More

    ಮೈಸೂರು ಅರಮನೆಯಲ್ಲಿ ಆಸ್ಥಾನದ ಐಸಿರಿಯ ದರ್ಶನ

    ಮಂಜುನಾಥ ಟಿ.ಭೋವಿ ಮೈಸೂರು

    ಆಳರಸರ ಗತಕಾಲ ವೈಭವದ ಖಾಸಗಿ ದರ್ಬಾರ್ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಕಳೆಗಟ್ಟಲಿದೆ.

    ಹಿಂದಿನ ರಾಜರ ಗತ್ತು-ಗಾಂಭೀರ್ಯದ ಆಸ್ಥಾನದೈಸಿರಿ ತೆರೆದುಕೊಳ್ಳಲಿದೆ. ಇದಕ್ಕಾಗಿ ವಿಶ್ವವಿಖ್ಯಾತ ಮೈಸೂರು ಅರಮನೆ ಸಜ್ಜಾಗುತ್ತಿದ್ದು, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

    ರಾಜವೈಭವದಿಂದ ಆಚರಣೆ:
    ಕರೊನಾ ಸಂಕ್ರಮಣ ಕಾರಣಕ್ಕೆ ಕಳೆದ ಎರಡು ವರ್ಷ ಮೈಸೂರು ದಸರಾ ಮಹೋತ್ಸವ ಸರಳವಾಗಿ ನೆರವೇರಿತ್ತು. ಅರಮನೆಯಲ್ಲೂ ದಸರಾ ಹಬ್ಬ ಮತ್ತು ಶರನ್ನವರಾತ್ರಿಯ ಪೂಜಾ ವಿಧಿವಿಧಾನಗಳು ಸಾಂಪ್ರದಾಯಿಕವಾಗಿ ನೆರವೇರಿದ್ದವು. ಅರಮನೆಯ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ಸಾರ್ವಜನಿಕರು, ಮಾಧ್ಯಮದವರ ಪ್ರವೇಶವನ್ನೂ ನಿರ್ಬಂಧಿಸಲಾಗಿತ್ತು. ಆದರೀಗ ಕೋವಿಡ್ ಕರಿಛಾಯೆ ಮರೆಯಾಗಿ ಸಹಜ ಸ್ಥಿತಿ ನಿರ್ಮಾಣವಾಗಿದೆ. ನಾಡಹಬ್ಬ ದಸರೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಅಂತೆಯೆ, ಅರಮನೆಯಲ್ಲೂ ಈ ಸಲ ದಸರೆಯನ್ನು ರಾಜವೈಭವದಿಂದ ನಡೆಸಲಾಗುತ್ತಿದೆ.

    ಯದುವೀರರಿಗೆ 9ನೇ ದರ್ಬಾರ್:
    ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾರ್ಗದರ್ಶನದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ 9ನೇ ಬಾರಿಗೆ ‘ಖಾಸಗಿ ದರ್ಬಾರ್’ ನಡೆಸುವರು. ನಾಡಹಬ್ಬ ದಸರೆ ಜನರ ಹಬ್ಬವಾದರೆ, ಖಾಸಗಿ ದರ್ಬಾರ್ ರಾಜಮನೆತನದ ಉತ್ಸವ. ಈ ಎರಡೂ ಸಂಭ್ರಮಕ್ಕೆ ಸಾಂಸ್ಕೃತಿಕ ನಗರಿ ಸಾಕ್ಷಿಯಾಗಿದೆ.

    ನಾಡಹಬ್ಬದ ಸಡಗರ ನಗರದ ತುಂಬೆಲ್ಲ ಪಸರಿಸಿದ್ದರೆ, ಖಾಸಗಿ ದರ್ಬಾರ್ ಅರಮನೆಗೆ ಮಾತ್ರ ಸೀಮಿತವಾಗಿದ್ದರೂ ವೈಭವದಿಂದ ಕೂಡಿರುತ್ತದೆ. ರಾಜಾಳ್ವಿಕೆ ಕೊನೆಗೊಳ್ಳುವ ಮೊದಲು ಮಹಾರಾಜರ ಕಾಲದಲ್ಲಿ ಯಾವ ರೀತಿಯ ರಾಜ ದರ್ಬಾರ್ ನಡೆಯುತ್ತಿತ್ತೋ ಅದೇ ರೀತಿ ಪರಂಪರಾಗತ ವಿಧಿ-ವಿಧಾನಗಳಂತೆಯೇ ಇದು ಜರುಗಲಿದೆ. ಅರಮನೆಯ ಪಂಚಾಂಗದ ಅನುಸಾರ ಖಾಸಗಿ ದರ್ಬಾರ್ ನಡೆಯಲಿದೆ ಎಂಬುದು ವಿಶೇಷ.

    ದಸರೆಗೆ ಮೊದಲೇ ಪುರಾತನ ರತ್ನಖಚಿತ ಚಿನ್ನದ ಸಿಂಹಾಸನವನ್ನು ಸೆ. 20ರಂದು ದರ್ಬಾರ್ ಹಾಲ್‌ನಲ್ಲಿ ಜೋಡಿಸಲಾಗುತ್ತದೆ. ಸೆ. 26ರಂದು ಯದುವೀರ ಅವರು ಖಾಸಗಿ ದಸರೆಗೆ ವಿಧ್ಯುಕ್ತವಾಗಿ ಚಾಲನೆ ನೀಡುವರು. ಬಳಿಕ 10 ದಿನಗಳ ಕಾಲ ರಾಜಪ್ರಭುತ್ವದ ಸಂಸ್ಕೃತಿ ಇಲ್ಲಿ ಗರಿಬಿಚ್ಚಲಿದೆ.


    ನಿತ್ಯ ಖಾಸಗಿ ದರ್ಬಾರ್:
    ರಾಜವಂಶಸ್ಥರು ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದು, ನವರಾತ್ರಿಯ ಮೊದಲ ದಿನ ಬೆಳಗ್ಗೆಯಿಂದ ಅರಮನೆಯ ದೇವರ ಮನೆಯಲ್ಲಿ ಪೂಜಾ ಕೈಂಕರ್ಯ ಜರುಗಲಿದೆ. ಅಂದು ಯದುವೀರ ಅವರಿಗೆ ಎಣ್ಣೆಶಾಸ್ತ್ರ ನೆರವೇರಿಸಲಾಗುತ್ತದೆ. ನಂತರ ದರ್ಬಾರ್ ಹಾಲ್‌ನಲ್ಲಿ ಸಿಂಹಾಸನಕ್ಕೆ ವಜ್ರಖಚಿತ ಸಿಂಹದ ತಲೆ ಜೋಡಣೆ ಮಾಡಲಾಗುತ್ತದೆ. ರಾಜಪೋಷಾಕಿನಲ್ಲಿ ಯದುವೀರ ಸಿಂಹಾಸನಾರೋಹಣ ಮಾಡಿ ಖಾಸಗಿ ದರ್ಬಾರ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ತದನಂತರ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಹೋಗಿ ವಿಜಯ ಆಚರಣೆ ನಡೆಸುವರು. 10 ದಿನವೂ ನಿತ್ಯ ಖಾಸಗಿ ದರ್ಬಾರ್ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

    ವಿವಿಧ ಪೂಜಾ ವಿಧಾನಗಳು:
    ಕನ್ನಡಿ ತೊಟ್ಟಿಯಲ್ಲಿ ಯದುವೀರ ಸರಸ್ವತಿ ಪೂಜೆ ನೆರವೇರಿಸಲಿದ್ದಾರೆ. ಈ ವೇಳೆ ವೀಣೆ, ವಿವಿಧ ಗ್ರಂಥಗಳನ್ನು ಇಟ್ಟು ಪೂಜೆ ಅರ್ಪಿಸಲಾಗುತ್ತದೆ. ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ನೆರವೇರಲಿದೆ. ದುರ್ಗಾಷ್ಟಮಿ, ಹೋಮದ ಕೊಠಡಿಯಲ್ಲಿ ಚಂಡಿಹೋಮ ಜರುಗಲಿದೆ. ಅ.4ರಂದು ಆಯುಧಪೂಜೆ ನೆರವೇರಲಿದ್ದು, ಖಾಸ್ ಆಯುಧಗಳು, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವನ್ನು ಕೋಡಿ ಸೋಮೇಶ್ವರ ದೇವಾಲಯದಿಂದ ಅರಮನೆಯ ಕಡೆಗೆ ಕರೆದೊಯ್ಯಲಾಗುತ್ತದೆ. ಆಯುಧ ಮತ್ತು ಪಟ್ಟದ ಆನೆ ಕಲ್ಯಾಣ ಮಂಟಪದ ಹೆಬ್ಬಾಗಿಲಿಗೆ ಪ್ರವೇಶಿಸುತ್ತವೆ. ಬಳಿಕ ಚಂಡಿಹೋಮದ ಪೂರ್ಣಾಹುತಿ ನಡೆಯಲಿದೆ.

    ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಂದು ಸಂಜೆ ಖಾಸಗಿ ದರ್ಬಾರ್ ನೆರವೇರಿದ ಬಳಿಕ ದರ್ಬಾರ್ ಹಾಲ್‌ನಲ್ಲಿ ಸಿಂಹಾಸನದಿಂದ ಸಿಂಹದ ತಲೆಯನ್ನು ವಿಸರ್ಜಿಸಲಾಗುತ್ತದೆ. ಬಳಿಕ ದೇವರ ಮನೆಯಲ್ಲಿ ಯದುವೀರ ಅವರಿಂದ ಕಂಕಣ, ತ್ರಿಷಿಕಾ ಒಡೆಯರ್ ಅವರ ಕಂಕಣವನ್ನು ವಿಸರ್ಜಿಸಲಾಗುತ್ತದೆ. ವಿಜಯದಶಮಿ ದಿನದಂದು ಅರಮನೆಯಿಂದ ವಿಜಯ ಯಾತ್ರೆ ಹೊರಟು ಭುವನೇಶ್ವರಿ ದೇವಾಲಯದ ಆವರಣದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿಗೆ ದಸರೆ ಸಮಾಪ್ತಿಗೊಳ್ಳಲಿದೆ.
    ಒಟ್ಟಿನಲ್ಲಿ ನವರಾತ್ರಿಯ ದಸರಾ ಸಂಭ್ರಮೋಲ್ಲಾಸದಲ್ಲಿ ಖಾಸಗಿ ದರ್ಬಾರ್ ರಾಜಾಳ್ವಿಕೆಯ ನೆನಪಿನ ದಿಬ್ಬಣವನ್ನು ಕಣ್ಮುಂದೆ ಮೂಡಿಸುತ್ತದೆ.

    ಪ್ರತಿ ವರ್ಷದಂತೆ ದಸರಾದ ವಿಧಿವಿಧಾನಗಳು ಸಾಂಪ್ರದಾಯಿಕವಾಗಿ ನಡೆಯಲಿವೆ. ಅದಕ್ಕಾಗಿ ಅರಮನೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
    ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜವಂಶಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts