More

    ಉತ್ತಮ ವ್ಯಕ್ತಿತ್ವ ರೂಪಿಸಿ ಕಾವ್ಯ ರಚಿಸುವವನೇ ಮಹಾನ್ ಜ್ಞಾನಿ

    ಜಮಖಂಡಿ: ವಿವಿಧ ಜನರ ಭಾವನೆಗಳನ್ನು ಸೇರಿಸಿ ಉತ್ತಮ ವ್ಯಕ್ತಿತ್ವ ರೂಪಿಸಿ ಕಾವ್ಯಗಳನ್ನು ರಚಿಸುವವನೇ ಮಹಾನ್ ಜ್ಞಾನಿಯಾಗಲು ಸಾಧ್ಯ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.

    ನಗರದ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾ ಭವನದಲ್ಲಿ ಬೆಂಗಳೂರಿನ ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಮತ್ತು ಶ್ರೀ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಸಂಪಾದಿತ ಸಮಗ್ರ ದೇವುಡು 5 ಕಾದಂಬರಿಗಳ ಲೋಕಾರ್ಪಣೆ ಹಾಗೂ ಜಮಖಂಡಿ ತಾಲೂಕಿನ ಪ್ರೌಢಶಾಲೆ, ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ಸಮಗ್ರ ದೇವುಡು ಕಾದಂಬರಿಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

    ಹೊಟ್ಟಿಗೆ ಅನ್ನ ಬೇಕು, ನೆತ್ತಿಗೆ ಜ್ಞಾನ ಬೇಕು, ಅಕ್ಷರಗಳ ಮೂಲಕ ಜ್ಞಾನ ನೀಡುವ ಸಾಹಿತಿ ದೇವುಡು ಅವರು. ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ ಎಂದರು.

    ಇಂದು ಪ್ರತಿಯೊಬ್ಬರಲ್ಲಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಬಗ್ಗೆ ವಿಶೇಷತೆ ಇರುತ್ತದೆ. ಎಲೆಮರೆಯ ಕಾಯಿಯಂತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಶ್ರೀ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಮಾಡುತ್ತಿದೆ ಎಂದರು.

    ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ ಮಾತನಾಡಿ, ಲಕ್ಷ್ಮೀ ಸೇವೆಗೆ ಎಲ್ಲರೂ ಪಾತ್ರರಾಗಭಹುದು. ಆದರೆ ಸರಸ್ವತಿ ಸೇವೆ ಮಾಡುವ ಮೂಲಕ ತಾಲೂಕಿನ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರವಿತ ಪ್ರೌಢಶಾಲೆ, ಪದವಿಪೂರ್ವ, ಪದವಿ ಕಾಲೇಜುಗಳಿಗೆ ಸಮಗ್ರ ಕೃತಿಗಳನ್ನು ಉಚಿತವಾಗಿ ನೀಡುತ್ತಿರುವ ಶಾಸಕ ಗುಡುಗುಂಟಿಯವರ ಕಾರ್ಯ ಅಭಿನಂದನಾರ್ಹ ಎಂದರಲ್ಲದೆ, ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕಾದರೆ ದೇವುಡು ಅವರ ಕಾದಂಬರಿಗಳನ್ನು ಓದಬೇಕು ಎಂದರು.

    ಕಥೆ, ಕಾದಂಬರಿಗಳನ್ನು ರಚಿಸುವಾಗ ಸಾಮಾಜಿಕ, ಐತಿಹಾಸಿಕ, ಪೌರಾಣಿಕ ವಿಷಯವನ್ನಾಧರಿಸಿ ರಚಿಸಿದ ಕೃತಿಗಳ ಮೂಲಕ ಜನಮಾನ್ಯರಾದವರು ದೇವುಡು ನರಸಿಂಹಶಾಸಿಗಳು ಎಂದು ಹೇಳಿದರು.

    ಅಥಣಿ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆ ಉಳಿಸಿ ಬೆಳೆಸುತ್ತಿರುವವರು ಮಲ್ಲೇಪುರಂ ಜಿ. ವೆಂಕಟೇಶ ಅವರು. ಸಮಾರಂಭಗಳನ್ನು ಕಾಟಾಚಾರಕ್ಕೆ ಮಾಡದೆ ಲೋಕ ಉದ್ಧಾರಕ್ಕಾಗಿ, ಜ್ಞಾನಾರ್ಜನೆಗಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

    ಅಭಿಮಾನ ಶೂನ್ಯರಾಗಿ ಬದುಕದೇ ಗರ್ವ, ಹೆಮ್ಮೆಯಿಂದ ನಾಡಿನ ಭಾಷೆ, ನೆಲ, ಜಲ, ಸಂಸ್ಕೃತಿಗಾಗಿ ಬದುಕಬೇಕು. ನಾಡಿಗಾಗಿ ಶ್ರಮಿಸಿದವನ್ನು ನೆನೆಯುವ ಕಾರ್ಯವಾಗಬೇಕು. ಸಜ್ಜನರ ಸೇವೆ ಮಾಡುವವರನ್ನು ಹೃದಯತುಂಬಿ ಕೊಂಡಾಡುವ ಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

    ಬಿಜಿ ನಗರ ಪ್ರಥಮದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಟಿ.ಎನ್. ವಾಸುದೇವಮೂರ್ತಿ ಮಾತನಾಡಿದರು. ಕೃತಿಗಳ ಸಂಪಾದಕ, ಕರ್ನಾಟಕ ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ, ಡಾ.ಜೆ.ಪಿ. ದೊಡಮನಿ ಮಾತನಾಡಿದರು. ಬಿ.ಕೆ. ಸುರೇಶ ಉಪಸ್ಥಿತರಿದ್ದರು. ಶ್ರೀ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಧರ್ಮಲಿಂಗಯ್ಯ ಗುಡಗುಂಟಿ ಸ್ವಾಗತಿಸಿದರು. ನಾಗೇಶ ಮಾಲಗಾವಿ ನಿರೂಪಿಸಿದರು. ಡಾ. ಮಲ್ಲಿಕಾರ್ಜುನ ಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts