More

    ಶಿರಸಿಗೆ ಆಘಾತ ನೀಡಿದ ಕೋವಿಡ್​-19

    ಕಾರವಾರ: ಜಿಲ್ಲೆಯಲ್ಲಿ ಶನಿವಾರ 40 ಜನರಿಗೆ ಕರೊನಾ ಸೋಂಕು ಖಚಿತವಾಗಿದೆ. ಶಿರಸಿಯ 24, ದಾಂಡೇಲಿಯ 6, ಕಾರವಾರದ 3, ಕುಮಟಾ, ಮುಂಡಗೋಡು ಹಾಗೂ ಹೊನ್ನಾವರ ತಲಾ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ.

    ಸಾರಿಗೆ ಇಲಾಖೆ ನೌಕರರು, ಆರೋಗ್ಯ ಸಿಬ್ಬಂದಿ, ಬ್ಯಾಂಕ್ ನೌಕರರು, ಜೈಲಿನ ಕೈದಿಗಳು ಹೀಗೆ ಎಲ್ಲರಲ್ಲೂ ರೋಗ ಖಚಿತವಾಗುತ್ತಿರುವುದು ಸೋಂಕಿನ ವ್ಯಾಪಕತೆಯನ್ನು ತೋರಿಸುತ್ತಿದೆ.

    ದಾಂಡೇಲಿಯಲ್ಲಿ ಶನಿವಾರ 6 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಬಸವೇಶ್ವರ ನಗರದ 58 ವರ್ಷದ ಮಹಿಳೆ (ಪಿ-23163 ಸಂಪರ್ಕ), ಪಟೇಲನಗರದ 35 ವರ್ಷದ ಪುರುಷ (ಪಿ-25052 ಸಂಪರ್ಕ) 25 ವರ್ಷದ ಪುರುಷ (ಪಿ-12052 ಸಂಪರ್ಕ), ಕುವೈತ್​ನಿಂದ ಮರಳಿದ ಬೊಂಬೆಚಾಳ ರಹವಾಸಿ 33 ವರ್ಷದ ಪುರುಷನಿಗೆ ರೋಗ ಖಚಿತವಾಗಿದೆ. ಅಲ್ಲದೆ, ರಾಘವೇಂದ್ರ ಮಠ ಸಮೀಪದ 27 ವರ್ಷದ ಗರ್ಭಿಣಿಗೆ, ಗಾವಠಾಣದ 12 ವರ್ಷದ ಬಾಲಕನಿಗೆ ಜ್ವರದ ಲಕ್ಷಣ ಇದ್ದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿದಾಗ ಸೋಂಕು ಇರುವುದು ಕಂಡುಬಂದಿದೆ.

    ಧಾರವಾಡದಿಂದ ರವಾನೆ: ಹಳಿಯಾಳ ತಾಲೂಕಿನ ಹುಣ್ಸವಾಡ ಗ್ರಾಮದ 30 ವರ್ಷದ ಮಹಿಳೆಯಲ್ಲಿ ಕರೊನಾ ಕಂಡುಬಂದಿದೆ. ಧಾರವಾಡದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಗೆ ಶಸ್ತ್ರ ಚಿಕಿತ್ಸೆಗೂ ಪೂರ್ವ ಗಂಟಲ ದ್ರವ ಪರೀಕ್ಷೆ ಮಾಡಿದಾಗ ಕರೊನಾ ಇರುವುದು ದೃಢಪಟ್ಟಿದೆ. ಧಾರವಾಡ ಜಿಲ್ಲಾ ಆಸ್ಪತ್ರೆ ನೀಡಿದ ಮಾಹಿತಿಯಂತೆ ಮಹಿಳೆಯನ್ನು ಹಳಿಯಾಳದ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ತಂದು ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ. ಆಕೆ ವಾಸವಿರುವ ಹುಣ್ಸವಾಡ ಗ್ರಾಮದ ಆ ಗಲ್ಲಿಯನ್ನು ಸೀಲ್​ಡೌನ ಮಾಡಲಾಗಿದೆ.

    ಖಾಸಗಿ ವೈದ್ಯರಿಗೆ ಸೋಂಕು: ಕುಮಟಾದ ಹಳಕಾರಿನಲ್ಲಿ ಕ್ಲೀನಿಕ್ ನಡೆಸುತ್ತಿದ್ದ 73 ವರ್ಷದ ವೈದ್ಯರೊಬ್ಬರಿಗೆ ಸೋಂಕು ಖಚಿತವಾಗಿದೆ. ಅವರಿಂದ ಚಿಕಿತ್ಸೆ ಪಡೆದವರ ಹುಡುಕಾಟ ನಡೆದಿದೆ. ಕುಮಟಾದಲ್ಲಿ ಮುಂಬೈನಿಂದ ಮರಳಿದ 42 ವರ್ಷದ ವ್ಯಕ್ತಿಯಲ್ಲಿ, ಹೊನ್ನಾವರದಲ್ಲಿ ಕುವೈತ್​ನಿಂದ ಮರಳಿದ 35 ವರ್ಷದ ವ್ಯಕ್ತಿಯಲ್ಲಿ, ಪಿ-24097 ಸಂಪರ್ಕಕ್ಕೆ ಬಂದ 37 ವರ್ಷದ ವ್ಯಕ್ತಿಯಲ್ಲಿ, ಮುಂಡಗೋಡಿನ ವ್ಯಾಪಾರಸ್ಥರ ಸಂಪರ್ಕಕ್ಕೆ ಬಂದ 26 ವರ್ಷದ ವ್ಯಕ್ತಿಗೆ, 51 ವರ್ಷದ ಇನ್ನೊಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಕಾರವಾರದಲ್ಲಿ ಗೋವಾದಿಂದ ಮರಳಿದ 40 ವರ್ಷದ ವ್ಯಕ್ತಿಗೆ. ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 42 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

    ಹಡಗಿನಿಂದಲೂ ಬಂತು: ಡಾಂಬರ್ ತುಂಬಿಕೊಂಡು ಇರಾಕ್​ನಿಂದ ಆಗಮಿಸಿದ್ದ ಬೀ ಪ್ರಿನ್ಸಸ್ ಹಡಗಿನಲ್ಲಿ ಬಂದ ಮೂವರಿಗೆ ಕೋವಿಡ್-19 ಇರುವುದು ಗುರುವಾರ ದೃಢಪಟ್ಟಿದೆ. ಹಡಗಿನಲ್ಲಿ ಸಾಕಷ್ಟು ದಿನದಿಂದ ಕಾರ್ಯನಿರ್ವಹಿಸುತ್ತಿದ್ದ ದೇಶದ ವಿವಿಧ ರಾಜ್ಯಗಳ 6 ಜನರನ್ನು ಡೈರೆಕ್ಟರ್ ಜನರಲ್ ಆಫ್ ಶಿಪ್ಪಿಂಗ್​ನಿಂದ ಅನುಮತಿ ಪಡೆದು ಇಲ್ಲಿ ಇಳಿಸಲಾಗಿತ್ತು. ಇನ್ನು ಆರು ಜನ ಸಿಬ್ಬಂದಿ ಇಲ್ಲಿಂದ ಹಡಗಿಗೆ ಹತ್ತಿದ್ದರು. ಇಳಿದವರನ್ನು ಕೋಡಿಬಾಗದ ಹೋಟೆಲ್​ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅವರಲ್ಲಿ ಮೂರು ಜನರಿಗೆ ಸೋಂಕು ದೃಢಪಟ್ಟಿದೆ. ಆದರೆ, ಅವರು ಬೇರೆ ಯಾರ ಸಂಪರ್ಕಕ್ಕೂ ಬಂದಿಲ್ಲ ಎಂದು ಬಂದರು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಶೇಡಿಕಟ್ಟಾದ ವ್ಯಕ್ತಿ ಬಿಡುಗಡೆ: ಕರೊನಾದಿಂದ ತೀವ್ರ ಗಂಭೀರ ಪರಿಸ್ಥಿತಿ ತಲುಪಿದ್ದ ಅಂಕೋಲಾ ಅಗ್ರಗೋಣ ಶೆಡಿಕಟ್ಟಾದ 45 ವರ್ಷದ ವ್ಯಕ್ತಿ ಶನಿವಾರ ಸಂಪೂರ್ಣ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಕ್ರಿಮ್್ಸ ವೈದ್ಯರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಮಗಳ ಮದುವೆಗಾಗಿ ಓಡಾಟ ಮಾಡುವ ಸಂದರ್ಭದಲ್ಲಿ ಸೋಂಕು ಅಂಟಿಸಿಕೊಂಡಿದ್ದ ಅವರು ಊರೆಲ್ಲ. ಓಡಾಡಿದ್ದರು. ಅಂಕೋಲಾದ ಖಾಸಗಿ ಆಸ್ಪತ್ರೆ, ಗೋಕರ್ಣದ ಸರ್ಕಾರಿ ವೈದ್ಯರಲ್ಲಿ ಚಿಕಿತ್ಸೆ ಪಡೆದಿದ್ದರು. ವಾರದ ನಂತರ ಕರೊನಾ ಖಚಿತವಾಗಿ ಕ್ರಿಮ್್ಸ ಆಸ್ಪತ್ರೆಗೆ ಜೂನ್ 26 ರಂದು ದಾಖಲಾಗಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಅವರ ಪರಿಸ್ಥಿತಿ ಗಂಭೀರವಾಗಿತ್ತು. ಕ್ರಿಮ್್ಸ ತೀವ್ರ ನಿಗಾ ಘಟಕದಲ್ಲಿ ಅವರನ್ನಿರಿಸಿ ಚಿಕಿತ್ಸೆ ನೀಡಲಾಗಿದ್ದು, 15 ದಿನದ ನಂತರ ಬಿಡುಗಡೆ ಮಾಡಲಾಗಿದೆ. ಅವರೊಬ್ಬರಿಂದ ಸುಮಾರು ಅಂಕೋಲಾದ ಸುಮಾರು 20 ಜನರಿಗೆ ಸೋಂಕು ತಗುಲಿತ್ತು. ಮುಂಡಗೋಡಿನ 73 ವರ್ಷದ ವೃದ್ಧ, ಇಬ್ಬರು ಯುವತಿಯರು, ದಾಂಡೇಲಿಯ ಮಹಿಳೆ, ಹಳಿಯಾಳದ 2 ವರ್ಷದ ಬಾಲಕಿ ಸೇರಿ ಒಟ್ಟು 6 ಜನರನ್ನು ಶನಿವಾರ ಕ್ರಿಮ್್ಸ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಜು.9 ರಂದು ದಾಖಲಾದ ಕಾರವಾರ ಮೂಲದ 86 ವರ್ಷದ ಮಹಿಳೆ ಐಸಿಯುನಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ.

    ಮೃತನಿಗೆ ಕರೊನಾ ದೃಢ: ಬ್ರೇನ್ ಟ್ಯೂಮರ್​ನಿಂದ ಬಳಲುತ್ತಿದ್ದು, ಇಲ್ಲಿನ ಕ್ರಿಮ್್ಸ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟ 34 ವರ್ಷದ ವ್ಯಕ್ತಿಯಲ್ಲೂ ಕರೊನಾ ಇರುವುದು ಶನಿವಾರ ಖಚಿತವಾಗಿದೆ. ಅವರು ಹಲವು ದಿನಗಳಿಂದ ಜಿಲ್ಲಾ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿದ್ದರು. ಮೃತರ ಅಂತ್ಯಕ್ರಿಯೆಯನ್ನು ಹಣಕೋಣ ಗ್ರಾಪಂ ವ್ಯಾಪ್ತಿಯ ಮೈಂಗಿಣಿಯಲ್ಲಿ ನಡೆಸಲಾಗಿದೆ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಗೋಟೆಗಾಳಿಯ 72 ವರ್ಷದ ವೃದ್ಧೆಯನ್ನು ಇದೇ ವಿಶೇಷ ನಿಗಾ ಘಟಕಕ್ಕೆ ಸೇರಿಸಲಾಗಿತ್ತು. ಆಕೆಗೆ ಕರೊನಾ ಇರುವುದು ನಂತರ ಖಚಿತವಾಗಿದ್ದು, ಗುರುವಾರ ಮೃತಪಟ್ಟಿದ್ದರು. ಆಕೆಯಿಂದಲೇ ಸೋಂಕು ಹರಡಿರಬಹುದು ಎಂದು ಅಂದಾಜಿಸಲಾಗಿದೆ.ಆಕೆಯ ಮನೆಯವರು ಟ್ರಾವೆಲ್ ಹಿಸ್ಟರಿ ಮುಚ್ಚಿಟ್ಟ ಕಾರಣ ವೃದ್ಧೆಯನ್ನು ಸಾಮಾನ್ಯ ವಾರ್ಡ್ ಗೆ ಸೇರಿಸಲಾಗಿತ್ತು. ಇದರಿಂದ ಹಲವರಿಗೆ ಸೋಂಕು ಹರಡಲು ಕಾರಣವಾಗಿದೆ. ಆಕೆಗೆ ಚಿಕಿತ್ಸೆ ನೀಡಿದ ಒಟ್ಟು ಕ್ರಿಮ್್ಸ ಆಸ್ಪತ್ರೆಯ ಏಳು ಸಿಬ್ಬಂದಿಯಲ್ಲಿ ಕರೊನಾ ದೃಢಪಟ್ಟಿದೆ. ಇದರಿಂದ ಶುಕ್ರವಾರ ಹಾಗೂ ಶನಿವಾರ ಆಸ್ಪತ್ರೆಯ ಹೆರಿಗೆ ಹಾಗೂ ತುರ್ತು ಚಿಕಿತ್ಸಾ ವಿಭಾಗವನ್ನು ಹೊರತುಪಡಿಸಿ ಉಳಿದೆಲ್ಲ ವಿಭಾಗಗಳನ್ನು ಬಂದ್ ಮಾಡಲಾಗಿದೆ. ಭಾನುವಾರದಿಂದ ಮತ್ತೆ ಆಸ್ಪತ್ರೆ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ನಿರ್ದೇಶಕ ಡಾ.ಗಜಾನನ ನಾಯಕ ತಿಳಿಸಿದ್ದಾರೆ.

    ಒಬ್ಬನಿಂದ ಹಲವರಿಗೆೆ ವೈರಾಣು: ಕೋವಿಡ್ ಸೋಂಕಿತ ಪಿ-23156 ಶಿರಸಿಯ ಪಾಲಿಗೆ ಸೂಪರ್ ಸ್ಪ್ರೆಡರ್ ಆಗಿದ್ದಾರೆ. ವಾರದ ಹಿಂದೆ ಹುಬ್ಬಳ್ಳಿಗೆ ತೆರಳಿ ಸಗಟು ಮಾಲು ತಂದಿದ್ದ ನಗರದ ಟ್ರಾನ್ಸ್ ಪೋರ್ಟ್​ನ ಚಾಲಕನಿಗೆ (ಪಿ-23156) ನಾಲ್ಕೈದು ದಿನಗಳ ಹಿಂದೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಇವರ ಪತ್ನಿ ಇಲ್ಲಿನ ಬ್ಯಾಂಕ್​ನ ನೌಕರರಾಗಿದ್ದು ಅವರಿಗೂ ಸೋಂಕು ದೃಢಪಟ್ಟಿದೆ. ಅಲ್ಲದೆ, ಬ್ಯಾಂಕಿನ ಮೂವರು ನೌಕರರಿಗೆ ಹಾಗೂ ಅವರ ಸಂಪರ್ಕಕ್ಕೆ ಬಂದ ಇಬ್ಬರಿಗೆ ಕರೊನಾ ದೃಢಪಟ್ಟಿದೆ. ಅಲ್ಲದೆ, ಈ ಚಾಲಕ ಮಾರಿಕಾಂಬಾ ದೇವಿ ದರ್ಶನಕ್ಕೆ ನಿತ್ಯ ಬರುತ್ತಿದ್ದರು. ಈ ವೇಳೆ ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದ 13 ಜನ ದೇವಾಲಯದ ನೌಕರರಿಗೆ ಇದೀಗ ಸೋಂಕು ದೃಢಪಟ್ಟಿದೆ. ಜತೆಗೆ ಇಬ್ಬರು ನೌಕರರ ಕುಟುಂಬಸ್ಥರಿಗೆ ಸೋಂಕು ಕಾಣಿಸಿಕೊಂಡಿದೆ. ಎಲ್ಲ ಸೇರಿ 19 ಜನರಿಗೆ ಸೋಂಕು ಹರಡಿದೆ. ಚಾಲಕ ನಗರದ ವಿವಿಧ ಕಿರಾಣಿ ಅಂಗಡಿಗಳಿಗೆ ಕಿರಾಣಿ ಹಂಚಿದ್ದರು ಎನ್ನಲಾಗಿದೆ. ಇವರು ಎಲ್ಲೆಲ್ಲಿ ಓಡಾಡಿದ್ದಾರೆ? ಯಾರೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ? ಎಂಬುದು ಇನ್ನೂ ಅಸ್ಪಷ್ಟವಾಗಿದೆ.

    20 ರವರೆಗೆ ನಿರ್ಬಂಧ: ಜುಲೈ 20 ರವರೆಗೆ ಭಟ್ಕಳಕ್ಕೆ ಹೊರ ದೇಶ, ರಾಜ್ಯ, ಜಿಲ್ಲೆ, ತಾಲೂಕಿನವರು ಬಂದು ವಾಸ್ತವ್ಯ ಹೂಡುವುದನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಟ್ಕಳ ಶಿರಾಲಿ ಸಮೀಪ ಚೆಕ್​ಪೋಸ್ಟ್ ಮಾಡಲಾಗಿದೆ. ಪಟ್ಟಣಕ್ಕೆ ಬರುವ ಹಾಗೂ ಹೋಗುವ ಎಲ್ಲ ವಾಹನಗಳನ್ನು ಪೊಲೀಸರು ತಪಾಸಣೆಗೊಳಪಡಿಸುತ್ತಿದ್ದಾರೆ. ಜಿಲ್ಲೆಯ ಗಡಿಗಳಲ್ಲಿ ಯಾವುದೇ ಚೆಕ್​ಪೋಸ್ಟ್ ಪ್ರಾರಂಭಿಸಿಲ್ಲ.

    ವಿಡಿಯೋ ವೈರಲ್, ಸ್ಪಷ್ಟನೆ: ಕ್ರಿಮ್್ಸ ಕರೊನಾ ವಾರ್ಡ್​ನಲ್ಲಿ ಸ್ವಚ್ಛತೆ ಇಲ್ಲ ಎಂದು ಆರೋಪಿಸಿ ರೋಗಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಕುರಿತು ಕ್ರಿಮ್್ಸ ನಿರ್ದೇಶಕ ಡಾ.ಗಜಾನನ ನಾಯಕ ಸ್ಪಷ್ಟನೆ ನೀಡಿದ್ದು, ಕೋವಿಡ್-19 ನಿಯಮಾವಳಿಗಳಂತೆ ಕರೊನಾ ವಾರ್ಡ್​ನಲ್ಲಿ ಪ್ರತಿ ದಿನ ನಾಲ್ಕು ಗಂಟೆಗೆ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದುವರೆಗೆ 60 ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದು ಗುಣ ಹೊಂದಿದ್ದು, ಇಲ್ಲಿನ ವ್ಯವಸ್ಥೆಯ ಬಗ್ಗೆ ಖುಷಿಪಟ್ಟಿದ್ದಾರೆ. ಆದರೆ, ಒಂದು ದಿನದ ಹಿಂದೆ ದಾಖಲಾದ ಕಾರವಾರ ಮೂಲದ ವ್ಯಕ್ತಿ ವಾಸ್ತವವನ್ನು ಅರಿಯದೆ ವಿಡಿಯೋ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts