More

    ಮಹಾಪುರುಷರ ದಿನಾಚರಣೆಯಲ್ಲಿ ಬದಲಾವಣೆ

    ಕಾರವಾರ: ಯಾವುದೇ ವಿವಿಗಳಲ್ಲಿ ಸಿಗುವುದಕ್ಕಿಂತ ಹೆಚ್ಚಿನ ಜ್ಞಾನ ಶಿವಯೋಗಿ ಸಿದ್ಧರಾಮೇಶ್ವರ, ಮಹಾಯೋಗಿ ವೇಮನರ ವಚನ, ಕಾವ್ಯಗಳಲ್ಲಿ ಅಡಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಹೇಳಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ ಶಿವಯೋಗಿ ಸಿದ್ಧರಾಮ, ಮಹಾಯೋಗಿ ವೇಮನರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಇಬ್ಬರೂ ಯೋಗಿಗಳು ಯಾವುದೇ ವಿವಿಗಳಲ್ಲಿ ಕಲಿತವರಲ್ಲ. ಊರು ಸುತ್ತಿ, ಜನರ ಜತೆ ಬೆರೆತು ಪಡೆದ ಅನುಭವಕ್ಕಿಂತ ದೊಡ್ಡ ಜ್ಞಾನವಿಲ್ಲ. ಆ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದರು. ಇದರಿಂದ ಅವರ ವಚನ ಮತ್ತು ಕಾವ್ಯಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ ಎಂದರು.

    ಸರ್ಕಾರಿಂದ ಆಯೋಜಿಸುವ ಜಯಂತಿಗಳು ಯುವ ಜನರನ್ನು ಸೆಳೆಯುವಲ್ಲಿ ವಿಫಲವಾಗುತ್ತಿವೆ ಎಂಬ ಅಂಶ ಗಮನಕ್ಕೆ ಬಂದಿದೆ. ಮಹಾ ಪುರುಷರು ಕೇವಲ ಒಂದು ಸಮಾಜಕ್ಕೆ ಸೀಮಿತವಲ್ಲ. ಅವರ ಆದರ್ಶಗಳನ್ನು ಎಲ್ಲರೂ ಅರಿತು ಪಾಲಿಸಬೇಕು. ಈ ನಿಟ್ಟಿನಲ್ಲಿ ಸೂಕ್ತ ಬದಲಾವಣೆಗಳನ್ನು ತಂದು ಜನಾಕರ್ಷಕವಾಗಿ ಜಯಂತಿಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.

    ಶಿಕ್ಷಕ ಗಣೇಶ ಬಿಷ್ಟಣ್ಣನವರ್ ಉಪನ್ಯಾಸ ನೀಡಿದರು. ತಹಸೀಲ್ದಾರ್ ಆರ್.ವಿ.ಕಟ್ಟಿ, ಶಿರವಾಡ ಗ್ರಾಪಂ ಸದಸ್ಯ ಉದಯ ಬಶೆಟ್ಟಿ, ನಗರಸಭೆ ಸದಸ್ಯ ಹನುಮಂತ ತಳವಾರ, ಬೋವಿ ಸಮಾಜದ ಮುಖಂಡ ಭರಮಪ್ಪ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಿಂದ ಯೋಗಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆ ಹಾಗೂ ಸಭೆಯಲ್ಲಿ ಬೆರಳೆಣಿಕೆಯಷ್ಟು ಮಾತ್ರ ಜನರಿದ್ದರು.

    ವರ್ತಮಾನದ ತಲ್ಲಣಗಳಿಗೆ ದಾರಿದೀಪ

    ಶಿರಸಿ: ಆತ್ಮ ಶುದ್ಧಿ ಇರದ ಆಚಾರ, ಚಿತ್ತ ಶುದ್ಧಿ ಇರದ ಶಿವ ಪೂಜೆಯಿಂದ ಸಾರ್ಥಕತೆ ಲಭಿಸದು ಎನ್ನುವ ಮಹಾಯೋಗಿ ವೇಮನರ ಸಂದೇಶವು ವರ್ತಮಾನದ ತಲ್ಲಣಗಳಿಗೆ ದಾರಿದೀಪವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ದೊಡ್ಮನಿ ಹೇಳಿದರು.

    ನಗರದ ತಹಸೀಲ್ದಾರ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಮಾಹಾಯೋಗಿ ವೇಮನ ಜಯಂತ್ಯುತ್ಸವದಲ್ಲಿ ವೇಮನರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಭಾರತಿಯ ಆಧ್ಯಾತ್ಮಿಕ ಇತಿಹಾಸದಲ್ಲಿ ಮಹಾಯೋಗಿ ವೇಮನರು ಸ್ಮರಣಿಯರಾಗಿದ್ದಾರೆ. ಅವರು ತತ್ತ್ವಜ್ಞಾನಿ, ಯೋಗಿ, ದಾರ್ಶನಿಕ, ಮಿತ್ರ ಹಾಗೂ ಬಂಧುವಾಗಿ ಪ್ರತಿಯೊಬ್ಬರಿಗೂ ಕಾಣುತ್ತಾರೆ. 15ನೇ ಶತಮಾನದಲ್ಲಿ ಬಂಡಾಯದ ಬಾವುಟ ಹಾರಿಸಿದ ವೇಮನರು ಜನಸಾಮಾನ್ಯರ ಕವಿಯಾಗಿ, ಮೂಢನಂಬಿಕೆಯನ್ನು ಮತ್ತು ಅಂಧಶ್ರದ್ಧೆಯನ್ನು ಖಂಡಿಸುವ ವ್ಯಕ್ತಿತ್ವವಾಗಿ ವಿಸ್ತಾರವಾಗಿ ಬೆಳೆದವರು. ಸಮಾಜ ಸುಧಾರಣೆಯಂತಹ ಮಹತ್ವದ ವಿಷಯದ ಮೇಲೆ ಅವರು ಬೆಳಕು ಚೆಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದರು. ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಕಂದಾಯ ಇಲಾಖೆ ಅಧಿಕಾರಿ ಡಿ.ಎಚ್. ದಾಸರ್ ಹಾಗೂ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts