More

    ಸರಗೂರಿನಲ್ಲಿ ಹನುಮ ಜಯಂತಿ ಅದ್ದೂರಿ ಆಚರಣೆ

    ಸರಗೂರು: ಪಟ್ಟಣದ ಶ್ರೀಹನುಮ ಜಯಂತಿ ಅಚರಣಾ ಸಮಿತಿ ಶನಿವಾರ ಆಯೋಜಿಸಿದ್ದ ಹನುಮ ಜಯಂತಿ ಉತ್ಸವದ ಶೋಭಾಯಾತ್ರೆ ವಿಜೃಂಭಣೆಯಿಂದ ಜರುಗಿತು. ದಾರಿಯುದ್ದಕ್ಕೂ ಭಗವಾನ್ ಹನುಮನ ಘೋಷಣೆ ಮೊಳಗಿದವು.


    ಶೋಭಾಯಾತ್ರೆ ಅಂಗವಾಗಿ ಪಲ್ಲಕ್ಕಿಯಲ್ಲಿ ಕೂರಿಸಿದ್ದ ಹನುಮಂತನ ಭಾವಚಿತ್ರಕ್ಕೆ ತಾಲೂಕಿನ ಹಂಚೀಪುರ ಮಠದ ಶ್ರೀಚನ್ನಬಸವ ಸ್ವಾಮೀಜಿ, ದಡದಹಳ್ಳಿ ಮಠದ ಶ್ರೀಷಡಕ್ಷರ ಸ್ವಾಮೀಜಿ, ಶಾಸಕ ಅನಿಲ್ ಚಿಕ್ಕಮಾದು, ಜೆಡಿಎಸ್ ಮುಖಂಡ ಜಯಪ್ರಕಾಶ್, ಬಿಜೆಪಿ ಮುಖಂಡರಾದ ಡಾ.ಎಚ್.ವಿ.ಕೃಷ್ಣಸ್ವಾಮಿ, ಎಂ.ಅಪ್ಪಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಹಂಚೀಪುರ ಗುರುಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಆಚರಣಾ ಸಮಿತಿ ಅಧ್ಯಕ್ಷ ಚನ್ನಪ್ಪ ಸೇರಿದಂತೆ ಮುಖಂಡರು ಹನುಮನ ಭಾವಚಿತ್ರವುಳ್ಳ ಶೋಭಾಯಾತ್ರೆಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು.


    ಪಟ್ಟಣದ ಸೆಸ್ಕ್ ಕಚೇರಿಯಿಂದ ಹೊರಟ ಶೋಭಾಯಾತ್ರೆ ಹುಣಸೂರು-ಎನ್.ಬೇಗೂರು ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣ, ಮಹಾವೀರ ವೃತ್ತ, ಚಿಕ್ಕದೇವಮ್ಮನ ವೃತ್ತ, ಮೂಲಕ 2ನೇ ಮುಖ್ಯರಸ್ತೆಯಲ್ಲಿ ಸಾಗಿ ಸಂತೆಮಾಳದ ಮಾಸ್ತಮ್ಮನ ದೇವಸ್ಥಾನದಲ್ಲಿ ಸಮಾವೇಶಗೊಂಡಿತು.


    ಪಟ್ಟಣದ ಪ್ರಮುಖ ಬೀದಿಗಳು ಕೇಸರಿಮಯವಾಗಿದ್ದು, ಹನುಮನ ಭಕ್ತರ ಕೈಯಲ್ಲಿ ಕೆಸರಿ ಬಾವುಟಗಳು ರಾರಾಜಿಸಿದವು. ಇದಲ್ಲದೆ ಭಕ್ತರು ಹನುಮನ ಶ್ಲೋಕಗಳನ್ನು ಪಠಣ ಮಾಡಿ, ವಿವಿಧ ಘೋಷಣೆ ಕೂಗುತ್ತಾ ದಾರಿಯುದ್ದಕ್ಕೂ ಜೈಕಾರ ಹಾಕಿದರು. ನೆಮ್ಮನಹಳ್ಳಿ ಮಹದೇವು ಮತ್ತು ತಂಡದಿಂದ ಆದಿವಾಸಿ ಜನಾಂಗದ ಕುಣಿತ ಮೆರವಣಿಗೆಗೆ ಮೆರಗು ತಂದಿತು.


    ನೀಲಕಂಠ ತಂಡದಿಂದ ವೀರಗಾಸೆ ನೃತ್ಯ ಪ್ರದರ್ಶನವಾಯಿತು. ಅಲ್ಲಲ್ಲಿ ಮಜ್ಜಿಗೆ, ಪಾನಕ ವಿತರಿಸಲಾಯಿತು. ಗಡಿಗೊಂಬೆ ಪ್ರದರ್ಶಿಸಲಾಯಿತು. ಇದರೊಂದಿಗೆ ಮುಸ್ಲಿಮರೂ ಮಜ್ಜಿಗೆ ವಿತರಣೆ ಮಾಡಿದ್ದು, ವಿಶೇಷವಾಗಿತ್ತು.


    ಹಂಚೀಪುರ ಮಠದ ಶ್ರೀಚನ್ನಬಸವಸ್ವಾಮೀಜಿ ಮಾತನಾಡಿ, ಎಲ್ಲರೂ ಒಗ್ಗೂಡಿ ಹನುಮನ ಜಯಂತಿ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ. ಸದೃಢ, ಸಮಾನತೆ ಭಾರತವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಯುಕವಕರ ಮೇಲಿದೆ. ಹೀಗಾಗಿ ಎಲ್ಲರೂ ಶ್ರಮಿಸಬೇಕು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಎಚ್ಚರವಹಿಸಿದರೆ ಒಳಿತು ಎಂದು ತಿಳಿಸಿದರು.
    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕವೀರನಾಯಕ, ಪಿ.ರವಿ, ಭಾಗ್ಯಲಕ್ಷ್ಮೀ, ಶಂಕರೇಗೌಡ, ಜೆಡಿಎಸ್ ಮುಖಂಡ ಜಯಪ್ರಕಾಶ್, ಆಚರಣ ಸಮಿತಿ ಅಧ್ಯಕ್ಷ ಚೆನ್ನಪ್ಪ, ಮುಖಂಡರಾದ ಹಂಚೀಪುರ ಗಣಪತಿ, ಜೆಡಿಎಸ್ ಮುಖಂಡ ಪ್ರಕಾಶ್, ವಿನಯ್, ಬಜರಂಗಿ ರಾಮು, ಮಂಡ್ಯ ಮಂಜು, ಜಗದೀಶ್ ಮಾಗುಡಿಲು, ನಂಜಪ್ಪ ಹಂಚೀಪುರ, ವೇಣುಗೋಪಾಲ್, ಆನಂದ ಮೈಲಾರಿ, ನಾಗರಾಜು, ಮಂಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts