More

    ಸಾಂಕ್ರಾಮಿಕ ಕಾಯಿಲೆ ನಿಯಂತ್ರಣಕ್ಕೂ ಇರಲಿ ಗಮನ

    ಚಿಕ್ಕಬಳ್ಳಾಪುರ: ಕರೊನಾ ಸೋಂಕಿನ ನಡುವೆ ಸಾಂಕ್ರಾಮಿಕ ಕಾಯಿಲೆಗಳ ಹರಡುವಿಕೆಯ ನಿಯಂತ್ರಣದ ಕಡೆಗೂ ಹೆಚ್ಚಿನ ಗಮನ ಹರಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ಸೂಚಿಸಿದರು.

    ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸಾಂಕ್ರಾಮಿಕ ಕಾಯಿಲೆ ನಿಯಂತ್ರಣ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಅಂತರ್ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

    ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಡೆಂಘೆ, ಮಲೇರಿಯಾ ಮತ್ತು ಚಿಕುನ್‌ಗುನ್ಯಾ ಹರಡುವ ಸಾಧ್ಯತೆಯಿದೆ, ಇದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಮನೆ ಮನೆಗೂ ಭೇಟಿ ನೀಡಿ ಜಾಗೃತಿ ಮೂಡಿಸಬೇಕು ಎಂದರು.
    ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕೇವಲ ಆರೋಗ್ಯ ಇಲಾಖೆಯ ಜವಾಬ್ದಾರಿಯಲ್ಲ. ಪ್ರತಿಯೊಬ್ಬರು ಅಗತ್ಯ ಸಹಕಾರ ನೀಡಬೇಕು, ಸ್ಥಳೀಯ ಆಡಳಿತ ಸಂಸ್ಥೆಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

    ಚರಂಡಿ, ಗುಂಡಿ ಸೇರಿ ವಿವಿಧೆಡೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರಿನ ಸಂಗ್ರಹಣಾ ಕೇಂದ್ರಗಳ ಸ್ವಚ್ಛತೆ ಹಾಗೂ ಪೈಪ್‌ಲೈನ್ ವ್ಯವಸ್ಥೆ ಸಮರ್ಪಕ ಪರಿಶೀಲನೆಯಾಗಬೇಕು. ಕುಂಟೆ, ತೊಟ್ಟಿಗಳಲ್ಲಿ ಲಾರ್ವಾ ಮೀನುಗಳನ್ನು ಬಿಡಬೇಕು. ನೀರು ಸಂಗ್ರಹಣೆಯಾಗುವ ಟೈರ್, ಒಡೆದ ಮಡಕೆ, ತೆಂಗಿನ ಚಿಪ್ಪುಗಳನ್ನು ವಿಲೇವಾರಿ ಮಾಡಬೇಕೆಂದು ಸಲಹೆ ನೀಡಿದರು.

    ಡೆಂಘೆ ಜ್ವರಕ್ಕೆ ತುತ್ತಾದವರಲ್ಲಿ ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರನೋವು, ಕೀಲುನೋವು, ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ. ಈ ರೀತಿಯ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಿ.ಎಂ ಯೋಗೀಶ್ ಗೌಡ ಮನವಿ ಮಾಡಿದರು.

    ಸೊಳ್ಳೆಗಳ ನಿಯಂತ್ರಣದಿಂದ ಮಾತ್ರ ಡೆಂಘೆ, ಮಲೇರಿಯಾ ರೋಗಗಳನ್ನು ತಡೆಗಟ್ಟಬಹುದು. ಆದ್ದರಿಂದ ತೆರೆದ ನೀರಿನ ತೊಟ್ಟಿ, ಡ್ರಂ, ಬ್ಯಾರಲ್, ಏರ್ ಕೂಲರ್‌ಗಳನ್ನು ವಾರಕ್ಕೊಮ್ಮೆ ತಪ್ಪದೇ ಖಾಲಿ ಮಾಡಿ ಒಣಗಿಸಬೇಕು. ಮತ್ತೆ ನೀರು ಭರ್ತಿ ಮಾಡಿಕೊಳ್ಳಬೇಕು ಎಂದರು.
    ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಚ್ ನರಸಿಂಹಯ್ಯ, ನಿವಾಸಿ ವೈದ್ಯಾಧಿಕಾರಿ ರಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts