More

    ಸಮುದಾಯ ಭವನ, ನಿವೇಶನ ನೀಡದೆ ಕಡೆಗಣನೆ

    ಹನೂರು: ಕಳೆದ 3 ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಕ್ಷೇತ್ರಕ್ಕೆ ಒಂದೇ ಒಂದು ಸಮುದಾಯ ಭವನವನ್ನು ನೀಡಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 152 ಸಮುದಾಯ ಭವನಗಳು ನಿರ್ಮಾಣವಾಗಿವೆ ಎಂದು ಶಾಸಕ ಆರ್.ನರೇಂದ್ರ ಹೇಳಿದರು.


    ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಹದೇವ ನಗರದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 10 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಡಾ.ಬಾಬು ಜಗಜೀವನರಾಂ ಸಮುದಾಯ ಭವನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
    ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಮೂರೂವರೆ ಸಾವಿರ ಕೋಟಿ ರೂ. ಅನುದಾನ ನೀಡಲಾಗಿತ್ತು. ಇದರಲ್ಲಿ ಸಿಸಿ ರಸ್ತೆ, ಚರಂಡಿ, ಸೇತುವೆಗಳ ನಿರ್ಮಾಣ, ಶಾಲಾ, ಕಾಲೇಜು, ಹಾಸ್ಟೆಲ್ ಹಾಗೂ ಅಂಗನವಾಡಿ ಕೇಂದ್ರಗಳ ಸ್ಥಾಪನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.


    ವಿವಿಧ ಸಮುದಾಯಗಳಿಗೆ 152 ಭವನಗಳನ್ನು ನಿರ್ಮಿಸಲಾಗಿದ್ದು, ಇದೀಗ ಉದ್ಘಾಟನೆಗೊಂಡಿರುವುದು ಆದಿಜಾಂಬವ ಸಮುದಾಯಕ್ಕೆ ಸೇರಿದ 42ನೇ ಭವನವಾಗಿದೆ. ಈ ಮೂಲಕ ಸಮುದಾಯದ ಅಭಿವೃದ್ಧಿಗೆ ಕಾಂಗ್ರೆಸ್ ಹೆಚ್ಚಿನ ಒತ್ತು ನೀಡಿದೆ. ಆದರೆ, ಬಿಜೆಪಿ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ವಿಶೇಷ ಅನುದಾನ ನೀಡಿಲ್ಲ. ವಸತಿ ಯೋಜನೆಯಡಿ ಒಂದು ಮನೆಯನ್ನು ನೀಡಿಲ್ಲ. ಕಾಮಗಾರಿ ಪೂರ್ಣಗೊಂಡಿರುವ ಮನೆಗಳಿಗೂ ಅನುದಾನ ಬಿಡುಗಡೆ ಮಾಡಿಲ್ಲ ಎಂದರು.


    ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಬೇಕು: ಬಹುತೇಕ ಕಡೆಗಳಲ್ಲಿ ಸಮುದಾಯ ಭವನಗಳನ್ನು ಶುಭ, ಸಮಾರಂಭಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಭವನಗಳು ಕಾರ್ಯಕ್ರಮಗಳಿಗೆ ಸೀಮಿತವಾಗದೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶೈಕ್ಷಣಿಕ ಹಾಗೂ ಜ್ಞಾನಾರ್ಜನೆ ವೃದ್ಧಿಸುವ ಚಟುವಟಿಕೆಗಳ ಕೇಂದ್ರವಾಗಬೇಕು. ಈ ದಿಸೆಯಲ್ಲಿ ಸಮುದಾಯದ ಮುಖಂಡರು ಸಮಿತಿ ರಚಿಸಿ ನಿರ್ವಹಣೆ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಸಲಹೆ ನೀಡಿದರು.


    ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಗ್ರಾಪಂ ಮಾಜಿ ಅಧ್ಯಕ್ಷೆ ರುಕ್ಮಿಣಿ, ನಿರ್ಮಿತಿ ಕೇಂದ್ರದ ಎಇಇ ರವಿಕುಮಾರ್, ಎಇ ಮಹದೇವಶೆಟ್ಟಿ, ಮುಖಂಡರಾದ ಗೋವಿಂದರಾಜು, ಶಿವಣ್ಣ, ಮಾಧು, ಮಾದೇವ, ಚಿನ್ನರಾಜು, ಕೆಂಪಣ್ಣ, ಪ್ರಭು, ಪುಟ್ಟಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts