More

    ವಿವಾಹಿತೆ ಮನೆಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ ಸೆರೆ

    ಬೆಂಗಳೂರು: ವಿವಾಹಿತೆಯನ್ನ ಮದುವೆಯಾಗುವಂತೆ ಪೀಡಿಸಿ ಆಕೆ ಒಪ್ಪದಿದ್ದಕ್ಕೆ ಅವರ ಮನೆಗೆ ಬೆಂಕಿ ಹಚ್ಚಿದ್ದ ಆರೋಪಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
    ಅಬಾರ್ಜ್ (೨೪) ಬಂಧಿತ. ಆರೋಪಿಯು ಕೆ.ಜಿ.ಹಳ್ಳಿಯಲ್ಲಿ ವಾಸವಾಗಿದ್ದು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ದೂರುದಾರ ಮಹಿಳೆಗೆ ಆರೋಪಿಯು ಸಂಬಂಧಿಕನಾಗಿದ್ದ. ಮಹಿಳೆಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದು ಟೈಲರಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಇವರ ಪತಿ ಶಿವಾಜಿನಗರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದಾರೆ. ಸಾರಾಯಿಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ಮಹಿಳೆಯ ಕುಟುಂಬ ವಾಸವಾಗಿತ್ತು. ಈ ನಡುವೆ ಅಬಾರ್ಜ್ ಖಾನ್ ನಿನ್ನ ಪತಿಯನ್ನು ತೊರೆದು ತನ್ನೊಂದಿಗೆ ಮದುವೆಯಾಗುವಂತೆ ಮಹಿಳೆಗೆ ಪೀಡಿಸುತ್ತಿದ್ದ. ಈ ವಿಚಾರವನ್ನು ಮಹಿಳೆ ಪತಿಗೆ ತಿಳಿಸಿದ್ದಳು. ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆಸಿ ಮಹಿಳೆ ತಂಟೆಗೆ ಹೋಗದಂತೆ ಹಿರಿಯರು ಬೈದು ಬುದ್ದಿವಾದ ಹೇಳಿದ್ದರು. ಇಷ್ಟಾದರೂ ಅಬಾರ್ಜ್ ಆಕೆಯನ್ನು ಮದುವೆಯಾಗಬೇಕೆಂದು ಹಠಕ್ಕೆ ಬಿದಿದ್ದ. ಮಹಿಳೆಗೆ ಬೇರೊಂದು ನಂಬರ್‌ನಿಂದ ಮತ್ತೆ ಕರೆ ಮಾಡಿ ಮದುವೆ ಮಾಡಿಕೊಳ್ಳುವಂತೆ ದುಂಬಾಲು ಬಿದ್ದಿದ್ದ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕುಪಿತಗೊಂಡ ಆರೋಪಿ ಏ.೧೧ ರಂದು ರಂಜಾನ್ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾರು ಇಲ್ಲದಿರುವುದನ್ನ ಮನಗಂಡು ಆಕೆಯ ಮನೆಗೆ ಹೋಗಿ ಕಿಟಕಿ ತೆರೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಅಲ್ಲದೇ ಮಹಿಳೆಯ ಪತಿಗೆ ಕರೆ ಮಾಡಿ ನಿಮ್ಮ ಮನೆಗೆ ಬೆಂಕಿ ಬಿದ್ದಿದೆ ಎಂದು ಹೇಳಿದ್ದ. ಬೆಂಕಿಯ ತೀವ್ರತೆಗೆ ಕ್ಷಣಾರ್ಧದಲ್ಲಿ ಮನೆಯಲ್ಲಿದ್ದ ಪಿಠೋಪಕರಣಗಳು ಅಗ್ನಿಗೆ ಆಹುತಿಯಾಗಿತ್ತು. ಮನೆ ಬಳಿ ಹೋಗಿ ನೋಡುವಷ್ಟರಲ್ಲಿ ಅಗ್ನಿಶಾಮಕ ದಳ ಹಾಗೂ ಅಕ್ಕಪಕ್ಕದವರು ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಯ ಹಿಂದೆ ಅಬಾರ್ಜ್ ಕೈವಾಡ ಇದೆ ಎಂದು ಶಂಕಿಸಿ ಮಹಿಳೆಯು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts