More

    ಮಹಿಳೆಯರ ಬದುಕು ಸಂಘರ್ಷಮಯ

    ಹನೂರು: ನಿಮ್ಮನ್ನು ನೋಡಿ ತುಂಬ ಖುಷಿ ಆಗ್ತಾ ಇದೆ… ನನಗೆ ಗೊತ್ತು ನೀವು ಎಷ್ಟು ಕಷ್ಟಪಡುತ್ತಿದ್ದೀರಾ ಅಂತಾ… ಹೀಗೆಂದು ಮಾತು ಪ್ರಾರಂಭಿಸಿದವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ.


    ಹನೂರಿನಲ್ಲಿ ಮಂಗಳವಾರ ಗಿರಿಜನರ ಮಹಿಳಾ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅದ್ದೂರಿ ಸ್ವಾಗತ ಸ್ವೀಕರಿಸಿದ ಬಳಿಕ ವೇದಿಕೆಯನ್ನೇರಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು.


    ಮಹಿಳೆಯರದು ಸಂಘರ್ಷದ ಬದುಕು ಅಂತಾ ನನಗೆ ಗೊತ್ತು. ವರ್ಷದ 365 ದಿನ ಕಷ್ಟಪಟ್ಟು ದುಡಿದರೂ ಅದಕ್ಕೆ ಸೂಕ್ತ ಬೆಲೆ ಇಲ್ಲ. ಮನೆಯಲ್ಲಿ ಕೆಲಸ ಮಾಡುವ ಮಹಿಳೆ ಕುಟುಂಬ ಹಾಗೂ ಕೆಲಸ ಕಾರ್ಯಗಳನ್ನು ಹೇಗೆ ನಿಭಾಯಿಸುತ್ತಾಳೆ, ಸಂಘರ್ಷದ ಬದುಕನ್ನು ನಡೆಸುವುದು ಎಷ್ಟು ಕಷ್ಟ ಎಂಬುದು ನನಗೆ ಗೊತ್ತು. ನಾನು ಉತ್ತರಪ್ರದೇಶದಲ್ಲಿ ಇದ್ದಾಗ ಅಲ್ಲಿನ ಮಹಿಳೆಯರ ಸಂಕಷ್ಟವನ್ನು ನೋಡಿ ಹಲವು ಹೊಸ ಯೊಜನೆಗಳನ್ನು ಜಾರಿಗೊಳಿಸಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದ್ದೆ. ಆದರೆ ಅಲ್ಲಿನ ರಾಜಕಾರಣಿಗಳು ಕಷ್ಟ ಕೊಟ್ಟರು. ಮಹಿಳೆಯರು ಸುಖವಾಗಿರಬೇಕು ಎನ್ನುವ ಉದ್ದೇಶದಿಂದ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ಕೊಡುತ್ತೇನೆಂದು ಭರವಸೆ ನೀಡಿದ್ದೇನೆ. ದೇಶ ಕಟ್ಟುವ ಹೆಣ್ಣು ತನ್ನ ಮಕ್ಕಳಿಗೆ ಸಂಸ್ಕೃತಿ, ನಡೆ ನುಡಿಗಳನ್ನು ಹೇಳಿಕೊಡುತ್ತಾಳೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಬೇಕು, ಉದ್ಯೋಗ ಸಿಗಬೇಕು ಅಂದುಕೊಳ್ಳುತ್ತಾಳೆ. ಚುನಾವಣೆ ಪ್ರಚಾರಕ್ಕೆ ಇಲ್ಲಿಗೆ ಬಂದಿದ್ದು, ಹೆಣ್ಣು ಮಕ್ಕಳು ಎದುರಿಸುವ ಸವಾಲುಗಳು ನನಗೂ ಗೊತ್ತಿದೆ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದರು. ಈ ವೇಳೆ ಮಹಿಳೆಯರು ಜೋರು ಚಪ್ಪಾಳೆ ತಟ್ಟಿದರು.

    ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಮಹಿಳೆಯರು: ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆಯಿಂದ ಸಾವಿರಾರು ಮಹಿಳೆಯರು ಆಗಮಿಸಿದ್ದು, ಪ್ರಿಯಾಂಕಾ ಗಾಂಧಿ ಅವರನ್ನು ನೋಡಲು ತವಕದಿಂದ ಕಾದುಕುಳಿತಿದ್ದರು. ಪ್ರಿಯಾಂಕಾ ಗಾಂಧಿ ಅವರು ಆಗಮಿಸುತ್ತಿದ್ದಂತೆ ಮಹಿಳೆಯರು ಎದ್ದುನಿಂತು ಕೈ ಬೀಸಿ ಖುಷಿಪಟ್ಟರು. ಅಲ್ಲದೆ ಕಾಂಗ್ರೆಸ್ ಪಕ್ಷ ಹಾಗೂ ಪ್ರಿಯಾಂಕಾ ಅವರಿಗೆ ಜೈಕಾರಗಳು ಮೊಳಗಿದವು.

    3 ಪಕ್ಷಗಳಿಂದಲೂ ಮತಬೇಟೆ: ಹನೂರು ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
    ಈ ಹಿಂದೆ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಬಿಜೆಪಿ ರಥಯಾತ್ರೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮಲೆ ಮಹದೇಶ್ವರಬೆಟ್ಟದಲ್ಲಿ ಚಾಲನೆ ನೀಡಿದ್ದರು. ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಇನ್ನಿತರ ನಾಯಕರು ಆಗಮಿಸಿದ್ದರು. ಮಹಿಳೆಯರೊಂದಿಗೆ ಸಂವಾದ ನಡೆಸಿ ಮತ ಪ್ರಚಾರ ನಡೆಸಿದ್ದರು. ಜತೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕರೆತಂದು ಹೆಚ್ಚಿನ ಜನರನ್ನು ಸೆರಿಸಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದರು. ಜತೆಗೆ ಇತ್ತೀಚೆಗೆ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಕರೆಸಿ ಮತ ಪ್ರಚಾರ ನಡೆಸಿದ್ದರು.


    ಇತ್ತ ಜೆಡಿಎಸ್‌ನಲ್ಲಿ ಎಂ.ಆರ್.ಮಂಜುನಾಥ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರೆಸಿ ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಮತಯಾಚಿಸಿದ್ದರು. ಜತೆಗೆ ನಿಖಿಲ್ ಕುಮಾರಸ್ವಾಮಿ ಅವರನ್ನೂ ಕರೆಸಿ ರೋಡ್ ಶೊ ನಡೆಸಿದ್ದರು.
    ಇದೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಚುನಾವಣೆಯ ಹಿನ್ನೆಲೆಯಲ್ಲಿ ಹನೂರಿಗೆ ಆಗಮಿಸಿ ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ತಿಳಿಸುವುದರ ಮೂಲಕ ಕಾಂಗ್ರೆಸ್ ಗೆಲ್ಲಿಸುವಂತೆ ಮತಯಾಚಿಸಿದರು.
    ಈ ಮೂಲಕ ಮೂರು ಪಕ್ಷಗಳೂ ಚುನಾವಣೆ ಪ್ರಚಾರ ಕಾರ್ಯ ನಡೆಸಿದ್ದು, ಎಲ್ಲ ಕಾರ್ಯಕ್ರಮಗಳಲ್ಲೂ ಸಾವಿರಾರು ಸಂಖ್ಯೆಯಲ್ಲಿ ಮತದಾರರು ಭಾಗವಹಿಸಿದ್ದರು. ಆದ್ದರಿಂದ ಯಾವ ಪಕ್ಷಕ್ಕೆ ಗೆಲುವಿನ ಅದೃಷ್ಟ ಕೂಡಿಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts