More

    ರಾಮೋತ್ಸವ ಆಚರಣೆಗೆ ದೇವನಗರಿ ಸಜ್ಜು

    ದಾವಣಗೆರೆ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರ ರಾಮೋತ್ಸವ ಆಚರಣೆಗೆ ನಗರ ಸಜ್ಜುಗೊಂಡಿದೆ. ವಿಶೇಷ ಪೂಜೆ, ಅಲಂಕಾರ ಇತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಸಿದ್ಧತೆ ಪೂರ್ಣಗೊಂಡಿವೆ.
    ನಗರದ ಶ್ರೀರಾಮ, ಆಂಜನೇಯ ದೇವಸ್ಥಾನಗಳು ವಿದ್ಯುದಲಂಕಾರದೊಂದಿಗೆ ಕಳೆಗಟ್ಟಿವೆ. ಎಲ್ಲ ಮೂರ್ತಿಗಳಿಗೂ ವಿಶೇಷ ಅಲಂಕಾರದ ಜತೆಗೆ ವಿಶೇಷ ಆರಾಧನೆ, ಪ್ರಸಾದ ವಿತರಣೆ ಮಾಡಲು ವಿವಿಧ ದೇಗುಲ ಮಂಡಳಿಗಳು ಸಜ್ಜಾಗಿವೆ. ಸಂಜೆಯ ದೀಪಾರಾಧನೆಗೂ ವಿವಿಧ ಹಿಂದು ಸಂಘಟನೆಗಳು ತಯಾರಿ ಮಾಡಿಕೊಂಡಿವೆ.
    ಪ್ರಮುಖ ವೃತ್ತ, ರಸ್ತೆಗಳಲ್ಲಿ ಕೇಸರಿ ಬಾವುಟ, ಬಂಟಿಂಗ್ಸ್‌ಗಳು, ಶ್ರೀರಾಮ, ಆಂಜನೇಯ ಸ್ವಾಮಿಯ ಕಟೌಟ್‌ಗಳು ರಾರಾಜಿಸುತ್ತಿವೆ. ರಾಂ ಆ್ಯಂಡ್ ಕೋ ವೃತ್ತದಲ್ಲಿ ರಾಮಾಯಣದ ಚರಿತ್ರೆ ವಿವರಿಸುವ ನಾನಾ ವಿಧದ ಚಿತ್ರಪ್ರದರ್ಶನಗಳ ಝಲಕ್ ರಾಮಭಕ್ತರನ್ನು ಸೆಳೆಯುತ್ತಿದೆ.
    ಪ್ರತಿ ಐದು ವರ್ಷಕ್ಕೊಮ್ಮೆ ಬರಲಿದೆ ಎನ್ನಲಾದ ಸಂಜೀವಿನಿ ಮುಹೂರ್ತ (ಮಧ್ಯಾಹ್ನ 12-20ಕ್ಕೆ)ದಲ್ಲಿ ದಾವಣಗೆರೆ ಮಂಡಿಪೇಟೆ ಸಮೀಪದ ಪುರಾತನ ಕೋದಂಡರಾಮನ ದೇವಸ್ಥಾನದಲ್ಲಿ ಡೊಳ್ಳು, ವಾಲಗದ ಮೇಳದೊಂದಿಗೆ ವಿಶೇಷ ಪೂಜೆ, ಪ್ರಸಾದ ವಿತರಣೆ, ಸಂಜೆ ದೀಪೋತ್ಸವ ನಡೆಯಲಿದೆ. ಪಿ.ಬಿ.ರಸ್ತೆಯ ಕೋದಂಡರಾಮನ ದೇಗುಲದಲ್ಲೂ ಬೆಳಗ್ಗೆ 10ರಿಂದ ರಾಮತಾರಕ ಹೋಮ ನೆರವೇರಲಿದೆ.
    ಪಿ.ಜೆ.ಬಡಾವಣೆಯ ಖಮಿತ್ಕರ್ ಈಶ್ವರಪ್ಪನವರ ಶ್ರೀರಾಮ ದೇವಸ್ಥಾನ ಆವರಣದಲ್ಲಿ ಇಡೀ ದಿನ ಸರಣಿ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 5-30ರಿಂದ ಪತಂಜಲಿ ಯೋಗ ಸಮಿತಿಯಿಂದ ಯೋಗ ಶಿಬಿರ, ಶ್ರೀ ರಾಮನಾಮ ಜಪ ಪಠಣ, ಹನುಮಾನ್ ಚಾಲೀಸ, ವಿಷ್ಣು ಸಹಸ್ರನಾಮ ಹಾಗೂ ಅಗ್ನಿಹೋತ್ರಿ ಹೋಮ ನಡೆಯಲಿದೆ.
    ನಂತರ ಶ್ರೀರಾಮನ ಮೂಲ ಮೂರ್ತಿಗೆ ರುದ್ರಮಂತ್ರ, ಅಭಿಷೇಕ, ದರ್ಶನ ಗಣಹೋಮ, ನವಗ್ರಹ ಹೋಮ, ರಾತಾರಕ ಹೋಮ, ನಂತರ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 4ರಿಂದ ಭಜನೆ ಕಾರ್ಯಕ್ರಮವಿದೆ. 6-30ರಿಂದ ದೀಪೋತ್ಸವವಿದೆ. ನಂತರ ಚಂಡೆ ವಾದ್ಯಗಾರಿಕೆ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳ ರಂಜನೆ ಇದೆ.
    ಕಳೆದ ಮೂರು ದಿನಗಳಿಂದ ಶಂಕರಮಠದಲ್ಲಿನ ಶ್ರೀರಾಮ ದೇವರ ದರ್ಶನ ಭಾಗ್ಯ ದೊರೆತಿದೆ. ಬೆಳಗ್ಗೆ 5-30ಕ್ಕೆ ಅಭಿಷೇಕ, 10 ಗಂಟೆಗೆ ಶ್ರೀರಾಮ ತರಕ ಜಪ ಯಜ್ಞಾಂಗ ಹೋಮ, ಮಧ್ಯಾಹ್ನ 12 ಗಂಟೆಗೆ ಮಹಾಮಗಳಾರತಿ, ಪ್ರದಾಸ ವಿನಿಯೋಗ, ಸಂಜೆ 5 ಗಂಟೆಗೆ ಶ್ರೀ ವಿಷ್ಣು ಸಹಸ್ರಸಾಮ, ಶ್ರೀರಾಮ ಭಜನೆ, ಶ್ರೀರಾಮ ಪಲ್ಲಕ್ಕಿ ಉತ್ಸವ ಹಾಗೂ ದೀಪೋತ್ಸವ ನೆರವೇರಲಿವೆ.
    ಮಹಾರಾಜಪೇಟೆಯ ಶ್ರೀ ವಿಠ್ಠಲ ಮಂದಿರದಲ್ಲಿಯೂ ಬೆಳಗ್ಗೆ 9 ಗಂಟೆಗೆ ಶ್ರೀ ರಾಮ ತಾರಕ ಹೋಮ, 10-30ಕ್ಕೆ ಜಗನ್ನಾಥ ನಾಡಿಗೆರ ಅವರಿಂದ ಶ್ರೀರಾಮ ಕಥಾಮೃತ ಪ್ರವಚನ ನಡೆಯಲಿದೆ. ಅಲ್ಲಿಯೇ ಅಯೋದ್ಯೆ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ.
    ಮಧ್ಯಾಹ್ನ 3-30ಕ್ಕೆ ಶ್ರೀ ದುರ್ಗಾ ಮಹಿಳಾ ಮಂಡಳಿಯಿಂದ ಭಗವದ್ಗೀತಾ ವಾಚನ, ಭಾವಸಾರ ವಿಜನ್ ಇಂಡಿಯಾ ಮಹಿಳಾ ಮಂಡಳಿ, ರುಕುಮಾಯಿ ಮಂಡಳಿಯಿಂದ ಭಜನೆ, ಸಂಜೆ 6-30ಕ್ಕೆ ಕಲವತಿ ಮಹಿಳಾ ಮಂಡಳಿಯಿಂದ ಶುದ್ಧ ಬ್ರಹ್ಮ ಪರಾತ್ಪರ ರಾಮ ಭಜನೆ, ನಂತರ ದೀಪೋತ್ಸವದೊಂದಿಗೆ 1008 ಶ್ರೀ ರಾಮತರಕ ನಾಮಜಪ ನಡೆಯಲಿದೆ.
    ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ನಗರದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಬೆಳಗ್ಗೆ 10 ಗಂಟೆಗೆ ಶ್ರೀರಾಮ ತರಕ ಹೋಮ, ಭಜನೆ ಆಯೋಜಿಸಲಾಗಿದೆ. ಲಿಂಗೇಶ್ವರ ದೇವಸ್ಥಾನ ಸೇರಿ ವಿವಿಧ ದೇಗುಲಗಳಲ್ಲಿಯೂ ವಿಶೇಷ ಪೂಜಾ ಕೈಂಕರ್ಯ ನೆರವೇರಲಿವೆ.

    55 ಸಾವಿರ ದೀಪ ಪ್ರಜ್ವಲನೆ
    ಎಂಸಿಸಿ ಎ ಬ್ಲಾಕ್‌ನಲ್ಲಿ ಹಿಂದು ಯುವಶಕ್ತಿ ಸಂಘಟನೆ ವತಿಯಿಂದ ಸಂಜೆ 7-30ಕ್ಕೆ 55 ಸಾವಿರ ದೀಪಗಳ ಪ್ರಜ್ವಲನೆ ಕಾರ್ಯಕ್ರಮ ನಡೆಯಲಿದೆ. ಹತ್ತಿಕಳು, ಎಳ್ಳುಬತ್ತಿಯನ್ನು ಸಿದ್ದತೆ ಮಾಡಿಕೊಂಡಿರುವ ಸಂಘಟನೆಯವರು ಬಡಾವಣೆಯ ಎಲ್ಲ ಮನೆಗಳವರಿಗೆ ದೀಪ ಹಚ್ಚಲು ಅವಕಾಶ ನೀಡಿದ್ದಾರೆ. ಬೆಳಗ್ಗೆ ಮಹಿಳಾ ಮಂಡಳಿಯಿಂದ ಹನುಮಾನ್ ಚಾಲೀಸ ಪಠಣ ನಡೆಯಲಿದೆ.
    ನೇರ ಪ್ರಸಾರಕ್ಕೆ ವ್ಯವಸ್ಥೆ
    ಅಯೊಧ್ಯೆಯಲ್ಲಿ ಬಾಲರಾಮ ಮೂರ್ತಿಯ ಪ್ರತಿಷ್ಠಾಪನೆಯ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ನಗರದ 15ಕ್ಕೂ ಹೆಚ್ಚು ಕಡೆಗಳಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಸರಸ್ವತಿ ನಗರದ ಪಂಚಮುಖಿ ಆಂಜನೇಯ ದೇವಸ್ಥಾನ, ಶಿವಕುಮಾರ ಸ್ವಾಮಿ ಬಡಾವಣೆಯ ಆಂಜನೇಯ ದೇವಸ್ಥಾನ, ವಿನೋಬನಗರದ ಗಣೇಶ ದೇವಸ್ಥಾನಗಳಲ್ಲಿ ಈ ವ್ಯವಸ್ಥೆ ಇದೆ. ಶಂಕರಮಠದಲ್ಲಿ ಭಕ್ತರಿಗೆ ಟಿವಿ ವ್ಯವಸ್ಥೆ ಮಾಡಲಾಗಿದೆ.
    ಭಕ್ತರ ದೇಣಿಗೆಯಲ್ಲಿ ಅನ್ನದಾನ
    ಜಯದೇವ ವೃತ್ತ, ಅಶೋಕ ರಸ್ತೆ, ಪ್ರೆಸ್‌ಕ್ಲಬ್ ಆವರಣ, ದೊಡ್ಡಪೇಟೆ ಗಣೇಶ ದೇವಸ್ಥಾನ, ಗಿರಿ ಟಾಕೀಸ್ ವೃತ್ತ, ಅರಳೀಮರ ವೃತ್ತ, ಚೌಕಿಪೇಟೆ, ವೀರಮದಕರಿನಾಯಕ ವೃತ್ತ, ನಿಟುವಳ್ಳಿ ಸೇರಿ ಸುಮಾರು 100 ಕಡೆಗಳಲ್ಲಿ ಅನ್ನ ಸಂತರ್ಪಣೆ, ಉಪಾಹಾರ ಸಿಹಿ ವಿತರಣೆ ನಡೆಯಲಿದೆ. ಭಕ್ತರು, ವರ್ತಕರು, ಕಿರಾಣಿ ಅಂಗಡಿಗಳವರು ದೇಣಿಗೆ-ಧಾನ್ಯದ ರೂಪದಲ್ಲಿ ಭಕ್ತಿ ಸಮರ್ಪಿಸಿದ್ದಾರೆ. ಚಾಮರಾಜಪೇಟೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರೇ ಪ್ರಸಾದದ ವ್ಯವಸ್ಥೆ ಮಾಡಿದ್ದಾರೆ.
    ಉಚಿತ ದೋಸೆ- ಹೋಳಿಗೆಯೂಟ!
    ದೇವರಾಜ ಅರಸು ಬಡಾವಣೆಯ ಸಿ ಬ್ಲಾಕ್‌ನ ಒಂದನೇ ತಿರುವಿನಲ್ಲಿ ಮಹಿಳೆಯರು ಅಣಿಗೊಳಿಸಲಿರುವ 1 ಸಾವಿರ ಹೋಳಿಗೆ ಪ್ರಸಾದ ವಿತರಣೆ ಮಧ್ಯಾಹ್ನ ನಡೆಯಲಿದೆ.
    ಜಯನಗರದ ಮಂಜುನಾಥ ಬೆಣ್ಣೆದೋಸೆ ಹೋಟೆಲ್‌ನಲ್ಲಿ ಸುಮಾರು 1 ಸಾವಿರ ಜನರಿಗೆ ಬೆಳಗ್ಗೆ 7ರಿಂದಲೇ ಉಚಿತ ಬೆಣ್ಣೆದೋಸೆ ವಿತರಣೆ ನಡೆಯಲಿದೆ. ಸ್ವಯಂಸ್ಪೂರ್ತಿಯಿಂದ ಈ ಸೇವೆ ಮಾಡುತ್ತಿದ್ದು ಸುಮಾರು 50 ಕೆಜಿ ಅಕ್ಕಿ ಬಳಸಲಾಗುತ್ತಿದೆ ಎಂದು ಹೋಟೆಲ್ ಮಾಲೀಕ ಡಿ.ಯು.ಮಹೇಶ್ ತಿಳಿಸಿದರು.
    71 ಜನರಿಂದ ರಕ್ತದಾನ
    ರಾಮೋತ್ಸವದ ಹಿನ್ನೆಲೆಯಲ್ಲಿ ಭಾನುವಾರ, ದೊಡ್ಡಪೇಟೆಯ ನಾಮದೇವ ಕಲ್ಯಾಣಮಂಟಪದಲ್ಲಿ ಜನನಿ ಫೌಂಡೇಷನ್ ವತಿಯಿಂದ ರಕ್ತದಾನ ಶಿಬಿರ ನಡೆಯಿತು. 71 ಮಂದಿ ಸಾರ್ವಜನಿಕರು ರಕ್ತದಾನ ಮಾಡಿದರು. ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಶಿಬಿರಕ್ಕೆ ಚಾಲನೆ ನೀಡಿ ಶುಭ ಕೋರಿದರು.
    ಮಾಜಿ ಮೇಯರ್ ಎಸ್.ಟಿ.ವೀರೇಶ್, ಆರೆಸ್ಸೆಸ್ ಮುಖಂಡ ವಿನಾಯಕ ರಾನಡೆ, ಜನನಿ ಫೌಂಡೇಷನ್‌ನ ಸದಸ್ಯರಾದ ಸುರೇಶ್, ರಾಕೇಶ್, ಸುರೇಶ್‌ಕುಮಾರ್, ಮಲ್ಲಿಕಾರ್ಜುನ, ವಿನೋದ್‌ರಾಜ್ ಸಾಳಂಕಿ, ಬದರೀನಾಥ್, ಆನಂದ್, ಪವನ್‌ಕುಮಾರ್ ಇತರರಿದ್ದರು.
    ಪಂಜಿನ ಮೆರವಣಿಗೆ
    ಸಿದ್ದವೀರಪ್ಪ ಬಡಾವಣೆಯ ಶ್ರೀ ವಿನಾಯಕ ಗಳೆಯರ ಬಳಗ ಹಾಗೂ ಯಶಸ್ವಿ ಯುವಕರ ಸಂಘ, ಸಾಧನಾ ಮಹಿಳಾ ಸಂಘ, ನಾಗರಿಕರ ಹಿತರಕ್ಷಣಾ ಸಮಿತಿ ಸಹಯೋಗದಲ್ಲಿ ಭಾನುವಾರ ಸಂಜೆ ಭಾವೈಕ್ಯತಾ ಪಂಜಿನ ಮೆರವಣಿಗೆ ನಡೆಸಲಾಯಿತು.
    ಸಿದ್ದವೀರಪ್ಪ ಬಡಾವಣೆಯ ಮೂರನೇ ತಿರುವಿನಿಂದ ಆರಂಭವಾದ ಮೆರವಣಿಗೆಯು ಶಾಮನುರು ರಸ್ತೆ, ಬಿಐಇಟಿ ರಸ್ತೆ, ದಂತ ವೈದ್ಯಕೀಯ ಕಾಲೇಜು ರಸ್ತೆ ಮೂಲಕ ಸ್ವಸ್ಥಾನಕ್ಕೆ ಮರಳಿತು. ಮೆರವಣಿಗೆಯುದ್ದಕ್ಕೂ ಜೈ ಶ್ರೀ ರಾಮ್ ಘೋಷಣೆ ಮೊಳಗಿತು.
    ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಕೆ.ಜಿ.ಕೆ.ಸ್ವಾಮಿ, ನಾಗರಾಜ ಚಿಟಾಕಿ, ಅರುಣ್‌ಕುಮಾರ್, ಸತೀಶ್, ಮಂಜುನಾಥ, ನಟರಾಜ್ ಇತರರು ಪಾಲ್ಗೊಂಡಿದ್ದರು.
    ಕೀರ್ತನೆ-ಭಕ್ತಿಗೀತೆಗಳ ಗಾಯನ
    ಜಯದೇವ ವೃತ್ತದಲ್ಲಿ ಪ್ರೇರಣಾ ಯುವ ಸಂಘ, ಹಿಂದು ಜಾಗರಣ ವೇದಿಕೆ ವತಿಯಿಂದ ಆಯೋಜಿಸಿದ್ದ ವೇದಿಕೆಯಲ್ಲಿ ಶ್ರೀಕಾಂತ್ ಭಟ್, ಜ್ಞಾನಶ್ರೀ ಇತರ ಕಲಾವಿದರು ಶ್ರೀರಾಮ, ಹನುಮ ದೇವರು ಹಾಗೂ ಇತರೆ ಗೀತೆಗಳನ್ನು ಪ್ರಸ್ತುತಪಡಿಸಿದರು. ಚಿತ್ರಕಲಾ ಕಲಾವಿದ ಶಾಂತಯ್ಯ ಪರಡಿಮಠ ಸ್ಥಳದಲ್ಲೇ ಚಿತ್ರ ಬರೆದು ಗಮನ ಸೆಳೆದರು.
    ಭಜನೆ ಸಹಿತ ಮೆರವಣಿಗೆ
    ನಗರದ ವಿವಿಧ ಭಜನಾ ಮಂಡಳಿಗಳ ಮಹಿಳೆಯರು ಶ್ರೀರಾಮನ ನಡಿಗೆ ಅಯೋಧ್ಯೆ ಕಡೆಗೆ ಶೀರ್ಷಿಕೆಯಡಿ ಬಾಪೂಜಿ ಶಾಲೆ ಆವರಣದಿಂದ ಶಿವಧ್ಯಾನಮಂದಿರವರೆಗೆ ಭಜನೆಯೊಂದಿಗೆ ಮೆರವಣಿಗೆ ನಡೆಸಿದರು. ಶ್ರೀರಾಮ, ಸೀತೆ, ಲಕ್ಷ್ಮಣ ವೇಷಧಾರಿ ಮಕ್ಕಳೊಂದಿಗೆ ಮುಖಂಡರಾದ ಡಿ.ಟಿ.ಸುಧೀಂದ್ರಕುಮಾರ್, ಪರಶುರಾಂ ನಡುಮನಿ, ಆರುಂಧತಿ ವೇಣುಗೋಪಾಲ್, ಕೃಷ್ಣವೇಣಿ, ಸುಧಾ ರಮೇಶ್, ಶೋಭಾ ಇತರರಿದ್ದರು.
    ಬಾವುಟ ಅಳವಡಿಕೆ
    ವೀರಮದಕರಿನಾಯಕ ವೃತ್ತದಲ್ಲಿ ಆಟೊ ಇತರ ವಾಹನಗಳಿಗೆ ಪ್ರೇರಣಾ ಸಂಸ್ಕೃತಿಕ ಸಂಸ್ಥೆ ವತಿಯಿಂದ ಶ್ರೀರಾಮನ ಭಾವಚಿತ್ರವಿರುವ ಬಾವುಟಗಳನ್ನು ಕಟ್ಟಲಾಯಿತು. ಮಜ್ಜಿಗೆ, ಸಿಹಿ ವಿತರಣೆ ಮಾಡಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಚಾಲನೆ ನೀಡಿದರು. ಡಾ.ರವಿಕುಮಾರ್, ಬಾಡದ ಆನಂದರಾಜ್, ಕಟ್ಟಿಗೆ ಡಿಪೋ ಶಿವಕುಮಾರ್, ಚೇತನಾ ಶಿವಕುಮಾರ್, ಸುಶೀಲಮ್ಮ, ಅಕ್ಕಮ್ಮ, ಗಾಯತ್ರಿ, ಗೀತಾ ರಾಯ್ಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts