More

    ಹಿರಿಯ ನಾಗರಿಕರ ದಿನಾಚರಣೆ ಯಲ್ಲಿ ಬೇಡಿಕೆಗಳ ಮಂಡನೆ – ಬಸ್‌ಗಳಲ್ಲಿ ರಿಯಾಯಿತಿ ಶೇ.50ಕ್ಕೆ ಹೆಚ್ಚಿಸಿ.

    ದಾವಣಗೆರೆ: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ಈಗಿರುವ ಬಸ್ ಪ್ರಯಾಣದ ದರದ ರಿಯಾಯಿತಿಯನ್ನು ಶೇ.25ರಿಂದ ಶೇ.50ಕ್ಕೆ ಹೆಚ್ಚಿಸಿ. ಐರಾವತ/ ವಿದ್ಯುತ್‌ಚಾಲಿತ ಹವಾನಿಯಂತ್ರಿತ ಸಾರಿಗೆಯಲ್ಲೂ ಇದನ್ನು ವಿಸ್ತರಿಸಿ.
    ನಗರದ ಪದ್ಮಶ್ರೀ ಚಿಂದೋಡಿಲೀಲಾ ಕಲಾ ಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬೇಡಿಕೆಗಳನ್ನು ಮಂಡಿಸಲಾಯಿತು.
    ಬಸ್ಸು- ರೈಲ್ವೆ ನಿಲ್ದಾಣ, ಆಸ್ಪತ್ರೆ, ಬ್ಯಾಂಕ್, ಅಂಚೆ ಹಾಗೂ ಸಾರ್ವಜನಿಕ ಕಚೇರಿಗಳಲ್ಲಿ ಪ್ರತ್ಯೇಕ ಕೌಂಟರ್ ತೆರೆಯಬೇಕು. ಜ್ಯೋತಿ ಸಂಜೀವಿನಿ ಮೊದಲಾದ ಆರೋಗ್ಯ ಯೋಜನೆಗಳನ್ನು ಆಧಾರ್‌ಕಾರ್ಡ್-ಗುರುತಿನ ಚೀಟಿಯುಳ್ಳ ಹಿರಿಯರಿಗೆ ಮಂಜೂರು ಮಾಡಬೇಕು.
    ವಾರ್ಡ್‌ಗೆ ಒಂದರಂತೆ ಹಾಮ್‌ಕಾಮ್ಸ್ ಮಳಿಗೆ ತೆರೆದು ಹಿರಿಯರು, ಹೆಣ್ಣುಮಕ್ಕಳಿಗೆ ಸೂಕ್ತ ದರದಲ್ಲಿ ಹಾಲು-ಹಣ್ಣು, ತರಕಾರಿ ನೀಡಬೇಕು. ವಾರ್ಡ್‌ವಾರು ಮಕ್ಕಳಿಗಾಗಿ ಆಟದ ಮೈದಾನ, ಮಿನಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಬೇಕು. ದಾವಣಗೆರೆಯ ಜಿಲ್ಲಾ ಹಿರಿಯ ನಾಗರಿಕರ ಸಂಘಕ್ಕೆ ನಿವೇಶನ ಕಲ್ಪಿಸಬೇಕು.
    ಬಾಪೂಜಿ ವಿದ್ಯಾಸಂಸ್ಥೆಯ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಶೇ.50ರ ರಿಯಾಯಿತಿ ದರದಲ್ಲಿ ನೀಡುತ್ತಿದ್ದ ಚಿಕಿತ್ಸೆ ರದ್ದುಪಡಿಸಲಾಗಿದ್ದು, ಇದನ್ನು ಮುಂದುವರಿಸಬೇಕು ಎಂದು ಹಿರಿಯ ನಾಗರಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್. ಗುರುಮೂರ್ತಿ ಆಗ್ರಹಿಸಿದರು.
    ಬಾರದ ಜನಪ್ರತಿನಿಧಿಗಳು
    ಆಹ್ವಾನಪತ್ರಿಕೆಯಲ್ಲಿ ನಮೂದಿಸಿದ್ದ ಜನಪ್ರತಿನಿಧಿಗಳಲ್ಲಿ ಯಾರೊಬ್ಬರೂ ಹಾಜರಿರಲಿಲ್ಲ. ಜಿಲ್ಲಾಧಿಕಾರಿ, ಎಸ್ಪಿ, ಜಿಪಂ ಸಿಇಒ ಕೂಡ ಗೈರಾಗಿದ್ದರು. ವೇದಿಕೆಯಲ್ಲಿದ್ದ ಅತಿಥಿಯೊಬ್ಬರು ಈ ಬಗ್ಗೆ ಬಹಿರಂಗವಾಗಿ ವಿಷಾದಿಸಿ ‘ಹಿರಿಯ ನಾಗರಿಕರ ಬಗ್ಗೆ ಎಲ್ಲರಿಗೂ ಕಾಳಜಿ ಬೇಕು’ ಎಂದು ಮಾತಿನಲ್ಲೇ ಚುಚ್ಚಿದರು.
    ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಮಾತನಾಡಿ ಬಾಲ್ಯ, ಯೌವನ ಹಾಗೂ ವೃದ್ಧಾಪ್ಯ ಯಾರಿಗೂ ತಪ್ಪಿದ್ದಲ್ಲ. ಜೀವಿತ ಕ್ರಮದಲ್ಲಿ ಇವು ಅನಿವಾರ್ಯ. ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡಲ್ಲಿ ಬದುಕು ಸಂತೃಪ್ತಿಯಿಂದ ಇರಲಿದೆ ಎಂದು ಹೇಳಿದರು. ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿಯೂ ಹೇಳಿದರು.
    ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಪನಿರ್ದೇಶಕ ಡಾ.ಕೆ.ಕೆ.ಪ್ರಕಾಶ್ ಮಾತನಾಡಿ ಜಿಲ್ಲೆಯಲ್ಲಿ 18765 ಮಂದಿ ಇಂದಿರಾಗಾಂಧಿ ವೃದ್ಧಾಪ್ಯ ವೇತನ ಹಾಗೂ 39060 ಜನರು ಸಂಧ್ಯಾಸುರಕ್ಷಾ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
    ಜಿಲ್ಲಾ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎಸ್.ಟಿ.ಕುಸುಮಶ್ರೇಷ್ಠಿ ಮಾತನಾಡಿ ಮಕ್ಕಳ, ಮೊಮ್ಮಕ್ಕಳ ಜನ್ಮದಿನ ಆಚರಿಸುವ ನಾವಿಂದು ನಮ್ಮ ದಿನಾಚರಣೆ ಮಾಡಿಕೊಳ್ಳಬೇಕಾದ ಸ್ಥಿತಿ ಬಂದಿದೆ. ವಿಭಕ್ತ ಕುಟುಂಬಗಳಲ್ಲಿ ಮಕ್ಕಳು ಪಾಲಕರನ್ನು ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ ಎಂದು ವಿಷಾದಿಸಿದರು.
    ಜಿಲ್ಲಾಡಳಿತ, ಜಿಪಂ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಜೆ. ಭರತರಾಜ್, ಹಿರಿಯ ನಾಗರಿಕ ಜಯಣ್ಣ ಇತರರಿದ್ದರು.
    ಶತಾಯುಷಿಗಳಾದ ಈಶ್ವರಾಚಾರ್, ನಂಜಪ್ಪ ಹಾಗೂ ಕುಂದುವಾಡದ ಶೇಖ್ ಅಹ್ಮದ್ ಅವರನ್ನು ಸನ್ಮಾನಿಸಲಾಯಿತು. ಗೀತಗಾಯನ ಹಾಗೂ ಕ್ರೀಡಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
    138 ಮಂದಿ ಆರೋಗ್ಯ ತಪಾಸಣೆ
    ಕಾರ್ಯಕ್ರಮಕ್ಕೂ ಮುನ್ನ ಎಸ್‌ಎಸ್ ಕೇರ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಆರೋಗ್ಯ ಶಿಬಿರಕ್ಕೆ ಟ್ರಸ್ಟ್‌ನ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು. 138 ಹಿರಿಯ ನಾಗರಿಕರು ವಿವಿಧ ತಪಾಸಣೆ ಮಾಡಿಸಿಕೊಂಡರು. ಬಾಪೂಜಿ ಆಸ್ಪತ್ರೆ ವೈದ್ಯರು, ಶುಶ್ರೂಷಕರು, ಸಿಬ್ಬಂದಿ ಇದನ್ನು ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts