More

    ಹಳ್ಳಿಗಳಲ್ಲಿ ಇನ್ನೂ ನಿಲ್ಲದ ಅಸ್ಪಶ್ಯತೆ ಆಚರಣೆ




    ಮೈಸೂರು: ಕೆ.ಆರ್.ನಗರತಾಲೂಕಿನ ಕೆಲವು ಹಳ್ಳಿಗಳಲ್ಲಿ ಇನ್ನೂ ಅಸ್ಪಶ್ಯತೆ ಆಚರಣೆ ನಿಂತಿಲ್ಲ. ದಲಿತ ಸಮುದಾಯದವರಿಗೆ ಹೋಟೆಲ್ ಮತ್ತು ಸಲೂನ್‌ಗಳಲ್ಲಿ ಪ್ರವೇಶ ನೀಡುತ್ತಿಲ್ಲ ಎಂದು ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಎಂ.ಲೋಕೇಶ್ ದೂರಿದರು.
    ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತರಕ್ಷಣಾ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ದೂರುಗಳು ಸಭೆಗಳಿಗೆ ಮಾತ್ರ ಸೀಮಿತವಾಗಬಾರದು. ತಿಪ್ಪೂರು, ದೆಗ್ಗನಹಳ್ಳಿ, ಹೆಬ್ಬಾಳು ಗ್ರಾಮಗಳು ಸೇರಿದಂತೆ ಇನ್ನು ಕೆಲವು ಗ್ರಾಮಗಳಲ್ಲಿ ಜಾತಿ ತಾರತಮ್ಯ, ಅವಹೇಳನಕಾರಿ ಘಟನೆಗಳು ಜರುಗುತ್ತಲೆ ಇವೆ. ಗ್ರಾಮೀಣ ಪ್ರದೇಶದಲ್ಲಿ ಅಸ್ಪಸ್ಯತೆ ಆಚರಣೆ ವಿರುದ್ಧ ಕರಪತ್ರಗಳು ಹಂಚಿ, ನಾಮಫಲಕಗಳನ್ನು ಅಳವಡಿಸಿ ಜನಸಾಮಾನ್ಯರಲ್ಲಿ ಕಾನೂನಿನ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.


    ಇದಕ್ಕುತ್ತರಿಸಿದ ವೃತ್ತನಿರೀಕ್ಷಕ ರೇವಣ್ಣ, ದೂರುಕೇಳಿ ಬಂದಿರುವ ಗ್ರಾಮಗಳಿಗೆ ಸ್ವತಃ ನಮ್ಮ ಇಲಾಖೆಯಿಂದಲೇ ಕರಪತ್ರ ಮಾಡಿಸಿ ಹಂಚುವ ಜತೆಗೆ ಸಭೆಗಳನ್ನು ಮಾಡಿ ಅಸ್ಪಶ್ಯತೆ ಆಚರಣೆ ಕಾನೂನುಬಾಹಿರ ಎಂಬುದನ್ನು ಮನದಟ್ಟು ಮಾಡಿಕೊಡುವುದಾಗಿ ಭರವಸೆ ನೀಡಿದರು.


    ಪುರಸಭಾ ಮಾಜಿ ಅಧ್ಯಕ್ಷ ಡಿ.ಕಾಂತರಾಜ್ ಮಾತನಾಡಿ, ಮಾರ್ಚಹಳ್ಳಿ ಗ್ರಾಮದ ಬಳಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಅದರ ಮಾಲೀಕ ಪಕ್ಕದಲ್ಲಿರುವ ದಲಿತರೊಬ್ಬರ ಜಮೀನನ್ನು ಆಕ್ರಮಿಸಿಕೊಂಡು ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾನೆ. ಇದನ್ನು ಪ್ರಶ್ನಿಸಿದ ದಲಿತ ಕುಟುಂಬದವರ ಮೇಲೆ ದಬ್ಬಾಳಿಕೆ, ಸುಳ್ಳು ಕೇಸುಗಳನ್ನು ಹಾಕಿಸುತ್ತಾ ದೌರ್ಜನ್ಯವೆಸಗುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ನೀವು ಕ್ರಮ ಕೈಗೊಂಡು ಅನ್ಯಾಯಕೊಳಗಾಗಿರುವ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ನಂತರ ಕ್ರಮ ಕೈಗೊಳ್ಳುವುದಾಗಿ ಸಿಪಿಐ ರೇವಣ್ಣ ಭರವಸೆ ನೀಡಿದರು.


    ರೈಲ್ವೆ ನಿಲ್ದಾಣ ಸಮೀಪದಲ್ಲಿ ಕೆಲವರು ಜೂಜಾಡುತ್ತಿದ್ದಾರೆ. ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಕಳ್ಳತನ ಪ್ರಕರಣಗಳು ಜರುಗುತ್ತಿದ್ದರೂ ಪತ್ತೆಯಾಗದೆ ಇರುವುದು ದೂರುದಾರರು ಮತ್ತು ಜನರಿಗೆ ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇಲ್ಲದಂತಾಗಿದೆ ಎಂದು ತಾಪಂ ಮಾಜಿ ಸದಸ್ಯ ಶ್ರೀನಿವಾಸಪ್ರಸಾದ್, ಆಮ್ ಆದ್ಮಿ ಪಕ್ಷದ ಮುಖಂಡ ಮುರುಗೇಶ್ ದೂರಿದರು.


    ತಾಲೂಕಿನ ಗಳಿಗೆಕೆರೆ ಜಾತ್ರೆಯಲ್ಲಿ ಪ್ರತಿವರ್ಷ ಕೆಲವು ಕಿಡಿಗೇಡಿಗಳಿಂದ ದೊಡ್ಡಕೊಪ್ಪಲು ಮತ್ತು ಗಳಿಗೆಕೆರೆ ಗ್ರಾಮಗಳ ಜನರ ನಡುವೆ ಗಲಾಟೆ ನಡೆಯುತ್ತಲ್ಲೇ ಬರುತ್ತಿದ್ದು, ಜಾತ್ರೆ ಮಾರ್ಚ್ ತಿಂಗಳಲ್ಲಿ ಜರುಗಲಿದೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮುಖಂಡ ಬೈರನಾಯಕ ಕೋರಿದರು.


    ಅರ್ಕನಾಥ ರಸ್ತೆಯ ಮಹೇಂದ್ರ ಮೆಡಿಸನ್ ಮುಂಭಾಗ ಸ್ಕೂಟರ್ ಮೆಕಾನಿಕ್ ಶಾಪ್ ಇದ್ದು, ರಸ್ತೆ ಮಧ್ಯೆಯೇ ಬೈಕ್‌ಗಳನ್ನು ನಿಲ್ಲಿಸಿಕೊಂಡು ರಿಪೇರಿ ಮಾಡುವುದರಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಶಾಲಾ, ಕಾಲೇಜಿಗೆ ಚಕ್ಕರ್ ಹಾಕಿ ಕೆಲವು ಯುವಕ, ಯುವತಿಯರು ಮಹಾತ್ಮ ಗಾಂಧಿ ಉದ್ಯಾನದಲ್ಲಿ ಹಾಗೂ ಸ್ಟೇಡಿಯಂ ಬಳಿ ಕೂತು ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ. ಇದರಿಂದಾಗಿ ಇತರರಿಗೆ ಮುಜುಗರವಾಗುತ್ತಿದ್ದು, ಇದನ್ನು ತಪ್ಪಿಸುವಂತೆ ದೂರುಗಳು ಕೇಳಿ ಬಂದವು.
    ಸಿಪಿಐ ರೇವಣ್ಣ ಮಾತನಾಡಿ, ಶೀಘ್ರವಾಗಿ ದೊಡ್ಡಕೊಪ್ಪಲು ಮತ್ತು ಗಳಿಗೆಕೆರೆ ಗ್ರಾಮಗಳಲ್ಲಿ ಸಭೆ ಮಾಡಿ ಜಾತ್ರೆಯಲ್ಲಿ ಯಾವುದೇ ಗಲಾಟೆಗಳು ನಡೆಯದಂತೆ ಕ್ರಮಕೈಗೊಳ್ಳುತ್ತೇನೆ. ಕೆಲವೆಡೆ ಇನ್ನು ಕೂಡ ನ್ಯಾಯ ಪಂಚಾಯಿತಿ ಹೆಸರಿನಲ್ಲಿ ದಂಡ ವಿಧಿಸುವುದು, ಶಿಕ್ಷೆ ನೀಡುವುದು, ಸಾಮಾಜಿಕ ಬಹಿಷ್ಕಾರ ಹಾಕುವುದು ನಡೆಯುತ್ತಿವೆ. ಇದು ಕಾನೂನಿನ ಪ್ರಕಾರ ಅಪರಾಧವಾಗಿದೆ. ತಿಳಿವಳಿಕೆ ಮತ್ತು ಬುದ್ಧಿ ಹೇಳಲು ಮಾತ್ರ ಪಂಚಾಯಿತಿ ಮಾಡಿಕೊಳ್ಳಿ. ಈ ಬಗ್ಗೆ ದೂರು ಕೇಳಿ ಬಂದರೆ ಪಂಚಾಯಿತಿದಾರರು, ಅಲ್ಲಿನ ಮುಖ್ಯಸ್ಥರನ್ನೇ ನೇರವಾಗಿ ಹೊಣೆ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.


    ಅಕ್ರಮವಾಗಿ ಮದ್ಯ ಮಾರಾಟ, ಜೂಜಾಟ, ವೇಶ್ಯಾವಾಟಿಕೆ ಸೇರಿದಂತೆ ಸಮಾಜಘಾತುಕ ಚಟುವಟಿಕೆಗಳು ಕಂಡುಬಂದರೆ ಕೂಡಲೇ ನನ್ನ ಫೋನ್ ನಂಬರಿಗೆ ಕರೆ ಮಾಡಿ ಖಚಿತ ಮಾಹಿತಿ ನೀಡಿ. ಸುಳಿವುದಾರರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ. ಹೆಚ್ಚಿನ ಅವಶ್ಯಕತೆ ಇರುವ ಸ್ಥಳಗಳಲ್ಲಿ ಹೆಚ್ಚಿನ ಗಸ್ತು ಮಾಡಲಾಗುವುದು. ಇಂದು ಕೇಳಿಬಂದ ದೂರುಗಳಿಗೆ ಕ್ರಮ ಕೈಗೊಂಡು ಪರಿಹರಿಸುವ ಜತೆಗೆ ಮುಂದಿನ ಸಭೆಯಲ್ಲಿ ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.
    ಸಭೆಯಲ್ಲಿ ಪುರಸಭಾ ಸದಸ್ಯ ಶಿವುನಾಯಕ್, ಮುಖಂಡರಾದ ಲೋಕೇಶ್, ಡಿ.ಕೆ.ಕೊಪ್ಪಲು ರಾಜಯ್ಯ, ವಿಜಯ್, ಮಂಜುನಾಥ್, ಎಂ.ಎಸ್.ಮಹದೇವ್, ವಜ್ರೇಶ್, ಪೊಲೀಸ್ ಸಿಬ್ಬಂದಿ ಮಂಜು, ಪುನಿತ್, ಜವರೇಶ್, ಮನು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts