More

    ವಿಲೇಜ್ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ


    ಮೈಸೂರು:
    ಮೈಸೂರು ವಿವಿಯ ವಿಲೇಜ್ ಹಾಸ್ಟೆಲ್‌ಗೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ಶುಕ್ರವಾರ ಹಾಸ್ಟೆಲ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು.


    ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಮೈಸೂರು ವಿಶ್ವವಿದ್ಯಾಲಯವೂ ಒಂದಾಗಿದೆ. ಇಲ್ಲಿ ಶಿಕ್ಷಣ ಪಡೆಯಲು ಹೊರ ರಾಜ್ಯ, ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ವಿವಿಯ ವಿಲೇಜ್ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಮೂಲ ಸೌಕರ್ಯಗಳಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ವಿಲೇಜ್ ಹಾಸ್ಟೆಲ್‌ನ ಬಹುತೇಕ ಎಲ್ಲ ಕೊಠಡಿಗಳು ಮಳೆಯಿಂದಾಗಿ ಶಿಥಿಲಗೊಂಡಿವೆ. ಅಲ್ಲದೆ ಬೆಡ್ ವ್ಯವಸ್ಥೆಯಿಲ್ಲದೆ ನೆಲದ ಮೇಲೆಯೇ ಮಲಗುವಂತಾಗಿದೆ. ಹಾಸ್ಟೆಲ್‌ಗಳ ಕೊಠಡಿಗಳಲ್ಲಿ ಫ್ಯಾನ್‌ಗಳಿಲ್ಲ ಮತ್ತು ಕೊಠಡಿಗಳ ಕಿಟಕಿಗಳೂ ಸರಿಯಾಗಿಲ್ಲದ ಕಾರಣ ಸೊಳ್ಳೆಗಳಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ ಎಂದು ಕಿಡಿ ಕಾರಿದರು.


    ಮುಖ್ಯವಾಗಿ ಸರಿಯಾದ ಶೌಚಗೃಹ ಮತ್ತು ಸ್ನಾನಗೃಹಗಳಿಲ್ಲ. ಎರಡು ಶೌಚಗೃಹ ಮತ್ತು ಸ್ನಾನಗೃಹಗಳನ್ನು 50 ರಿಂದ 60 ವಿದ್ಯಾರ್ಥಿಗಳು ಅವಲಂಬಿಸಿದ್ದಾರೆ. ಆದರೆ, ಆ ಎರಡು ಶೌಚಗೃಹ ಮತ್ತು ಸ್ನಾನಗೃಹಗಳು ಬಳಸಲು ಯೋಗ್ಯವಲ್ಲದ ಸ್ಥಿತಿಯಲ್ಲಿವೆ. ಹೀಗಾಗಿ ತಕ್ಷಣ ಹೆಚ್ಚುವರಿ ಶೌಚಗೃಹ ಮತ್ತು ಸ್ನಾನಗೃಹಗಳನ್ನು ನಿರ್ಮಾಣ ಮಾಡಬೇಕು. ಮತ್ತೊಂದೆಡೆ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಆಹಾರ ಒದಗಿಸುತ್ತಿದೆ. ನೀರಿನ ಟ್ಯಾಂಕ್ ಶುದ್ಧಗೊಳಿಸದೆ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂದು ದೂರಿದರು.
    ಜಿಲ್ಲಾ ಸಂಚಾಲಕ ಟಿ.ಎಸ್.ವಿಜಯ್‌ಕುಮಾರ್, ಕಾರ್ಯದರ್ಶಿ ಸಿ.ವೀರಭದ್ರಯ್ಯ ಮತ್ತಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts