More

    ಸಜ್ಜಾಗಿದ್ದಾರೆ 22 ಸಾವಿರ ವಿದ್ಯಾರ್ಥಿಗಳು

    ಹಾವೇರಿ: ಕರೊನಾ ಮಾರ್ಗಸೂಚಿಯಂತೆ ಗರಿಷ್ಠ ಸುರಕ್ಷೆ ಕ್ರಮಗಳನ್ನು ಅನುಸರಿಸಿ ಜೂ. 25ರಿಂದ ಆರಂಭಿಸಲಾಗುತ್ತಿರುವ ಎಸ್​ಎಸ್​ಎಲ್​ಸಿ ವಾರ್ಷಿಕ ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಯಾವುದೇ ಪಾಲಕರು ಹಾಗೂ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ನಿಶ್ಚಿಂತೆಯಿಂದ ಪರೀಕ್ಷೆ ಬರೆಯಿರಿ ಎಂದು ಡಿಡಿಪಿಐ ಅಂದಾನೆಪ್ಪ ವಡಗೇರಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ 22,511 ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆಗಾಗಿ ನೋಂದಾಯಿಸಿಕೊಂಡಿದ್ದಾರೆ. 407 ವಿದ್ಯಾರ್ಥಿಗಳು ಹೊರ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡು ವಲಸೆ ಹೋಗಿದ್ದಾರೆ. 695 ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆಗಳಿಂದ ಹಾವೇರಿ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ನೋಂದಣಿ ಮಾಡಿದ್ದಾರೆ. ಜಿಲ್ಲೆಯಲ್ಲಿ 75 ಮುಖ್ಯ ಪರೀಕ್ಷಾ ಕೇಂದ್ರಗಳು, 15 ಬ್ಲಾಕ್ ಕೇಂದ್ರಗಳನ್ನು ಗುರುತಿಸಲಾಗಿದೆ. 1,420 ಕೊಠಡಿಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. 1,006 ಕೊಠಡಿಗಳಿಗೆ, 75 ಮುಖ್ಯ ಕೊಠಡಿಗಳಿಗೆ, 91 ಕೇಂದ್ರಗಳ ಕಾರಿಡಾರ್​ಗಳಿಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. 75 ಮುಖ್ಯ ಅಧೀಕ್ಷಕರು, 75 ಪ್ರಶ್ನೆಪತ್ರಿಕೆ ಪಾಲಕರು, 29 ಮಾರ್ಗಗಳಿಗೆ ಮಾರ್ಗಾಧಿಕಾರಿಗಳು ಹಾಗೂ 75 ಮೊಬೈಲ್ ಸ್ವಾಧೀನಾಧಿಕಾರಿಗಳು ಹಾಗೂ 75 ಸ್ಥಾನಿಕ ಜಾಗ್ರತದಳದ ಅಧಿಕಾರಿಗಳನ್ನು ನೇಮಿಸಲಾಗಿದೆ.

    ಸಾರಿಗೆ ವ್ಯವಸ್ಥೆ: 22,511 ವಿದ್ಯಾರ್ಥಿಗಳಲ್ಲಿ 5,453 ವಿದ್ಯಾರ್ಥಿಗಳು ಕಾಲ್ನಡಿಗೆಯಿಂದ, 2,110 ವಿದ್ಯಾರ್ಥಿಗಳು ಸೈಕಲ್ ಮೂಲಕ, 10,933 ವಿದ್ಯಾರ್ಥಿಗಳು ಕಾರು, ಬೈಕ್ ಮೂಲಕ ಸ್ವಂತ ವಾಹನ ಬಳಸಿ ಬರಲಿದ್ದಾರೆ. 720 ಮಕ್ಕಳಿಗೆ ಖಾಸಗಿ ಶಾಲೆಯವರು ವಾಹನ ವ್ಯವಸ್ಥೆ ಮಾಡಿದ್ದಾರೆ. 1,440 ಮಕ್ಕಳು ಖಾಸಗಿ ಶಾಲಾ ವಾಹನದ ಮೂಲಕ ಬರಲಿದ್ದಾರೆ. 1,846 ಮಕ್ಕಳು ಕೆಎಸ್​ಆರ್​ಟಿಸಿ ರೂಟ್ ಬಸ್​ಗಳಲ್ಲಿ ಬರಲಿದ್ದಾರೆ.

    ಜ್ವರ ತಪಾಸಣೆ: ಕೋವಿಡ್ ಮಾರ್ಗಸೂಚಿಯಂತೆ ಎಲ್ಲ ವಿದ್ಯಾರ್ಥಿಗಳಿಗೂ ಪರೀಕ್ಷಾ ಕೇಂದ್ರದಲ್ಲಿ ಜ್ವರ ತಪಾಸಣೆ ನಡೆಸಲಾಗುವುದು. ಸ್ಯಾನಿಟೈಸರ್ ಬಳಸಿ ಕೈ ಸ್ವಚ್ಛ ಮಾಡಿಕೊಂಡು, ಮಾಸ್ಕ್ ಧರಿಸಿ ಕೊಠಡಿಯೊಳಗೆ ಪರಸ್ಪರ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಈ ಉದ್ದೇಶಕ್ಕಾಗಿ ಅಗತ್ಯ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರಗಳನ್ನು ಈಗಾಗಲೇ ಸ್ಯಾನಿಟೈಸ್ ಮಾಡಲಾಗಿದೆ. ಪರೀಕ್ಷೆ ಮುಗಿಯುವರೆಗೂ ಪ್ರತಿದಿನ ಸ್ಯಾನಿಟೈಸ್ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ. ಜ್ವರ ಲಕ್ಷಣ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ.

    ಒಂದೂವರೆ ತಾಸು ಬೇಗ ಬನ್ನಿ: ಬೆಳಗ್ಗೆ ಪರೀಕ್ಷೆ ಆರಂಭವಾಗುವ ಒಂದೂವರೆ ತಾಸು ಮೊದಲು ಅಂದರೆ ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭವಾದರೆ 9 ಗಂಟೆಯೊಳಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ತಪಾಸಣೆಗೊಳಗಾಗಬೇಕು. ತಪಾಸಣೆ ಬಳಿಕವೇ ಕೊಠಡಿಯೊಳಗೆ ಪ್ರವೇಶಿಸಬೇಕು. ಬರುವಾಗ ಮತ್ತು ಹೋಗುವಾಗ ಕಡ್ಡಾಯವಾಗಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಸರತಿ ಸಾಲಿನಲ್ಲಿ ನಿಂತು ತಪಾಸಣೆ ನಂತರ ಮಾಸ್ಕ್ ಧರಿಸಿ ಒಳಗಡೆ ಹೋಗಬೇಕು. ಈಗಾಗಲೇ ಉಚಿತ ಮಾಸ್ಕ್ ನೀಡಲು ವ್ಯವಸ್ಥೆ ಮಾಡಲಾಗಿದೆ. ಮನೆಯಿಂದಲೇ ಕುಡಿಯುವ ನೀರಿನ ಬಾಟಲಿಗಳನ್ನು ತಂದು ಪ್ರತ್ಯೇಕವಾಗಿ ಬಳಸಲು ಸಲಹೆ ನೀಡಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

    ಸಹಾಯವಾಣಿ: ಸಾರ್ವಜನಿಕರ ಸಂಪರ್ಕಕ್ಕೆ 9480574530 ಸಹಾಯವಾಣಿ ಸ್ಥಾಪಿಸಲಾಗಿದೆ. ಪ್ರತಿ ಕೇಂದ್ರಕ್ಕೆ ಆರೋಗ್ಯ ಸಹಾಯಕರ ನೇಮಕ, ಸ್ಥಳೀಯ ಸಂಸ್ಥೆಗಳಿಂದ ಪರೀಕ್ಷಾ ಕೇಂದ್ರಗಳ ಸ್ವಚ್ಛತೆ ಸೇರಿ ಗರಿಷ್ಠ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ನಿಷೇಧಾಜ್ಞೆ: ಪರೀಕ್ಷಾ ಕೇಂದ್ರದ ಸುತ್ತಲೂ 200 ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೊಷಿಸಲಾಗಿದೆ. ಈ ಪ್ರದೇಶದಲ್ಲಿ ಜೆರಾಕ್ಸ್ ಸೆಂಟರ್ ಹಾಗೂ ಟೈಪಿಂಗ್ ಸೆಂಟರ್ ಮುಚ್ಚಲು ಆದೇಶಿಸಲಾಗಿದೆ. ಮೊಬೈಲ್​ಫೋನ್ ಬಳಕೆ ಸಹ ನಿಷೇಧಿಸಲಾಗಿದೆ. ಪಾರದರ್ಶಕ, ನಕಲು ಮುಕ್ತ ಸುವ್ಯವಸ್ಥಿತ ಪರೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

    ಕಲ್ಪಿತ ಪ್ರದರ್ಶನ: ಬುಧವಾರ ಜಿಲ್ಲೆಯ ಪರೀಕ್ಷಾ ಕೇಂದ್ರಗಳ ಹೊರಗಡೆ ಪರಸ್ಪರ ಅಂತರ ಕಾಯಲು ಬಾಕ್ಸ್ ಗುರುತು ನಿರ್ವಣ, ಆರೋಗ್ಯ ತಪಾಸಣೆ ಕೇಂದ್ರ, ಸ್ಯಾನಿಟೈಸರ್ ಬಳಕೆ, ಡೆಸ್ಕ್​ಗೆ ಹೋಗಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಿದರು. ಅಲ್ಲದೆ, ಬಿಇಒಗಳ ನೇತೃತ್ವದಲ್ಲಿ ಶಿಕ್ಷಕರಿಂದ ಕಲ್ಪಿತ ಪ್ರದರ್ಶನವನ್ನು ನಡೆಸಿದರು.

    ಕಂಟೇನ್ಮೆಂಟ್ ವಲಯದಿಂದ 26 ವಿದ್ಯಾರ್ಥಿಗಳು

    ಸವಣೂರ ಪಟ್ಟಣದ ಕಂಟೇನ್ಮೆಂಟ್ ಜೋನ್​ನ 14, ಶಿಗ್ಗಾಂವಿ ಪಟ್ಟಣದ ಕಂಟೇನ್ಮೆಂಟ್ ಜೋನ್​ನ 7, ಗುತ್ತಲದ ಕಂಟೇನ್ಮೆಂಟ್ ಜೋನ್​ನ 5 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಅವರಿಗೆ ಪ್ರತ್ಯೇಕ ವಾಹನ ಹಾಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ವಿಷಯ ಪರೀಕ್ಷಕ ಆರ್. ಮಂಜಪ್ಪ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts