More

    ಮಳೆಯ ನೀರನ್ನು ಸಂಗ್ರಹಕ್ಕೆ ಆಂದೋಲನ: ಡಾ. ವೈ.ಎಸ್. ವೀರಭದರಪ್ಪ

    ಹಾಸನ: ಮಳೆಯ ನೀರನ್ನು ಸಂಗ್ರಹಿಸಿ ಅದನ್ನು ಬಳಕೆ ಮಾಡುವ ಬಗ್ಗೆ ಪ್ರತಿ ಮನೆ ಮನೆಗೂ ಕರಪತ್ರ ನೀಡಿ ಜಾಗೃತಿ ಮೂಡಿಸುವ ಆಂದೋಲನವನ್ನು ಮಾಡಲಾಗುವುದು ಎಂದು ಜಿಲ್ಲಾ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಡಾ. ವೈ.ಎಸ್. ವೀರಭದರಪ್ಪ ತಿಳಿಸಿದರು.
    ಮಳೆ ನೀರಿನ ಬಳಕೆ ಮೂಲಕ ಕುಡಿಯುವ ನೀರಿನ ಅಗತ್ಯಕ್ಕೆ ಉತ್ತಮ ಪರಿಹಾರವಾಗಿ ಒಂದು ಆಂದೋಲನ ಮಾಡಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಮಾಡಿ ಮನೆ ಮನೆಗೆ ಅರಿವು ಮೂಡಿಸಲಾಗುವುದು. ಹಾಸನ ನಗರದ ಕೆಲವು ನಾಗರಿಕರು ಮಳೆ ನೀರನ್ನು ಸಂಗ್ರಹಿಸಿ ವರ್ಷಪೂರ್ತಿ ಕುಡಿಯಲು ಹಾಗೂ ಅಡುಗೆ ಮಾಡಲು ಬಳಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಮುಖ್ಯವಾಗಿ ಹಾಸನದ ಚನ್ನಪಟ್ಟಣ ಬಡಾವಣೆ ನಿವಾಸಿಗಳಾದ ಕೆ.ವಿ. ಮಾಲತೇಶ್ ಮತ್ತು ಕವಿತಾ ದಂಪತಿಗಳು ತಮ್ಮ ಮನೆಯಲ್ಲಿ ತಾರಸಿ ಕೈತೋಟ ಮಾಡಿರುವುದಲ್ಲದೆ, ಮಳೆ ನೀರನ್ನು ಸಂಗ್ರಹಿಸಿ ಬಳಸುತ್ತಿರುವುದನ್ನು ನೋಡಿ ನಮಗೆಲ್ಲಾ ಬಹಳ ಸಂತೋಷವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಸಾಮಾನ್ಯವಾಗಿ ಬಹಳ ಜನರು ತಮ್ಮ ಮನೆಗಳಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಫಿಲ್ಟರ್ ಯಂತ್ರಗಳನ್ನು ಬಳಸುತ್ತಿದ್ದಾರೆ. ಹೀಗೆ ಶುದ್ದೀಕರಣಗೊಂಡ ನೀರಿನಲ್ಲಿ ಅಗತ್ಯವಾದ ಖನಿಜಾಂಶಗಳು ಉಳಿಯುವುದಿಲ್ಲ ಮತ್ತು ಶುದ್ದೀಕರಣದ ಪ್ರಕ್ರಿಯೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತದೆ. ಜತೆಗೆ ಸಂಪುಗಳಿಂದ ನೀರು ಮೇಲೆತ್ತಲು ಮತ್ತು ಶುದ್ದೀಕರಣದ ಯಂತ್ರಗಳ ಚಾಲನೆಗೆ ವಿದ್ಯುಚ್ಚಕ್ತಿ ಬೇಕಾಗುತ್ತದೆ. ಆದರೆ ಮಳೆಯ ನೀರನ್ನು ಸಂಗ್ರಹಿಸಿ ಬಳಸುವುದು ಆರೋಗ್ಯಕ್ಕೂ ಉತ್ತಮ, ವಿದ್ಯುಚ್ಚಕ್ತಿಯ ಅವಲಂಬನೆಯೂ ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು.
    ಉಪಾಧ್ಯಕ್ಷ ಆರ್.ಪಿ. ವೆಂಕಟೇಶ್ ಮೂರ್ತಿ ಮಾತನಾಡಿ, ಬರದ ನಾಡಿನಲ್ಲಿಯೂ ವರ್ಷದಲ್ಲಿ ಬೀಳುವ ಒಂದೆರಡು ಮಳೆಗಳೇ ವರ್ಷಪೂರ್ತಿ ಕುಡಿಯುವ ಹಾಗೂ ಅಡುಗೆಗೆ ಅಗತ್ಯವಾದ ನೀರನ್ನು ಒದಗಿಸಬಲ್ಲವು. ಅಲ್ಲದೆ ಹೆಚ್ಚುವರಿ ನೀರನ್ನು ಸಂಗ್ರಹಿಸಿ ಸ್ನಾನಕ್ಕೆ, ಬಟ್ಟೆ ತೊಳೆಯಲು ಮತ್ತಿತರ ಉಪಯೋಗಕ್ಕೂ ಬಳಸಬಹುದು. ಇನ್ನೂ ಹೆಚ್ಚಾದ ನೀರನ್ನು ಕೊಳವೆ ಬಾವಿಗಳ ಮರುಪೂರಣಕ್ಕೂ ಕಳುಹಿಸಬಹುದು. ಈ ಮಾದರಿಯನ್ನು ಕಾರ್ಯರೂಪಕ್ಕೆ ತರಲು ಜಿಲ್ಲಾಡಳಿತವು ಕಾರ್ಯ ಯೋಜನೆಯೊಂದನ್ನು ಸಿದ್ಧ ಮಾಡಿಕೊಳ್ಳಬೇಕೆಂದು ನಮ್ಮ ವೇದಿಕೆ ವಿನಂತಿ ಮಾಡುತ್ತದೆ. ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿಯವರು ಮಳೆ ನೀರು ಕೊಯ್ಲಿನ ವ್ಯವಸ್ಥೆ ಮಾಡಿಕೊಳ್ಳುವ ನೀರಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಈ ಯೋಜನೆಗೆ ಉತ್ತೇಜನ ನೀಡಬಹುದಾಗಿದೆ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಗಮನ ಹರಿಸಿದರೆ ಕುಡಿಯುವ ನೀರಿನ ಸಮಸ್ಯೆಗೆ ಒಂದು ಉತ್ತಮವಾದ ಹಾಗೂ ಸುಲಭವಾದ ಮಾರ್ಗವನ್ನು ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಹಾಸನ ಜಿಲ್ಲಾ ಹಿರಿಯ ನಾಗರಿಕರ ವೇದಿಕೆ ಪ್ರಧಾನ ಕಾರ್ಯದರ್ಶಿ ಬಿ.ಕೆ. ಮಂಜುನಾಥ್, ನಿರ್ದೇಶಕರಾದ ಸಿಂಗರೇಗೌಡ, ಶ್ರೀಧರ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts