More

    ಸರ್ವಾಂಗೀಣ ವಿಕಸನದಿಂದ ಸಾಧನೆ ಸಾಧ್ಯ

    ವಿಜಯಪುರ: ವಿದ್ಯಾರ್ಥಿಗಳಿಗೆ ಪುಸ್ತಕ ಜ್ಞಾನದ ಜತೆಗೆ ಉತ್ತಮ ಸಂಸ್ಕೃತಿ, ಸಂಸ್ಕಾರವು ಅತ್ಯವಶ್ಯಕ ಎಂದು ಎಕ್ಸಲಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು.

    ನಗರದ ಅಥಣಿ ರಸ್ತೆಯ ಕೆಎಸ್‌ಆರ್‌ಟಿಸಿ ಕಾಲನಿಯಲ್ಲಿರುವ ಎಕ್ಸಲಂಟ್ ಪಪೂ ವಿಜ್ಞಾನ ಕಾಲೇಜಿನಲ್ಲಿ ಕನ್ನೂರಿನ ಶಾಂತಿ ಕುಟೀರದ ಭಾರತೀಯ ಸುರಾಜ್ಯ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಜ್ಞಾನ ಸಂವರ್ಧಿನಿ ಶಿಬಿರ’ ಉದ್ಘಾಟಿಸಿ ಅವರು ಮಾತನಾಡಿದರು.

    ಶೈಕ್ಷಣಿಕ ಸಾಧನೆಯಲ್ಲಿ ರ‌್ಯಾಂಕ್ ಬರುವುದರ ಜತೆಗೆ ಸರ್ವಾಂಗೀಣ ವಿಕಸನವಾದಾಗ ಸರ್ವೋತ್ತಮ ಸಾಧನೆಗಯ್ಯಲು ಸಾಧ್ಯ. ಸ್ವದೇಶಿ ಚಿಂತನೆ, ಧ್ಯಾನ, ಸತ್ಸಂಗ, ಯೋಗ ಇವೆಲ್ಲ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಕಾರಣವಾಗಿವೆ. ಶೈಕ್ಷಣಿಕ ಶಿಬಿರ ಏರ್ಪಡಿಸುವ ಭಾರತೀಯ ಸುರಾಜ್ಯ ಸಂಸ್ಥೆಯ ರೂವಾರಿಗಳಾದ ಕನ್ನೂರಿನ ಗಣಪತರಾವ ಮಹಾರಾಜರು ಅಧ್ಯಾತ್ಮಿಕ ಲೋಕದ ಪ್ರತಿಸೂರ್ಯ ಎಂದು ತಿಳಿಸಿದರು.

    ‘ಜೀವನ ಅಷ್ಟೋತ್ತರ’ ವಿಷಯ ಕುರಿತು ಉಪನ್ಯಾಸ ನೀಡಿದ ಪ್ರಕಾಶ ಪತ್ತಾರ, ದುಶ್ಚಟ, ದುರ್ವ್ಯವಹಾರ ತಿರಸ್ಕರಿಸಿ, ವಿಲಾಸಿ ಜೀವನದಿಂದ ದೂರವಿರಬೇಕು. ಕರ್ತವ್ಯ ನಿಷ್ಠತೆ, ಪ್ರಾಮಾಣಿಕತೆ ಅಹಿಂಸಾ ವೃತ ಪಾಲಿಸಬೇಕು. ಶಾರೀರಿಕ ಶ್ರಮದಾನ, ಸ್ವದೇಶಿ ಚಿಂತನೆ ಹಾಗೂ ಅಧ್ಯಾತ್ಮಿಕತೆಯಲ್ಲಿ ಭಾಗಿಯಾದಾಗ ಮನಸ್ಸು ಪ್ರಸನ್ನಗೊಳ್ಳುತ್ತದೆ. ಆಗ ಸಮಾಜವು ಸ್ವಾಸ್ಥೃವಾಗುತ್ತದೆ ಎಂದರು.

    ಸಂಶೋಧಕ ಡಾ. ಆನಂದ ಕುಲಕರ್ಣಿ ಭಾರತೀಯ ಇತಿಹಾಸ ಕುರಿತು ಉಪನ್ಯಾಸದಲ್ಲಿ ಪುಷ್ಪಕ ವಿಮಾನ, ಅಂಗ ಜೋಡಣೆ, ಪ್ರಣಾಳ ಶಿಶು ಮುಂತಾದ ವಿಷಯಗಳನ್ನು ಭಾರತೀಯರು ಅರಿತಿದ್ದರು. ಜಗತ್ತಿನ ಮೊದಲ ಪ್ರಜಾಪ್ರಭುತ್ವದ ರೂವಾರಿಗಳು ಇಲ್ಲಿನ ಶರಣರು. ತೇಲುವ ಕಲ್ಲಿನಿಂದ ಶ್ರೀರಾಮ ಸೇತುವೆ ನಿರ್ಮಿಸಿದ್ದು ವೈಜ್ಞಾನಿಕ ಸತ್ಯ. ಆದರೆ ಇತಿಹಾಸಕಾರರು ಭಾರತೀಯ ಸಂಸ್ಕೃತಿ ಹಾಗೂ ಇತಿಹಾಸ ತಿರುಚಿ ಬರೆದದ್ದು ನೋವಿನ ವಿಚಾರ. ನಮ್ಮದು ಸೋಲಿನ ಇತಿಹಾಸವಲ್ಲ. ಬದಲಿಗೆ ಸಂಘರ್ಷದ ಇತಿಹಾಸ. ನೈಜ ಇತಿಹಾಸ ಹೇಳಿಕೊಡುವ ಕೆಲಸ ರಾಷ್ಟ್ರೀಯ ಶಿಕ್ಷಣ ನೀತಿ ಮಾಡುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದರು.

    ವ್ಯಕ್ತಿತ್ವ ವಿಕಸನ ತರಬೇತುದಾರ ವಿಶ್ವನಾಥ ಹಿರೇಮಠ ಮಾತನಾಡಿ, ಸೋಲುಗಳಿಗೆ ಹಿಂಜರಿಕೆಯೇ ಕಾರಣ ಸಮರ್ಪಣಾಭಾವದಿಂದ ಕಾರ್ಯವೆಸಗಿದಾಗ ಯಶಸ್ಸು ನಮ್ಮದಾಗುತ್ತದೆ. ವೈಯಕ್ತಿಕ ಕಾರ್ಯಗಳೊಂದಿಗೆ ರಾಷ್ಟ್ರಪ್ರಜ್ಞೆ ಬೆಳೆಸಿಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದರು.

    ಸಾನ್ನಿಧ್ಯವಹಿಸಿದ ನರ್ಮದಾ ಯೋಗಿ ಕೃಷ್ಣಾ ಗುರುಗಳು ಮಾತನಾಡಿ, ಹರಿಯುವ ಮನಸ್ಸನ್ನು ಏಕಾಗ್ರತೆಗೊಳಿಸುವುದೇ ಸತ್ಸಂಗ. ಕೈ ಕಾಲುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದಿದ್ದರೆ ಅಂಗಶಕ್ತಿ ಹೀನವಾಗುತ್ತದೆ. ಹಾಗೇ ಬುದ್ಧಿ ಬಳಕೆ ಮಾಡಿಕೊಳ್ಳದಿದ್ದರೆ ವ್ಯರ್ಥವಾಗುತ್ತದೆ. ನಮ್ಮಲ್ಲಿ ಎಲ್ಲವೂ ಇದೆ ಬಳಸಿಕೊಳ್ಳುವ ಜಾಣ್ಮೆ ಇರಬೇಕು ಎಂದರು.

    ಭಾರತೀಯ ಸುರಾಜ್ಯ ಸಂಸ್ಥೆ ಉಪಾಧ್ಯಕ್ಷ ಶ್ರೀನಿವಾಸ ಕುಲಕರ್ಣಿ ಮಾತನಾಡಿದರು. ಪ್ರಾಚಾರ್ಯ ಡಿ.ಎಲ್. ಬನಸೋಡೆ, ಶರಣಗೌಡ ಪಾಟೀಲ, ವಿವೇಕ ಕುಲಕರ್ಣಿ, ರಾಜೇಶ ಪೋಳ, ಮಹೇಶ ಮೇತ್ರಿ, ಮಂಜುನಾಥ ಬಾಲಗಾಂವ, ಪ್ರಶಾಂತ, ಗೋಪಾಲ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts