More

    ರಾಜ್ಯದಲ್ಲಿ ಬಿಜೆಪಿಗೇ ಸ್ಪಷ್ಟ ಬಹುಮತ

    ಹನೂರು: ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರುವುದರ ಜತೆಗೆ ಹನೂರಿನಲ್ಲಿ ಈ ಬಾರಿ ಕಮಲ ಅರಳುವುದು ಗ್ಯಾರಂಟಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
    ಪಟ್ಟಣದ ಆರ್.ಎಸ್ ದೊಡ್ಡಿ ಶ್ರೀ ಮಹದೇಶ್ವರ ದೇಗುಲದಲ್ಲಿ ಶುಕ್ರವಾರ ಪೂಜೆ ಸಲ್ಲಿಸಿದ ಬಳಿಕ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಹನೂರಿನವರೆಗೆ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಮತಯಾಚಿಸಿ ಮಾತನಾಡಿದರು.
    ಹನೂರು ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕಿದ್ದು, ಪ್ರಜ್ಞಾವಂತ ಮತದಾರರು ಬದಲಾವಣೆ ಬಯಸಿದ್ದಾರೆ. ಅದರಂತೆಯೇ ಪಕ್ಷದ ಕಾರ್ಯಕರ್ತರು ಹಗಲಿರುಳೆನ್ನದೆ ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕ್ಷೇತ್ರದಲ್ಲಿ ದಿ.ನಾಗಪ್ಪ ಅವರು ಅಧಿಕಾರವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಜನರಿಗೆ ಗೊತ್ತಿದೆ. ಈ ದಿಸೆಯಲ್ಲಿ ವೈದ್ಯ ವೃತ್ತಿಯಲ್ಲಿದ್ದ ಡಾ.ಪ್ರೀತನ್ ನಾಗಪ್ಪ ಅವರು ಕ್ಷೇತ್ರದ ಜನತೆಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋತಿದ್ದಾರೆ. ಆದ್ದರಿಂದ ಅವರ ತಾಳ್ಮೆಯನ್ನು ಪರೀಕ್ಷಿಸಬೇಡಿ. ಶಿಕಾರಿಪುರ ತಾಲೂಕಿನಂತೆ ಹನೂರು ಅಭಿವೃದ್ಧಿಯಾಗಬೇಕಾದರೆ ಬಿಜೆಪಿಯನ್ನು ಬೆಂಬಲಿಸುವುದರ ಮೂಲಕ ಪ್ರೀತನ್ ನಾಗಪ್ಪ ಅವರನ್ನು ಹೆಚ್ಚಿನ ಮತದ ಅಂತರದಿಂದ ಗೆಲ್ಲಿಸಬೇಕು ಈ ವಿಶ್ವಾಸ ನನಗಿದೆ ಎಂದರು.
    ಹನೂರು ಕ್ಷೇತ್ರದ ಜನರನ್ನು ಕೊಂಡುಕೊಳ್ಳುವ ಸಲುವಾಗಿ ಕೆಲವರು ಇತರೆಡೆಯಿಂದ ಖರೀದಿಗೆ ಬಂದಿದ್ದು, ಜನರ ಕಣ್ಣಿಗೆ ಮಣ್ಣೆರೆಚಿ ಚುನಾವಣೆಯಲ್ಲಿ ಗೆದ್ದು ಬಿಡಬಹುದೆಂದು ಭ್ರಮನಿರಶನವನ್ನು ಹೊಂದಿದ್ದಾರೆ. ಇದು ಎಂದಿಗೂ ಸಾಧ್ಯವಿಲ್ಲ. ಕ್ಷೇತ್ರದ ಜನರು ಸ್ವಾಭಿಮಾನಿಗಳು. ಸ್ವಾಭಿಮಾನಕ್ಕೆ ಬೆಲೆ ಕೊಡುವವರಲ್ಲ. ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಗುಡುಗಿದರು.
    ಇದಕ್ಕೂ ಮುನ್ನಾ ಅವರು ಕಾಮಗೆರೆಯ ಮಾಜಿ ಸಚಿವ ದಿ.ಎಚ್. ನಾಗಪ್ಪ ಸಮಾಧಿಗೆ ತೆರಳಿ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ, ಕಾಂಗ್ರೆಸ್‌ನವರಿಗೆ ಭ್ರಷ್ಟಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. 50 ವರ್ಷದ ಅವಧಿಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಹೇಗೆ ನಡೆಸಿಕೊಂಡಿದ್ದಾರೆ ಎಂಬುದನ್ನು ರಾಜ್ಯದ ಜನತೆ ಮರೆತಿಲ್ಲ. ಇದೀಗ ಕೆಲವರು ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಅನ್ಯಾಯವಾಗುತ್ತಿದೆ ಎಂದು ಬಿಂಬಿಸುವುದನ್ನು ಯಾರು ಒಪ್ಪಿಕೊಳ್ಳುವುದಿಲ್ಲ. ಬಿಜೆಪಿ ಎಲ್ಲ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಗ್ಗುತ್ತಿದೆ. ರಾಜ್ಯದಲ್ಲಿ 25 ಲೋಕಸಭಾ ಸ್ಥಾನವನ್ನು ಗೆದ್ದಿದ್ದೇವೆ. ಇಂತಹದರಲ್ಲಿ ಬಿಜೆಪಿ ಬಗ್ಗೆ ಕಾಂಗ್ರೆಸ್ಸಿಗರ ಹೇಳಿಕೆ ಹಾಸ್ಯಸ್ಪದ ಎಂದರು.
    ಯಡಿಯೂರಪ್ಪ ಅವರ ರಟ್ಟೆ ಗಟ್ಟಿ ಇದೆ : ಯಡಿಯೂರಪ್ಪ ಅವರು ಮುಖ್ಯಮಂತ್ರಿಯಲ್ಲ. ಪಕ್ಷದ ಅಧ್ಯಕ್ಷರೂ ಅಲ್ಲ. ಅವರ ರಟ್ಟೆ ಇನ್ನು ಗಟ್ಟಿ ಇದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ವರೆಗೆ ಸುಮ್ಮನೆ ಕೂರುವ ವ್ಯಕ್ತಿಯಲ್ಲ. ಅವರು ಒಂದು ಹೆಜ್ಜೆ ಮುಂದಿಟ್ಟರೆ ಪರಿಣಾಮ ಏನಾಗುತ್ತದೆ ಎಂಬುದು ವಿರೋಧ ಪಕ್ಷದವರಿಗೆ ಚೆನ್ನಾಗಿ ಗೊತ್ತಿದೆ ಎಂದು ಗುಡುಗಿದರು. ಅಭ್ಯರ್ಥಿ ಪ್ರೀತನ್‌ನಾಗಪ್ಪ, ಮಂಡಲದ ಅಧ್ಯಕ್ಷರಾದ ಹನೂರಿನ ಸಿದ್ದಪ್ಪ, ರಾಮಾಪುರದ ವೀರಭದ್ರ, ಮುಖಂಡರಾದ ಮಂಗಲ ಪ್ರಕಾಶ್, ಆನಾಪುರದ ಉಮೇಶ್, ಪ್ರೇಮಲತಾ ಕೃಷ್ಣಸ್ವಾಮಿ, ಪುಟ್ಟರಾಜು ಹಾಗೂ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts