ಟಿಯ ಯೋಜಿತ ಆಲೋಚನೆ ಇದೆಯಲ್ಲ, ಅದೇ ಬಲು ಭಯಾನಕವಾದದ್ದು.

    ಮುಸಲ್ಮಾನರ ಸಂಖ್ಯೆ 25 ಪ್ರತಿಶತಕ್ಕಿಂತ ಕೆಳಗಿರುವೆಡೆ ಅವರು ಶಾಂತವಾಗಿ ಎಲ್ಲರೊಡನೆ ಬೆರೆತು ಶುದ್ಧ ಬದುಕನ್ನು ನಡೆಸುತ್ತಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಈ ಸಂಖ್ಯೆ ಹೆಚ್ಚುತ್ತ ಹೋದಂತೆ ಪ್ರಗತಿಪರ ಮುಸಲ್ಮಾನರ ಮಾತನ್ನೂ ಉಳಿದವರು ಕೇಳುವುದಿಲ್ಲ. ಇಷ್ಟು ದಿನ ಭಾರತ ಇದಕ್ಕೆ ಬಲಿಯಾಗುತ್ತಿತ್ತು. ಈಗ ಯುರೋಪ್, ಅಮೆರಿಕಗಳಿಗೂ ಇದರ ಬಿಸಿ ತಟ್ಟಲಾರಂಭಿಸಿದೆ. ಮುಸಲ್ಮಾನರ ಈ ಉಗ್ರವಾದಿತನದ ಬಗ್ಗೆ ಭಾರತ ಜಾಗತಿಕ ವೇದಿಕೆಯಲ್ಲಿ ಹೇಳುತ್ತಿದ್ದಾಗ, ಇವರೆಲ್ಲ ನಗಾಡುತ್ತಿದ್ದರು. ಈಗ ಅವರುಗಳೇ ಈ ಭಯೋತ್ಪಾದನೆಗೆ ತುತ್ತಾಗುತ್ತಿರುವಾಗ ಮುಖದ ಮೇಲಿಂದ ನಗು ಮಾಯವಾಗುತ್ತಿದೆ.

    ಆದರೆ ಭಾರತ ಈ ಹಿಂದೆ ಇಂಥದ್ದೊಂದು ಪ್ರಯೋಗಕ್ಕೆ ತಯಾರಾಗಿಯೇ ಇರಲಿಲ್ಲ. ಕಮಲೇಶ್ ತಿವಾರಿಯನ್ನು ನಡುರಸ್ತೆಯಲ್ಲಿ ಮುಸಲ್ಮಾನರು ಕೊಂದಾಗ ನಾವು ಮಾತನಾಡಲಿಲ್ಲ. ಲವ್​ಜಿಹಾದಿಗೆ ಹೆಣ್ಣುಮಕ್ಕಳು ಬಲಿಯಾಗಿ ಅವರಲ್ಲಿ ಅನೇಕರನ್ನು ತಮ್ಮ ಭಯೋತ್ಪಾದಕ ಕೃತ್ಯಗಳಿಗೆ ಮುಸಲ್ಮಾನರು ಬಳಸಿಕೊಂಡಾಗಲೂ ನಾವು ಮಾತೇ ಆಡಲಿಲ್ಲ. ಅನೇಕ ಬಾರಿ ಲವ್​ಜಿಹಾದ್ ಎನ್ನುವ ಕಲ್ಪನೆಯೇ ಮುಸಲ್ಮಾನರಲ್ಲಿಲ್ಲ ಎಂದು ಹೇಳಿದವರು ಹಿಂದೂಗಳೇ. ಆದರೀಗ ಒಂದೊಂದಾಗಿ ಪ್ರಕರಣಗಳು ಹೊರಬರುತ್ತಿದ್ದಂತೆ ಹಿಂದೂ ಸಮಾಜ ಸುದೀರ್ಘ ನಿದ್ದೆಯಿಂದ ಎಚ್ಚೆತ್ತಿದೆ.

    ಲವ್​ಜಿಹಾದ್ ಎನ್ನೋದು ಸಂಖ್ಯೆಯನ್ನು ವೃದ್ಧಿಸಿಕೊಳ್ಳುವ ಮುಸಲ್ಮಾನರ ವ್ಯವಸ್ಥಿತ ಷಡ್ಯಂತ್ರ. ಹಾಗಂತ ಹಿಂದೂ ಹೆಣ್ಣುಮಕ್ಕಳನ್ನು ಮದುವೆಯಾಗುವ ಎಲ್ಲ ಮುಸಲ್ಮಾನರೂ ಹಾಗೇ ಇದ್ದಾರೆಂದೇನೂ ಅಲ್ಲ. ಇಬ್ಬರು ಪರಸ್ಪರ ಪ್ರೇಮದಿಂದ ಬಂಧನಕ್ಕೊಳಗಾಗಿ ಯಾರ ಮಿತಿಯನ್ನೂ ದಾಟದೆ ಮನೆಗಳಲ್ಲಿ ಎರಡೂ ಸಂಪ್ರದಾಯವನ್ನು ಆಚರಿಸಿಕೊಂಡು ಬದುಕಿರುವುದನ್ನು ನಾನೇ ನೋಡಿದ್ದೇನೆ. ಅತ್ತ ಮುಸಲ್ಮಾನ ಹುಡುಗಿಯರು ಹಿಂದೂ ಹುಡುಗರನ್ನೇ ಮದುವೆಯಾಗಬೇಕೆಂಬ ಹಂಬಲದಿಂದ ಕಾಯುವುದನ್ನೂ ಕಂಡಿದ್ದೇನೆ. ಆದರೆ, ಲವ್​ಜಿಹಾದ್ ಇತ್ತೀಚೆಗಂತೂ ಅದೆಷ್ಟು ವ್ಯಾಪಕವಾಗಿದೆ ಎಂದರೆ ಫೇಸ್​ಬುಕ್​ಗಳಲ್ಲಿ ಹಿಂದೂ ಹೆಸರನ್ನಿಟ್ಟುಕೊಂಡು, ದೇವಸ್ಥಾನಗಳೆದುರು ಫೋಟೋ ಕ್ಲಿಕ್ಕಿಸಿಕೊಂಡು, ಹಿಂದೂ ಹುಡುಗಿಯರನ್ನು ಪರಿಚಯಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಈ ಹೆಣ್ಣುಮಕ್ಕಳು ಹುಡುಗ ಹಿಂದೂವೇ ಆಗಿರಬೇಕೆಂದು ಭಾವಿಸಿ ಪ್ರೇಮದ ಬಲೆಗೆ ಬಿದ್ದುಬಿಡುತ್ತಾರೆ. ನಾಲ್ಕಾರು ಬಾರಿ ಜೊತೆ ಸುತ್ತಾಡಿದ ನಂತರ ಈ ಹುಡುಗರು ದೈಹಿಕ ಸಂಪರ್ಕವನ್ನೂ ಮಾಡಿಬಿಡುತ್ತಾರೆ. ಪಾವಿತ್ರ್ಯದ ಪಾಠವನ್ನು ಮನೆಯಲ್ಲಿ ಪದೇಪದೆ ಕೇಳಿಕೊಂಡುಬಂದ ಹಿಂದೂ ಹೆಣ್ಣುಮಕ್ಕಳಿಗೆ ಇಲ್ಲಿಂದ ಮರಳಿ ಬರುವುದು ಹೆಚ್ಚು-ಕಡಿಮೆ ಅಸಾಧ್ಯವೇ. ಆನಂತರ ಅನಿವಾರ್ಯವಾಗಿ ಅವನೊಂದಿಗೆ ಹೋಗಬೇಕು. ಅನೇಕ ಬಾರಿಯಂತೂ ತಾವು ಸುತ್ತಾಡಿದ, ಜೊತೆಯಲ್ಲಿ ಕಾಲ ಕಳೆದ ವಿಡಿಯೋ ಹಿಡಕೊಂಡೇ ಬ್ಲಾಕ್​ವೆುೕಲ್ ಮಾಡುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇವೆಲ್ಲವನ್ನೂ ಮನೆಯಲ್ಲಿ ಹೇಳಲಾಗದ ಹುಡುಗಿ ಆ ಹುಡುಗನೊಂದಿಗೆ ಓಡಿ ಹೋಗುತ್ತಾಳೆ. ಆಮೇಲಿನದ್ದು ದುಃಖದ ಸರಮಾಲೆ.

    ಮೌಲ್ವಿಗಳು ಒಪು್ಪವಂತೆ ಮದುವೆಗೆ ಪೂರ್ವ ಪ್ರೇಮ-ಪ್ರಣಯಗಳು ಇಸ್ಲಾಮಿನಲ್ಲಿ ನಿಷಿದ್ಧ. ಆದರೆ ಹೀಗೆ ಪ್ರೀತಿಯ ಬಲೆಗೆ ಹಿಂದೂ ಹೆಣ್ಣುಮಕ್ಕಳನ್ನು ಬೀಳಿಸಿ ಮಸೀದಿಗೆ ಕರೆದುಕೊಂಡು ಬಂದವನನ್ನು ಮೌಲ್ವಿಗಳು ಕ್ಷಮಿಸಿ ನಿಖಾ ಮಾಡಿಸುತ್ತಾರೆ. ಈ ನಿಖಾಕ್ಕಿರುವ ಏಕೈಕ ನಿಯಮವೇನು ಗೊತ್ತೇ? ಹುಡುಗಿ ಮುಸಲ್ಮಾನಳಾಗಿ ಮತಾಂತರ ಹೊಂದಲೇಬೇಕು. ಏಕೆಂದರೆ ಹಿಂದೂಗಳು ಬಹುದೇವತಾ ವಿಶ್ವಾಸಿಗಳಾದ್ದರಿಂದ ಮುಸಲ್ಮಾನರ ಪಾಲಿಗೆ ಅವರು ಖಾಫಿರರಾಗುತ್ತಾರೆ. ಅಂದರೆ ಹುಡುಗಿಯೊಂದಿಗಿನ ಆತನ ಪ್ರೇಮ ಧರ್ಮಕ್ಕಿಂತಲೂ ದೊಡ್ಡದೇನೂ ಆಗಿರಲಿಲ್ಲವೆಂದಾಯ್ತು. ಮತ್ತೀಗ ಅವಳನ್ನು ಮದುವೆಯಾದ ಮೇಲೆ ಇಷ್ಟೂ ದಿನ ಅವಳಿಗಿದ್ದ ಎಲ್ಲ ಸ್ವಾತಂತ್ರ್ಯವನ್ನು ಮುಲಾಜಿಲ್ಲದೇ ಹರಣ ಮಾಡಲಾಗುತ್ತದೆ. ಹಿಂದೂ ಮನೆಗಳಲ್ಲಿ ಮೈತುಂಬ ಬಟ್ಟೆ ಹಾಕಿಕೊಳ್ಳಲು, ಹಣೆಯ ಮೇಲೆ ಕುಂಕುಮವಿಡಲು ಕೇಳಿಕೊಂಡಾಗ ಉರಿದುಬೀಳುವ ಇದೇ ಹೆಣ್ಣುಮಕ್ಕಳು ಮುಸಲ್ಮಾನ ಹುಡುಗನನ್ನು ಮದುವೆಯಾದ ಮರುದಿನದಿಂದ ಹಿಜಾಬ್ ಹಾಕಲು ಶುರುಮಾಡುತ್ತಾರೆ, ಮನೆಯಿಂದ ಹೊರಹೋಗಲು ಬುರ್ಖಾ ಕೂಡ ಧರಿಸಿಬಿಡುತ್ತಾರೆ. ಎಷ್ಟು ವಿಚಿತ್ರವಲ್ಲವೇ? ಪ್ರೇಮಕ್ಕಾಗಿ ಹಿಂದೂ ಹುಡುಗಿ ತನ್ನೆಲ್ಲ ಸ್ವಾತಂತ್ರ್ಯವನ್ನು ಬಲಿ ಕೊಡುತ್ತಾಳೆ, ಆದರೆ ಅದೇ ಪ್ರೇಮಕ್ಕಾಗಿ ಮುಸ್ಲಿಂ ಹುಡುಗ ತಾನು ಯಾವುದನ್ನೂ ಬಿಟ್ಟುಕೊಡುವುದಿಲ್ಲ ಎಂದರೆ ಅದನ್ನು ಒಪು್ಪವುದಾದರೂ ಹೇಗೆ? ಸರಿಸಮವೆಂದು ಸ್ವೀಕರಿಸುವುದಾದರೂ ಹೇಗೆ? ಸ್ವೇಚ್ಛೆಯಿಂದ ತಮ್ಮ ಮನೆಗಳಲ್ಲಿ ಬದುಕಿದ ಹೆಣ್ಣುಮಕ್ಕಳು ಈ ರೀತಿ ಲವ್​ಜಿಹಾದಿಗೆ ಬಲಿಯಾಗಿ ಕೊನೆಗೆ ಆತ್ಮಹತ್ಯೆಗೆ ಶರಣಾಗುವ ಅನೇಕ ಪ್ರಕರಣಗಳು ಕಣ್ಣಮುಂದೆ ಹಸಿರಾಗಿವೆ. ಇನ್ನೂ ಕೆಲವು ಕಡೆಗಳಲ್ಲಿ ತಂದೆ-ತಾಯಿಯರನ್ನು ಧಿಕ್ಕರಿಸಿ ಹೋದ ಹೆಣ್ಣುಮಕ್ಕಳಿಗೆ ಅಲ್ಲಿನ ಪರಿಸ್ಥಿತಿಯನ್ನು ಯಾರಿಗೂ ಹೇಳಿಕೊಳ್ಳಲಾಗದ ಸಂಕಟ ಮನೆಮಾಡಿಕೊಂಡಿರುತ್ತದೆ. ಈ ಜಾಹೀರಾತಿನ ಗಲಾಟೆಯಾದ ನಂತರ ಈ ಬಗೆಯ ಅನೇಕ ಪ್ರಕರಣಗಳು ಹೊರಬರುತ್ತಿವೆ. ಇತ್ತೀಚೆಗೆ ವೈದ್ಯರೊಬ್ಬರು ನಾಲ್ಕನೇ ಹೆರಿಗೆಗೆ ಬಂದಿರುವ ಮುಸ್ಲಿಂ ಹುಡುಗಿಯ ಸಹಜ ಹೆರಿಗೆಗೆ ತಯಾರಿ ನಡೆಸುತ್ತಿರುವಾಗ ತನಗೆ ಸಿ ಸೆಕ್ಷನ್ ಮಾಡಿ ಎಂದು ಆಕೆಯೇ ಕೇಳಿಕೊಂಡಳಂತೆ. ಏಕೆಂದು ಅಚ್ಚರಿಯಿಂದ ವೈದ್ಯರು ಕೇಳಿದ್ದಕ್ಕೆ ಈ ನೆಪದಲ್ಲಿ ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆಯನ್ನು ಯಾರಿಗೂ ಹೇಳದೇ ಮಾಡಿಬಿಡಿ ಎಂದು ಆಕೆ ಗೋಗರೆದಳಂತೆ. ವೈದ್ಯರು ವಿಷಯ ಕೆದಕಿದಾಗಿ ಗೊತ್ತಾಯ್ತು, ಮೂಲತಃ ಮರಾಠಿ ಹೆಣ್ಣುಮಗಳಾಗಿದ್ದ ಆಕೆಯನ್ನು ಪ್ರೀತಿಸಿದಂತೆ ನಟಿಸಿ ಮದುವೆಯಾದ ಮುಸ್ಲಿಂ ಹುಡುಗ, ‘ನಿಮ್ಮ ಜನಾಂಗಕ್ಕೆ ಪಾಠ ಕಲಿಸಬೇಕೆಂದೇ ಮದುವೆಯಾದೆ. ನಿನ್ನ ಹೊಟ್ಟೆಯಲ್ಲಿ ನನ್ನ ಮಕ್ಕಳು ಹುಟ್ಟುವುದನ್ನು ನೋಡಬೇಕೆಂದಿತ್ತು’ ಎಂದನಂತೆ.

    ಇದೆಲ್ಲ ಅರಿವಾಗಿಯೇ ಅಸ್ಸಾಂನ ಮುಖ್ಯಮಂತ್ರಿಗಳು ಲವ್​ಜಿಹಾದಿಗೆ ಕಡಿವಾಣ ಹಾಕುವ ಬಲವಾದ ಮಾತನ್ನಾಡಿದ್ದಾರೆ. ಅತ್ತ ಉತ್ತರಪ್ರದೇಶದಲ್ಲೂ ಯೋಗಿ ಆದಿತ್ಯನಾಥರು ಈ ಕುರಿತಂತಹ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹಾಗಂತ ಇದು ಹಿಂದೂಗಳ ಅಜೆಂಡಾ ಎಂದು ಭಾವಿಸಿಬಿಡಬೇಡಿ. ಲವ್​ಜಿಹಾದ್ ಪದಪ್ರಯೋಗವನ್ನು ವ್ಯಾಪಕಗೊಳಿಸಿದವರು ಬಲಪಂಥೀಯರೇ ಇರಬಹುದು. ಆದರೆ ಆ ಕುರಿತಂತೆ ಮೊದಲ ಆಕ್ರೋಶವನ್ನು ಹೊರಗೆಡವಿದ್ದು ಕೇರಳದ ಕ್ರಿಶ್ಚಿಯನ್ನರೇ. ಅಲ್ಲಿನ ಮುಸಲ್ಮಾನರು ಕ್ರಿಶ್ಚಿಯನ್ ಹೆಣ್ಣುಮಕ್ಕಳನ್ನು ಸೆಳೆದುಕೊಳ್ಳುತ್ತಿರುವ ಪರಿನೋಡಿ ಗಾಬರಿಯಾದ ಆ ಜನ ರಾಷ್ಟ್ರಮಟ್ಟದಲ್ಲಿ ಇದರ ಸುದ್ದಿಯಾಗುವಂತೆ ನೋಡಿಕೊಂಡಿದ್ದರು. ಆನಂತರವೇ ನಾಡು ಈ ವಿಚಾರವಾಗಿ ಎಚ್ಚೆತ್ತಿದ್ದು. ಕೆದುಕುತ್ತ ಹೋದಷ್ಟೂ ಲವ್​ಜಿಹಾದ್ ಆಳಕ್ಕೆ ಹೋಗುತ್ತಿದೆ.

    ಈ ಹಿನ್ನೆಲೆಯಲ್ಲಿಯೇ ತನಿಷ್ಕ್ ಜಾಹೀರಾತು ಆಕ್ರೋಶಕ್ಕೆ ಗುರಿಯಾದದ್ದು. ಜಾಹೀರಾತಿನಲ್ಲಿ ಹಿಂದೂ ಹೆಣ್ಣುಮಗಳನ್ನು ಮುಸಲ್ಮಾನರ ಸೊಸೆ ಎಂದು ತೋರಿಸಿರುವ ಕಂಪನಿ, ಹಿಂದೂ ಅತ್ತೆ ಮುಸ್ಲಿಂ ಸೊಸೆಯನ್ನು ತೋರಿಸಿ ಆಕೆ ಸಿಂಧೂರವಿಟ್ಟುಕೊಂಡು ಗಣೇಶನ ಪೂಜೆಯಲ್ಲಿ ಭಾಗಿಯಾಗಿರುವುದನ್ನು ತೋರಿಸಿದ್ದಿದ್ದರೆ, ಎಷ್ಟು ರಾದ್ಧಾಂತವಾಗುತ್ತಿತ್ತೋ? ಹಿಂದೂಗಳು ಟ್ವಿಟರ್​ನಲ್ಲಿ ಪ್ರತಿಭಟನೆ ಮಾಡಿ ತನಿಷ್ಕ್ ಕ್ಷಮೆ ಕೇಳುವಂತೆ ಮಾಡಿದರು. ಆದರೆ ಈ ಮಳಿಗೆಯವರು ಕ್ಷಮೆ ಕೇಳುವಾಗಲೂ ತಮ್ಮ ಮಳಿಗೆಗಳ ಮತ್ತು ಅಲ್ಲಿ ಕೆಲಸ ಮಾಡುವ ನೌಕರರ ಸುರಕ್ಷತೆ ದೃಷ್ಟಿಯಿಂದ ಕ್ಷಮೆ ಕೇಳುತ್ತಿದ್ದೇವೆ ಎಂದುಬಿಟ್ಟರು! ಇದು ನಿಜಕ್ಕೂ ಅತಿಯಾದಂಥದ್ದೇ. ಎಂದಿಗೂ ಹಿಂಸೆಯನ್ನು ಅಸ್ತ್ರಮಾಡಿಕೊಳ್ಳದ ಹಿಂದೂಗಳ ಕುರಿತಂತೆ ಹೀಗೆ ಹೇಳಿರುವುದು ಆರೋಪವಲ್ಲದೇ ಮತ್ತೇನೂ ಅಲ್ಲ. ರತನ್ ಟಾಟಾ ಒಳ್ಳೆಯವರೇ, ಆದರೇನು ಅವರ ಅಡಿಯಲ್ಲಿ ಕೆಲಸ ಮಾಡುವವರು ಮಾಡಿದ ತಪ್ಪಿನ ಭಾರವನ್ನು ಅವರೇ ಹೊರಬೇಕಲ್ಲ.

    ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಬಹುಕಾಲದ ನಂತರ ಹಿಂದೂಗಳು ಒಗ್ಗಟ್ಟಾಗುವುದನ್ನು ಕಲಿಯುತ್ತಿದ್ದಾರೆ. ಇವರು ಮಾಡುತ್ತಿರುವ ಈ ಶೋಷಣೆಯನ್ನು ಒಟ್ಟಾಗಿ ಎದುರಿಸಬೇಕೆಂಬ ನಿಶ್ಚಯಕ್ಕೆ ಅವರು ಬಂದುಬಿಟ್ಟಿದ್ದಾರೆ. ಎಡಪಂಥೀಯರಲ್ಲಿ ಸಹಿಸಲು ಸಾಧ್ಯವಾಗದೆ ಇರುವ ಸಂಗತಿ ಇದೇ. ಹೀಗಾಗಿಯೇ ಅವರು ಹಿಂದೆಂದಿಗಿಂತಲೂ ಜೋರಾಗಿ ಊಳಿಡುತ್ತಿದ್ದಾರೆ. ಇದು ಶುಭಶಕುನವೇ!

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts