More

    ಸಾಲದ ಹಣದಲ್ಲಿ ಷೇರು ಪಡೆದರೆ ಸೂಪರ್‌ಸೀಡ್ !

    ಚಿಕ್ಕಬಳ್ಳಾಪುರ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್ ಸಾಲದ ಹಣದಲ್ಲಿ ಶೇ.20 ಷೇರು ಪಡೆಯುತ್ತಿರುವುದರ ವಿರುದ್ಧ ಕಿಡಿಕಾರಿರುವ ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್, ರಾಜಕೀಯ ಪ್ರೇರಿತ ವರ್ತನೆ ಮತ್ತು ನಿಯಮಬಾಹಿರ ಕೆಲಸ ಬಿಡದಿದ್ದಲ್ಲಿ ಸೂಪರ್ ಸೀಡ್ ಮಾಡುವ ಎಚ್ಚರಿಕೆ ನೀಡಿದ್ದಾರೆ.

    ನಗರದ ಹೊಸ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಶುಕ್ರವಾರ ಸ್ವಸಹಾಯ ಸಂಘಗಳಿಗೆ ಡಿಸಿಸಿ ಬ್ಯಾಂಕಿನಿಂದ ಸಾಲ ವಿತರಣೆ ಮಾಡಿ ಮಾತನಾಡಿದರು.ಫಲಾನುಭವಿಗಳು ಸ್ವಯಂ ಉದ್ಯೋಗದ ಮೂಲಕ ಆರ್ಥಿಕಾಭಿವೃದ್ಧಿ ಹೊಂದಲು ಡಿಸಿಸಿ ಬ್ಯಾಂಕಿನಲ್ಲಿ ಸಾಲ ಪಡೆಯುತ್ತಿದ್ದಾರೆ. ಆದರೆ, ಇದರಲ್ಲಿ ಶೇ.20 ಷೇರು ಪಡೆದುಕೊಳ್ಳುವುದು ಸರಿಯಲ್ಲ. ಇದರಿಂದ ಫಲಾನುಭವಿಗಳಿಗೆ ಸಾಲದ ಲಾಭ ಹೇಗೆ ಸಿಗುತ್ತದೆ? ಎಂದು ಪ್ರಶ್ನಿಸಿದರು.

    ಡಿಸಿಸಿ ಬ್ಯಾಂಕ್ ಯಾರ ಸ್ವಂತದ್ದಲ್ಲ. ಅದು ಸರ್ಕಾರದ ಅಧೀನದಲ್ಲಿ ನಿಯಮಾನುಸಾರ ಕಾರ್ಯ ನಿರ್ವಹಿಸಬೇಕು. ಆದರೆ, ಇಲ್ಲಿ ಜನ ಸೇವೆಗಿಂತಲೂ ಹೆಚ್ಚಾಗಿ ರಾಜಕೀಯ ಪ್ರೇರಿತ ವರ್ತನೆ ತೋರುತ್ತಿರುವ ಆರೋಪವು ಮೊದಲಿನಿಂದಲೂ ಕೇಳಿ ಬರುತ್ತಿದೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಫಲಾನುಭವಿಗಳಿಂದ ಷೇರು ಪಡೆಯುವುದನ್ನು ನಿಲ್ಲಿಸಬೇಕು. ಜನಪರ ಸೇವೆಗೆ ಹೆಚ್ಚು ಆದ್ಯತೆ ಕೊಡಬೇಕೇ ಹೊರತು ನಿಯಮಗಳನ್ನು ಉಲ್ಲಂಘಿಸಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯ. ಆದರೆ, ಇದಕ್ಕೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರವು ನಬಾರ್ಡ್ ಯೋಜನೆಯಡಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದೆ. ದೇಶದ ಅಭಿವೃದ್ಧಿಯು ಮಹಿಳೆಯರ ಪ್ರಗತಿ ಅವಲಂಬಿಸಿದೆ. ಮೊದಲು ಸಂಕಷ್ಟದ ಸಂದರ್ಭದಲ್ಲಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಾಗುತ್ತಿತ್ತು. ಆದರೆ, ಇದೀಗ ಶೂನ್ಯ ಬಡ್ಡಿ ದರದಲ್ಲಿಯೇ ಸಾಲ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಜನರು ಖಾಸಗಿ ಹಣಕಾಸು ಸಂಸ್ಥೆಗಳಿಂದ ದುಬಾರಿ ಬಡ್ಡಿಗೆ ಹಣ ಪಡೆದು ತೊಂದರೆ ಅನುಭವಿಸುವುದನ್ನು ತಪ್ಪಿಸಲು ಡಿಸಿಸಿ ಬ್ಯಾಂಕ್ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು ಇದನ್ನು ಉದ್ದೇಶಿತ ಕೆಲಸಕ್ಕೆ ಬಳಸಿ ಆರ್ಥಿಕಾಭಿವೃದ್ಧಿ ಹೊಂದಬೇಕು. ಸಕಾಲದಲ್ಲಿ ಸಾಲ ಮರುಪಾವತಿಸಬೇಕು ಎಂದು ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ತಿಳಿಸಿದರು.

    ಜಿಪಂ ಸದಸ್ಯ ಪಿ.ಎನ್.ಕೇಶವರೆಡ್ಡಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಕೋಚಿಮುಲ್ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್, ಮುಖಂಡರಾದ ಮರಳುಕುಂಟೆ ಕೃಷ್ಣಮೂರ್ತಿ, ಕೆ.ಎಸ್.ಕೃಷ್ಣಾರೆಡ್ಡಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts