More

    ಸಾಧಕ ಮಹಿಳೆಯರು ಸಮಾಜಕ್ಕೆ ಸ್ಫೂರ್ತಿ

    ಹುಣಸೂರು: ಸಾಧಕ ಮಹಿಳೆಯರು ಈ ಸಮಾಜಕ್ಕೆ ಹೆಚ್ಚಿನ ಸ್ಫೂರ್ತಿಯಾಗಬಲ್ಲರು. ಸಾಧಿಸಬೇಕೆನ್ನುವ ಛಲ ಮತ್ತು ಕರ್ತವ್ಯಪರತೆಗೆ ಮಹಿಳೆಯರು ಮಾದರಿಯಾಗುತ್ತಾರೆ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷರ ಸಂಘದ ಅಧ್ಯಕ್ಷ ನರಸಿಂಹ ಅಭಿಪ್ರಾಯಪಟ್ಟರು.

    ನಗರದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಕನ್ನಡ ಎಂ.ಎ. ವಿಭಾಗದಲ್ಲಿ 15 ಚಿನ್ನದ ಪದಕ ಮತ್ತು ಒಂದು ನಗದು ಬಹುಮಾನ ಗಳಿಸುವ ಮೂಲಕ ದಾಖಲೆ ಬರೆದ ನಗರದ ಕಲ್ಕುಣಿಕೆ ನಿವಾಸಿ ಶ್ರೀವಿದ್ಯಾ ಅವರನ್ನು ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.

    ಶಿಕ್ಷಣ ಕ್ಷೇತ್ರದ ಪರಿಕಲ್ಪನೆ ಬದಲಾಗುತ್ತಿದೆ. ಅಂತೆಯೆ ಹೆಣ್ಣುಮಕ್ಕಳ ಶಿಕ್ಷಣದ ಕುರಿತು ಕೂಡ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಹೆಣ್ಣುಮಕ್ಕಳಿಗೆ ಶಿಕ್ಷಣ ಏಕೆ ಎನ್ನುವ ಕಾಲ ಮರೆಯಾಗಿದೆ. ಸಾಧಕ ಹೆಣ್ಣುಮಕ್ಕಳು ಈ ಸಮಾಜಕ್ಕೆ ಮಾದರಿಯಾಗಿ ನಿಲ್ಲುತ್ತಾರೆ. ಸಾಧಿಸುವ ಹಾದಿಯಲ್ಲಿನ ಅವರ ಛಲ, ಸತತ ಪ್ರಯತ್ನಗಳು ಯುವಸಮೂಹಕ್ಕೆ ದಾರಿದೀಪವಾಗಿವೆ. ಹೆಣ್ಣು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು ಎನ್ನುವುದಕ್ಕೆ ಶ್ರೀವಿದ್ಯಾ ಉತ್ತಮ ಉದಾಹರಣೆ ಎಂದು ಬಣ್ಣಿಸಿದರು.

    ಮುಖ್ಯ ಶಿಕ್ಷಕ ಮಾದುಪ್ರಸಾದ್ ಮಾತನಾಡಿ, ಮಹಿಳೆಯರು ಮನೆ, ಮಕ್ಕಳು ಸಂಸಾರದ ವಿಚಾರದಲ್ಲಿ ತಮ್ಮ ಸ್ವಂತ ಬದುಕನ್ನು ತ್ಯಾಗ ಮಾಡುತ್ತಾರೆ. ಜಂಜಾಟಗಳ ನಡುವೆಯೂ ಸಾಧನೆ ಪುಟಿದು ನಿಲ್ಲುವುದು ಅಪರೂಪ. ಅದಕ್ಕಾಗಿ ಅವರ ಹಿಂದೆ ಪತಿ, ಮಾವ, ಕುಟುಂಬದ ಸಹಜೀವಿಗಳು ಪ್ರೋತ್ಸಾಹ ನೀಡಬೇಕಿದೆ. ಮಗಳನ್ನು ತಂದೆ-ತಾಯಿ ಓದಿಸುವುದು ಸಾಮಾನ್ಯ ಸಂಗತಿಯಾದರೆ, ಮಗಳಂತೆ ಸೊಸೆಯೂ ಎಂಬ ಭಾವನೆಯಿಂದ ಸೊಸೆಯನ್ನು ಓದಲು ಕಳುಹಿಸುವ ಮೂಲಕ ಮಾದರಿ ವ್ಯಕ್ತಿಯಾಗಿ ಶಿಕ್ಷಕ ಶಿವಣ್ಣ ಸಮಾಜದ ಗಮನ ಸೆಳೆದಿದ್ದಾರೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಅವರು ಚಿನ್ನದ ಬೇಟೆಗಷ್ಟೆ ತೃಪ್ತಿಯಾಗದೆ ವಿದ್ಯಾ ಅವರು ಸಮಾಜಕ್ಕೆ ಕೊಡುಗೆ ನೀಡುವ ಉನ್ನತ ಹುದ್ದೆಗಳನ್ನು ಗಳಿಸುವಂತಾಗಲಿ ಎಂದು ಹರಸಿದರು. ಶಿಕ್ಷಕಿ ಮಮತಾ ಮಾತನಾಡಿದರು. ನಿವೃತ್ತ ಶಿಕ್ಷಕ ಶಿವಣ್ಣ, ಎಸ್‌ಡಿಎಂಸಿ ಉಪಾಧ್ಯಕ್ಷೆ ನಂದಿನಿ ರಘು, ಪಾಲಕರ ಸಮಿತಿಯ ಅಧ್ಯಕ್ಷ ರಫೀಕ್, ಸದಸ್ಯರಾದ ಹರೀಶ್, ನಂದಿನಿ, ಪುಷ್ಪಾಂಜಲಿ ಶಿಕ್ಷಕರಾದ ಗೀತಾ, ದೀಕ್ಷಿತಾ, ರೇಖಾ, ಜ್ಯೋತಿ, ನಾಗರತ್ನಾ, ಚಂದ್ರಕಲಾ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts