More

    ₹52 ಕೋಟಿ ಪ್ರೋತ್ಸಾಹಧನ ಬಾಕಿ

    ಜಗನ್ನಾಥ್ ಕಾಳೇನಹಳ್ಳಿ ತುಮಕೂರು
    ತುಮಕೂರು ಹಾಲು ಒಕ್ಕೂಟದ (ತುಮುಲ್)ಲ್ಲಿ ಹಾಲು ಉತ್ಪಾದಕರಿಗೆ ಕಳೆದ ನವೆಂಬರ್‌ನಿಂದ ಪ್ರೋತ್ಸಾಹಧನವೇ ಸಿಕ್ಕಿಲ್ಲ.
    2022 ನವೆಂಬರ್‌ನಿಂದ 2023ರ ಏಪ್ರಿಲ್‌ವರೆಗೆ ರೈತರಿಗೆ ನೀಡಬೇಕಾದ 52 ಕೋಟಿ ರೂ., ಪ್ರೋತ್ಸಾಹಧನವು ತುಮುಲ್‌ನಲ್ಲಿ ಬಾಕಿ ಇದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ಫೆಬ್ರವರಿವರೆಗೆ ಪ್ರೋತ್ಸಾಹಧನ ನೀಡಲಾಗಿದೆ. ಸಾಮಾನ್ಯ ವರ್ಗದ ಉತ್ಪಾದಕರಿಗೆ ನವೆಂಬರ್‌ನಿಂದ ಏಪ್ರಿಲ್‌ವರೆಗೆ ನೀಡಬೇಕಿದೆ. ಪ್ರತೀ ತಿಂಗಳು ಸರಾಸರಿ 9 ರಿಂದ 10 ಕೋಟಿ ರೂ., ಪ್ರೋತ್ಸಾಹಧನವನ್ನು ಉತ್ಪಾದಕರ ಖಾತೆಗೆ ಜಮಾ ಮಾಡಬೇಕಿದೆ.


    ಸರ್ಕಾರಕ್ಕೆ ಇನ್ನಷ್ಟು ಆರ್ಥಿಕ ಹೊರೆ: ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಕೊಟ್ಟಿರುವ ಭರವಸೆಯಂತೆ ಹಾಲಿನ ಪ್ರೋತ್ಸಾಹಧನ ಹೆಚ್ಚಳ ಮಾಡಿದರೆ ಸರ್ಕಾರಕ್ಕೆ ಇನ್ನಷ್ಟು ಆರ್ಥಿಕ ಹೊರೆ ಬೀಳಲಿದೆ. ಪ್ರತೀ ಲೀಟರ್ ಹಾಲಿನ ಪ್ರೋತ್ಸಾಹಧನವನ್ನು 5 ರೂ., ನಿಂದ 7 ರೂಪಾಯಿಗೆ ಹೆಚ್ಚಿಸಿದ್ದೇ ಆದಲ್ಲಿ ಪ್ರತಿನಿತ್ಯ 1.5 ಕೋಟಿ ರೂ., ಹೊರೆ ಬೀಳಲಿದೆ. ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, 2 ರೂ., ಹೆಚ್ಚುವರಿ ಹಣ ನೀಡುವುದಾಗಿ ಹೇಳಿದ್ದು, ಇದರಿಂದ ಪ್ರತಿನಿತ್ಯ 1.5 ಕೋಟಿ ರೂ., ಹೆಚ್ಚು ಹಣ ಹೊಂದಿಸಬೇಕಾದ ಮತ್ತೊಂದು ಸವಾಲು ಸರ್ಕಾರಕ್ಕೆ ಎದುರಾಗಲಿದೆ. ಇದರಿಂದ ವಾರ್ಷಿಕ 500 ರಿಂದ 540 ಕೋಟಿ ರೂ., ಹೊರೆ ಹೊರಬೇಕಾಗಲಿದೆ.


    8.43 ಲಕ್ಷ ಲೀ., ಹಾಲು ಸಂಗ್ರಹ: ತುಮಕೂರು ಸಹಕಾರಿ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ 1338 ಸಂಘಗಳಿದ್ದು, ಪ್ರತಿನಿತ್ಯ ತುಮುಲ್‌ಗೆ 8.43 ಲಕ್ಷ ಲೀ., ಹಾಲು ಹರಿದುಬರುತ್ತಿದೆ. ಹಾಲು ಸಂಗ್ರಹ, ಗ್ರಾಹಕರಿಗೆ ಮಾರಾಟ, ಹಾಲಿನ ಪುಡಿ, ಬೆಣ್ಣೆ ಸೇರಿ ಉತ್ಪನ್ನಗಳ ಮಾರುಕಟ್ಟೆಗೆ ತುಮುಲ್ ಮೇಲೆ ಹೆಚ್ಚಿನ ಆರ್ಥಿಕ ಹೊರೆಬೀಳುತ್ತಿದ್ದು ನಷ್ಟವನ್ನು ಸರಿದೂಗಿಸಿಕೊಂಡು ಹೋಗಲಾಗುತ್ತಿದೆ. ರೈತರ ಮೇಲೆ ಯಾವುದೇ ಹೊರೆ ಹಾಕದಂತೆ ತುಮುಲ್ ಎಚ್ಚರಿಕೆ ಹೆಜ್ಜೆಯನ್ನಿಡುತ್ತಿದೆ. ಹೊಸ ಸರ್ಕಾರ ಹಾಲಿನ ಪ್ರೋತ್ಸಾಹಧನ ಹೆಚ್ಚಳ ಗ್ಯಾರಂಟಿ ಜಾರಿ ಎದುರು ನೋಡುತ್ತಿರುವ ಜತೆಯಲ್ಲಿಯೇ ಹಾಲು ಉತ್ಪಾದಕರು 6 ತಿಂಗಳ ಬಾಕಿ ಹಣದ ನಿರೀಕ್ಷೆಯಲ್ಲಿದ್ದಾರೆ.


    ಸರ್ಕಾರವು ರೈತರಿಗೆ ನೀಡುವ 5 ರೂ., ಪ್ರೋತ್ಸಾಹಧನ ಕಳೆದ ನವೆಂಬರ್‌ನಿಂದ ನೀಡಿಲ್ಲ. ಪ್ರತೀ ತಿಂಗಳು 9 ರಿಂದ 10 ಕೋಟಿ ರೂ., ಉತ್ಪಾದಕರ ಖಾತೆಗೆ ನೇರ ಜಮಾ ಆಗಬೇಕಿದೆ. ಏಪ್ರಿಲ್‌ವರೆಗೆ ಒಟ್ಟು 52 ಕೋಟಿ ರೂ., ಬಾಕಿ ಇದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ಫೆಬ್ರವವರೆಗೆ ಪ್ರೋತ್ಸಾಹಧನ ನೀಡಲಾಗಿದೆ. ಎಲ್ಲ ಹಾಲು ಉತ್ಪಾದಕರಿಗೆ ನೀಡಬೇಕಾಗಿರುವ ಮೊತ್ತದ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಿದ್ದು ಮತ್ತೊಮ್ಮೆ ಗಮನಸೆಳೆಯಲಾಗುವುದು.
    ಸಿ.ವಿ.ಮಹಲಿಂಗಯ್ಯ ತುಮುಲ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts