More

    ಸಂಕಷ್ಟದಲ್ಲಿ ಗುತ್ತಿಗೆದಾರರು

    ಶಿರಸಿ: ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಿದ್ದ ಗುತ್ತಿಗೆದಾರರಿಗೆ ಆರ್ಥಿಕ ವರ್ಷಾಂತ್ಯಕ್ಕೆ ಬರಬೇಕಿದ್ದ ಬಿಲ್ ಪಾವತಿಯ ಹಣವು ತಾಂತ್ರಿಕ ದೋಷದಿಂದ ಸರ್ಕಾರಕ್ಕೆ ವಾಪಸ್ ಆದ ಕಾರಣ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    2019-20ನೇ ಸಾಲಿನಡಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆ, ಚಿಕ್ಕ ನೀರಾವರಿ ಇಲಾಖೆ ಹಾಗೂ ಇತರ ಹಲವು ಇಲಾಖೆಗಳಡಿ ಮಂಜೂರಾಗಿದ್ದ ರಸ್ತೆ ಅಭಿವೃದ್ಧಿ ಹಾಗೂ ನಿರ್ವಹಣೆ, ಸೇತುವೆ, ಬಾಂದಾರು, ಕಟ್ಟಡ ನಿರ್ಮಾಣ ಸೇರಿ 200ಕ್ಕೂ ಹೆಚ್ಚು ವಿವಿಧ ಕಾಮಗಾರಿಗಳು ಆರ್ಥಿಕ ವರ್ಷಾಂತ್ಯಕ್ಕೆ ಪೂರ್ಣಗೊಂಡಿವೆ. ಆದರೆ, ಕಾಮಗಾರಿ ನಿರ್ವಹಣೆ ಮಾಡಿದ ಜಿಲ್ಲೆಯ 100ಕ್ಕೂ ಅಧಿಕ ಗುತ್ತಿಗೆದಾರರಿಗೆ ನೀಡಬೇಕಿದ್ದ ಅಂದಾಜು 60ರಿಂದ 70 ಕೋಟಿ ರೂಪಾಯಿ ಖಜಾನೆಗೆ ಜಮಾ ಆಗಿ ತಾಂತ್ರಿಕ ದೋಷದಿಂದ ಸರ್ಕಾರಕ್ಕೇ ವಾಪಸ್ಸಾಗಿದೆ. ಇದು ಗುತ್ತಿಗೆದಾರರನ್ನು ಸಂಕಷ್ಟಕ್ಕೆ ನೂಕಿದೆ.

    ಹಣ ವಾಪಸ್: ಸಾಮಾನ್ಯವಾಗಿ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ಶೇಕಡಾ 50ರಷ್ಟು ಅನುದಾನವು ಡಿಸೆಂಬರ್ ಅಂತ್ಯದೊಳಗೆ ಬಂದರೆ ಉಳಿದ ಶೇ. 25ರಷ್ಟು ಅನುದಾನ ಫೆಬ್ರವರಿ ಒಳಗೆ ಬರುತ್ತದೆ. ಕೊನೆಯ ಹಂತದ ಶೇ. 25ರಷ್ಟು ಅನುದಾನ ಮಾರ್ಚ್ 10ರ ನಂತರ ಜಮಾ ಆಗುತ್ತದೆ. ಗುತ್ತಿಗೆದಾರರು ಮಾಡಿದ ಕಾಮಗಾರಿಗಳ ಮೆಸರ್​ವೆುಂಟ್ ಬಿಲ್ (ಎಂ.ಬಿ) ಸಿದ್ಧಪಡಿಸಿ ಹಿರಿಯ ಅಧಿಕಾರಿಗಳ ಸಹಿ ಪಡೆದು ಖಜಾನೆಗೆ ಕಳುಹಿಸಬೇಕಾಗುತ್ತದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ವರ್ಷ ಮಾ. 23 ಬಿಲ್ ಪಾವತಿಗೆ ಕೊನೆಯ ದಿನವೆಂದು ಖಜಾನೆಯಿಂದ ಇಲಾಖೆಗಳಿಗೆ ಮಾಹಿತಿ ಬಂದಿತ್ತು. ಹೀಗಾಗಿ, ಕೊನೆಯ ಹಂತದಲ್ಲಿ ಹೆಚ್ಚಿನ ಬಿಲ್ ಖಜಾನೆಗೆ ಹೋದರೂ ಮಾ. 23ರಂದು ಸಾಫ್ಟ್​ವೇರ್ ಬ್ಲಾಕ್​ನಿಂದ ಈ ಎಲ್ಲ ಕಾಮಗಾರಿಗಳ ಬಿಲ್​ಗಳು ತಿರಸ್ಕಾರಗೊಂಡಿವೆ. ಇದರಿಂದ ವರ್ಷಪೂರ್ತಿ ಕಷ್ಟಪಟ್ಟು ಕಾಮಗಾರಿ ಪೂರ್ಣಗೊಳಿಸಿದ ಜಿಲ್ಲೆಯ 100ಕ್ಕೂ ಹೆಚ್ಚಿನ ಗುತ್ತಿಗೆದಾರರ ಸ್ಥಿತಿ ಅಡ್ಡಕತ್ತರಿಯಲ್ಲಿ ಸಿಕ್ಕಿದಂತಾಗಿದೆ.

    ವಾಪಸ್ ನೀಡುವುದು ಸಂದೇಹ: ಈ ಹಣ ಸರ್ಕಾರಕ್ಕೆ ಜಮಾ ಆಗಿದ್ದು, ಹಿಂದಿನ ಕೆಲ ವರ್ಷಗಳಲ್ಲಿ ಇಂತಹ ತಾಂತ್ರಿಕ ಸಮಸ್ಯೆ ಆದಾಗ ಸರ್ಕಾರದ ಮಟ್ಟದಲ್ಲಿ ಹಿರಿಯ ಅಧಿಕಾರಿಗಳು ರ್ಚಚಿಸಿ ಬಿಲ್ ಮಾಡಿಸಿದ್ದರು. ಆದರೆ, ಪ್ರಸಕ್ತ ಸನ್ನಿವೇಶದಲ್ಲಿ ಕರೊನಾ ಹಿನ್ನೆಲೆಯಲ್ಲಿ ಸರ್ಕಾರದಲ್ಲೇ ಆರ್ಥಿಕ ಮುಗ್ಗಟ್ಟು ಇರುವುದರಿಂದ ವಾಪಸ್ ಹೋದ ಹಣ ಸದ್ಯ ಬರುವ ಸಾಧ್ಯತೆಯಿಲ್ಲ ಎಂಬ ಮಾತು ಗುತ್ತಿಗೆದಾರರ ವಲಯದಲ್ಲಿ ಕೇಳಿಬಂದಿದೆ.

    ಹೆಚ್ಚಿನ ಗುತ್ತಿಗೆದಾರರು ಸಾಲ ಮಾಡಿ ಕಾಮಗಾರಿ ನಿರ್ವಹಿಸಿದ್ದಾರೆ. ಇದೀಗ ಈ ಸಾಲಕ್ಕೆ ಬಡ್ಡಿಯೇ ಲಕ್ಷಾಂತರ ರೂಪಾಯಿ ಆಗಿದೆ. ಕಾರಣ ಗುತ್ತಿಗೆದಾರರ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಪ್ರಸ್ತುತ ಲಾಕ್ ಡೌನ್ ಇರುವುದರಿಂದ ಕೆಲಸವೂ ಇಲ್ಲದೆ, ಮಾಡಿದ ಕೆಲಸಕ್ಕೆ ಹಣವೂ ಇಲ್ಲದೆ ಸಮಸ್ಯೆ ಹೆಚ್ಚಿದೆ. ತಕ್ಷಣ ಸರ್ಕಾರ ಈ ಬಗ್ಗೆ ಗಮನಹರಿಸಿ ವಾಪಸಾದ ಹಣವನ್ನು ಗುತ್ತಿಗೆದಾರರ ಖಾತೆಗೆ ಜಮಾ ಮಾಡುವ ಕಾರ್ಯ ಮಾಡಬೇಕು. | ರಮೇಶ ನಾಯ್ಕ ಗುತ್ತಿಗೆದಾರ

    ವಿವಿಧ ಕಾಮಗಾರಿಗಳಡಿ 2019-20ನೇ ಸಾಲಿನಲ್ಲಿ ಗುತ್ತಿಗೆದಾರರಿಗೆ ನೀಡಬೇಕಿದ್ದ ಹಣ ತಾಂತ್ರಿಕ ಕಾರಣಗಳಿಂದ ಸರ್ಕಾರಕ್ಕೆ ವಾಪಸಾಗಿದೆ. ಇದು ಕೇವಲ ಶಿರಸಿ ವಿಭಾಗಕ್ಕೆ ಸೀಮಿತವಾಗದೆ ರಾಜ್ಯದ ವಿವಿಧೆಡೆಯೂ ಆಗಿದೆ. ಈ ಸಮಸ್ಯೆ ಪರಿಹರಿಸುವ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರ್ಕಾರದ ಮಟ್ಟದಲ್ಲಿ ಬೇಗ ಇತ್ಯರ್ಥ ಆಗುವ ವಿಶ್ವಾಸವಿದೆ. | ಎಂ.ರೋಷನ್ ಜಿಲ್ಲಾ ಪಂಚಾಯಿತಿ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts