More

    ಸಿಎಂ ನಡೆ ಖಂಡಿಸಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ

    ಮದ್ದೂರು: ರೈತರ ಸಮಸ್ಯೆಗಳಿಗೆ ಸ್ಪಂದಿಸದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡೆ ಖಂಡಿಸಿ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸಮೀಪದ ಸೋಮನಹಳ್ಳಿಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.


    ಹೆದ್ದಾರಿಗೆ ಅಡ್ಡಲಾಗಿ ಟ್ರಾೃಕ್ಟರ್, ಜೀಪು ಹಾಗೂ ಎತ್ತಿನ ಗಾಡಿಗಳನ್ನು ನಿಲ್ಲಿಸಿ, ಕಬ್ಬಿನ ಜಲ್ಲೆಗಳನ್ನು ಹಿಡಿದುಕೊಂಡು ರಾಸುಗಳ ಸಮೇತ 1 ಗಂಟೆಗೂ ಅಧಿಕ ಕಾಲ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತು. ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


    ರೈತ ಸಂಘದ ಹಿರಿಯ ಮುಖಂಡ ಲಿಂಗಪ್ಪಾಜಿ ಮಾತನಾಡಿ, ಜು.11 ರಂದು ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಒಂದು ವಾರದೊಳಗೆ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಈ ಮೂಲಕ ಅವರಿಗೆ ರೈತರ ಬಗ್ಗೆ ಯಾವುದೇ ಕಾಳಜಿಯಿಲ್ಲ ಎಂಬುದು ಸಾಬೀತಾಗಿದೆ ಎಂದು ಆರೋಪಿಸಿದರು.


    ಪ್ರತಿ ಟನ್ ಕಬ್ಬಿಗೆ 4500 ರೂ. ನಿಗದಿ ಮಾಡಬೇಕು. ಹಳೇ ಬಾಕಿ ಪಾವತಿಸಬೇಕು. ಎಸ್.ಎ.ಪಿ. ದರ ಘೋಷಣೆ ಮಾಡಬೇಕು. ಎಫ್.ಆರ್.ಪಿ. ನಿಗದಿಗೆ 8.5 ಇಳುವರಿ ಮಾನದಂಡ ಮಾಡಬೇಕು. ಕೆ.ಆರ್.ಎಸ್. ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಹಾಗೂ ಕೆ.ಆರ್.ಎಸ್.ಗೆ ಸಂರ್ಪಕ ಕಲ್ಪಿಸುವ ಎಲ್ಲ ನಾಲೆಗಳ 1 ಕಿ.ಮೀ. ಅಂತರದಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು.


    ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತ ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ರೈತ ಸಂಘದ ತಾಲೂಕು ಅಧ್ಯಕ್ಷ ರಾಮಕೃಷ್ಣ, ಮುಖಂಡರಾದ ಜಿ.ಎ.ಶಂಕರ್, ಗೊಲ್ಲರದೊಡ್ಡಿ ಅಶೋಕ್, ಪುಟ್ಟಸ್ವಾಮಿ, ರವಿಕುಮಾರ್, ವರದರಾಜು, ವಿನೋದ್ ಬಾಬು, ಮಲ್ಲಯ್ಯ, ರಾಜು, ಚಂದನ, ಉಮೇಶ್, ಶೋಭಾ, ಶಿಲ್ಪಾ, ರತ್ನಮ್ಮ, ಕೃಷ್ಣಯ್ಯ, ದೊಡ್ಡಮರಿಯಣ್ಣ, ಸುನೀಲ್, ಪುಟ್ಟಸ್ವಾಮಿ, ಕೊಪ್ಪ ಗುರು ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts