More

    ರಾಜ್ಯ ಪಮಿರ್ಟ್​ ಇಲ್ಲದ ಬಸ್​ಗಳು ವಶಕ್ಕೆ

    ಬೆಂಗಳೂರು: ರಾಜ್ಯ ಪಮಿರ್ಟ್​ ಪಡೆಯದೆ ಅಂತಾರಾಜ್ಯ ಬಸ್​ ಸೇವೆ ನೀಡುತ್ತಿದ್ದ 4 ಬಸ್​ಗಳನ್ನು ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೋಮವಾರ ವಶಕ್ಕೆ ಪಡೆದಿದ್ದಾರೆ.
    ವಾಹನ ತೆರಿಗೆ ವಂಚನೆ ತಡೆ ಕುರಿತು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಸಾರಿಗೆ ಇಲಾಖೆ ವಾಹನ ತಪಾಸಣೆ ಪ್ರಮಾಣ ಹೆಚ್ಚಿಸಿದೆ. ಅದರಂತೆ ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಳೆದ ಮೂರು ದಿನಗಳ ಹಿಂದಷ್ಟೇ 15 ಲಕ್ಷ ರೂ. ತೆರಿಗೆ ವಂಚನೆ ಮಾಡಿದ್ದ ಬೆಂಜ್​ ಕಾರನ್ನು ವಶಕ್ಕೆ ಪಡೆದಿದ್ದರು. ಇದೀಗ ಸೋಮವಾರ ಹೈದರಾಬಾದ್​ ರಸ್ತೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದು, ರಾಜ್ಯದ ಪಮಿರ್ಟ್​ ಪಡೆಯದೆ ಸಂಚರಿಸುತ್ತಿದ್ದ 4 ಬಸ್​ಗಳನ್ನು ಜಪ್ತಿ ಮಾಡಿದ್ದಾರೆ.
    ಎಆರ್​, ಎನ್​ಎಲ್​ ನೋಂದಣಿ:
    ವಶಕ್ಕೆ ಪಡೆಯಲಾಗಿರುವ ಬಸ್​ಗಳು ಜಬ್ಬಾರ್​ ಮತ್ತು ಆರೆಂಜ್​ ಸಂಸ್ಥೆಯ ನಾಮಲಕ ಹೊಂದಿದ್ದು, ನಾಗಲ್ಯಾಂಡ್​ ಮತ್ತು ಅರುಣಾಚಲಪ್ರದೇಶದಲ್ಲಿ ನೋಂದಣಿ ಮಾಡಿದಂತಹವಾಗಿವೆ. ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಾಶ್​ ಮತ್ತು ವಾಹನ ನಿರೀಕ್ಷಕ ರಾಜ್​ಕುಮಾರ್​ ನೇತೃತ್ವದ ತಂಡ ನಡೆಸಿದ ಪರಿಶೀಲನಾ ಕಾರ್ಯದ ವೇಳೆ, ಬಸ್​ಗಳ ದಾಖಲೆಗಳನ್ನು ನೀಡುವಂತೆ ಕೋರಿದ್ದಾರೆ. ಆದರೆ, ಬಸ್​ ಚಾಲಕರಲ್ಲಿ ರಾಜ್ಯದ ಪಮಿರ್ಟ್​ ಇಲ್ಲದಿರುವುದು ತಿಳಿದುಬಂದಿದೆ. ಹೀಗಾಗಿ ಅವುಗಳನ್ನು ವಶಕ್ಕೆ ಪಡೆದು ದಾಖಲೆ ಸಲ್ಲಿಸಿ ಬಸ್​ಗಳನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
    ದಂಡದ ಮೊತ್ತ ಲೆಕ್ಕ ಹಾಕಬೇಕಿದೆ:

    ಸದ್ಯ ಬಸ್​ ಮಾಲೀಕರಿಗೆ ದಾಖಲೆ ಸಲ್ಲಿಸುವಂತೆ ಯಲಹಂಕ ಆರ್​ಟಿಒದಿಂದ ನೋಟಿಸ್​ ನೀಡಲಾಗಿದೆ. ದಾಖಲೆ ಸಲ್ಲಿಸಿದ ನಂತರ, ತೆರಿಗೆ ಎಷ್ಟು ಬಾಕಿ ಇದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಒಂದು ವೇಳೆ ದಾಖಲೆಗಳಿಲ್ಲದಿದ್ದರೆ ಅದಕ್ಕೆ ಎಷ್ಟು ತೆರಿಗೆ ಮತ್ತು ದಂಡ ವಿಧಿಸಬೇಕು ಎಂಬುದನ್ನು ಅಧಿಕಾರಿಗಳು ಲೆಕ್ಕ ಹಾಕಿ, ಅದನ್ನು ಬಸ್​ ಮಾಲೀಕರಿಂದ ವಸೂಲಿ ಮಾಡಲು ನಿರ್ಧರಿಸಲಾಗಿದೆ.

    ವಾಹನ ತೆರಿಗೆ ವಂಚನೆ ಸೇರಿ ಸಾರಿಗೆ ಇಲಾಖೆ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಸೋಮವಾರ ಕಾರ್ಯಾಚರಣೆ ವೇಳೆ ನಾಲ್ಕು ಬಸ್​ಗಳನ್ನು ವಶಕ್ಕೆ ಪಡೆಯಲಾಗಿದ್ದು, ಈ ಕಾರ್ಯಾಚರಣೆ ಮುಂದುವರಿಸಲಾಗುವುದು.
    ಪ್ರಕಾಶ್​, ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts