More

    ಹಾಸನ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ

    ಹಾಸನ: ಮಳೆ ಅಭಾವದಿಂದ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದು, ನಗರಸಭೆಗೆ ಇತ್ತೀಚೆಗೆ ಹೊಸದಾಗಿ ಸೇರ್ಪಡೆಯಾದ ಒಂಬತ್ತು ಗ್ರಾಮ ಪಂಚಾಯಿತಿಯ 25 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಕಲ್ಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
    ನಗರದ 35 ವಾರ್ಡ್‌ಗಳಿಗೆ ನಿತ್ಯ 34 ಎಂಎಲ್‌ಡಿ ನೀರನ್ನು ಗೊರೂರಿನ ಹೇಮಾವತಿ ನದಿಯಿಂದ ಪೈಪ್‌ಲೈನ್ ಮೂಲಕ ತರಿಸಿಕೊಳ್ಳಲಾಗುತ್ತಿದೆ. ಈ ವಾರ್ಡ್‌ಗಳಲ್ಲಿ ನೀರಿಗೆ ಅಷ್ಟಾಗಿ ಸಮಸ್ಯೆ ಎದುರಾಗಿಲ್ಲವಾದರೂ ನಗರಸಭೆ ವ್ಯಾಪ್ತಿಗೆ ಇತ್ತೀಚೆಗೆ ಸೇರಿದ ಗ್ರಾಮೀಣ ಜನರ ಪರಿಸ್ಥಿತಿ ಹೇಳತೀರದಾಗಿದೆ.
    ನಗರಸಭೆ ವ್ಯಾಪ್ತಿಯಲ್ಲಿ 1.50 ಲಕ್ಷ ಜನಸಂಖ್ಯೆ ಇದ್ದರೆ, 9 ಗ್ರಾಮ ಪಂಚಾಯಿತಿಯ 25 ಹಳ್ಳಿಗಳಲ್ಲಿ ಜನಸಂಖ್ಯೆ 1.15 ಲಕ್ಷ ಇದೆ. ನಗರ ಸಮೀಪದ ಬಿ.ಕಾಟಿಹಳ್ಳಿ, ಸತ್ಯಮಂಗಲ, ತಮ್ಲಾಪುರ, ಉದ್ದೂರು, ಹನುಮಂತಪುರ ಹೀಗೆ ವಿವಿಧ ಹಳ್ಳಿಗಳಿಗೆ ನಿತ್ಯ 3 ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದು, ಖಾಸಗಿ ಬೋರ್‌ವೆಲ್‌ಗಳ ಬಾಡಿಗೆಗೆ ನಗರಸಭೆ ಮೊರೆ ಹೋಗಿದೆ. ನಗರಸಭೆ ಅಡಿಯಲ್ಲಿ ಒಟ್ಟು 209 ಬೋರ್‌ವೆಲ್‌ಗಳಿವೆ. ಅದರಲ್ಲಿ 25 ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿವೆ. ಸ್ಥಗಿತಗೊಂಡ ಬೋರ್‌ವೆಲ್‌ಗಳ ವ್ಯಾಪ್ತಿಯಲ್ಲಿ ಪರ್ಯಾಯವಾಗಿ ಖಾಸಗಿ ಬೋರ್‌ವೆಲ್‌ಗಳನ್ನು ಹುಡುಕುವ ಪ್ರಕ್ರಿಯೆ ನಡೆಯುತ್ತಿದ್ದು, ಜಿಲ್ಲಾ ಪಂಚಾಯಿತಿ ನಿಯಮಾವಳಿ ಅನ್ವಯ ಪ್ರತಿ ತಿಂಗಳು 9 ರಿಂದ 12 ಸಾವಿರ ರೂ.ಗಳನ್ನು ಮಾಲೀಕರಿಗೆ ಪಾವತಿಸಲಾಗುತ್ತಿದೆ.

    ಅಗ್ನಿ ಶಾಮಕ ವಾಹನಗಳಿಗೂ ನೀರಿಲ್ಲ:
    ನಗರದ ಬಿಎಂ ರಸ್ತೆಯಲ್ಲಿರುವ ಜಿಲ್ಲಾ ಅಗ್ನಿ ಶಾಮಕ ಕಚೇರಿ ಆವರಣದಲ್ಲಿದ್ದ ಎರಡೂ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ಜಲ ವಾಹನಗಳಿಗೆ ನೀರು ಪೂರೈಸಲೂ ಸಾಧ್ಯವಾಗುತ್ತಿಲ್ಲ. ಹೊಸದಾಗಿ ಬೋರ್‌ವೆಲ್ ಕೊರೆಸಲು ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದ್ದು, ಶೀಘ್ರದಲ್ಲೇ ಜಿಲ್ಲಾಡಳಿತದಿಂದ ಅನುಮೋದನೆ ಪಡೆದು ಹೊಸ ಬೋರ್‌ವೆಲ್ ಕೊರೆಸಲಾಗುವುದು. ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಲು ಸಾಧ್ಯವಾಗದ ಕಾರಣ ಭಾರೀ ತೊಂದರೆಯಾಗುತ್ತಿದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಜಾನುವಾರು ಮಾರಬೇಕಾದ ಪರಿಸ್ಥಿತಿ:
    ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿರುವ ಹಿನ್ನಲೆಯಲ್ಲಿ ರೈತರು ಜಾನುವಾರುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅವಲತ್ತುಕೊಂಡಿದ್ದಾರೆ. ಮಳೆ ಇಲ್ಲದೆ ಯಾವ ಬೆಳೆಯನ್ನು ಮಾಡಿಲ್ಲ. ದನ- ಕರುಗಳಿಗೆ ಹಾಕಲು ಮೇವಿಲ್ಲ. ಜತೆಗೆ ಕುಡಿಯಲು ನೀರು ಸಹ ಇಲ್ಲ. ಹೀಗಾಗಿ ರಾಸುಗಳನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ತಮ್ಲಾಪುರದ ರೈತರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

    ಹೇಮಾವತಿ ಸ್ಥಿತಿ ಗತಿ:
    ಜಿಲ್ಲೆಯ ಜೀವನಾಡಿ ಹೇಮಾವತಿ ನದಿಯಲ್ಲೂ ನೀರಿನ ಮಟ್ಟ ಕುಸಿಯುತ್ತಿದೆ. 37 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 9.28 ಟಿಎಂಸಿ ನೀರು ಸಂಗ್ರಹವಿದ್ದು, 5 ಟಿಎಂಸಿ ಮಾತ್ರ ಬಳಕೆಗೆ ಸಿಗಲಿದೆ. ಜಿಲ್ಲೆಯಲ್ಲಿ ಮಂಗಳವಾರ ಮಳೆಯಾದರೂ ಹೇಳಿಕೊಳ್ಳುವಂತಹ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿಲ್ಲ. ಮುಂದೆಯೂ ಮಳೆಯಾಗದೆ ಬಿಸಿಲಿನ ತೀವ್ರತೆ ಹೆಚ್ಚಾದರೆ ಹೇಮಾವತಿಯೂ ಬರಿದಾಗಲಿದ್ದು ಕುಡಿಯುವ ನೀರಿಗೆ ಪರಿಹಾರ ಏನು ಎಂಬ ಚಿಂತೆ ಕಾಡತೊಡಗಿದೆ.

    ಹಾಸನ ನಗರದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ನಗರಸಭೆಗೆ ಇತ್ತೀಚೆಗೆ ಸೇರ್ಪಡೆಯಾದ ನಗರದ ಹೊರವಲಯದ 25 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅವುಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ವಿಶ್ವೇಶ್ವರ ಬಡಾವಣೆಯಲ್ಲೂ ಸಮಸ್ಯೆ ಇತ್ತು. ಮಂಗಳವಾರ ಖಾಸಗಿ ಬೋರ್‌ವೆಲ್ ಬಾಡಿಗೆಗೆ ಪಡೆಯಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗಿದೆ.

    • ಸಿ. ಯೋಗೇಂದ್ರ ಆಯುಕ್ತ, ಹಾಸನ ನಗರಸಭೆ

    ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸದ್ಯ ಸಮಸ್ಯೆ ಇಲ್ಲವಾದರೂ 25 ಗ್ರಾಮಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಬೋರ್‌ವೆಲ್ ಕೊರೆಸಿದರೂ ಪ್ರಯೋಜನವಾಗುತ್ತಿಲ್ಲ. ಬರ ನಿರ್ವಹಣೆಗೆ ಅನುದಾನದ ಕೊರತೆಯಿಲ್ಲ. ಸದ್ಯ ನಗರಸಭೆ ಹಣದಿಂದಲೇ ಟ್ಯಾಂಕರ್‌ಗಳ ಖರ್ಚು ನಿಭಾಯಿಸುತ್ತಿದ್ದು, ಅವಶ್ಯಕತೆ ಎದುರಾದರೆ ಜಿಲ್ಲಾಡಳಿತದಿಂದ ಪಡೆಯಲಾಗುವುದು.

    • ರಂಗಸ್ವಾಮಿ ಇಂಜಿನಿಯರ್ ನಗರಸಭೆ ಹಾಸನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts