More

    ಮತಾಂತರ ನಿಷೇಧ ಕಾಯ್ದೆ ಹಿಂತೆಗೆತ ನಿರ್ಧಾರ -ವಿಶ್ವ ಹಿಂದು ಪರಿಷತ್‌ ಪ್ರತಿಭಟನೆ 

    ದಾವಣಗೆರೆ: ರಾಜ್ಯದಲ್ಲಿ ಜಾರಿಯಲ್ಲಿದ್ದ ಮತಾಂತರ ನಿಷೇಧ ಕಾನೂನನ್ನು ಹಿಂಪಡೆಯುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಖಂಡಿಸಿ ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

    ಜಯದೇವ ವೃತ್ತದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಮಹಾತ್ಮ ಗಾಂಧಿ ವೃತ್ತ ಮೂಲಕ ಪಿಬಿ ರಸ್ತೆಯಲ್ಲಿ ಮಾನವ ಸರಪಳಿ ರಚಿಸಿದರು. ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಅಲ್ಲಿನ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು.
    ಹಿಂದು ರಾಷ್ಟ್ರ ಭಾರತದಲ್ಲಿ ಅನ್ಯ ಧರ್ಮೀಯರು ಸ್ವಧರ್ಮ ಮತ ಆಚರಿಸಲು ಯಾವ ಅಭ್ಯಂತರವೂ ಇಲ್ಲ. ಆದರೆ ಬಲವಂತವಾಗಿ, ಆಮಿಷದಿಂದ ಮತಾಂತರಿಸುವುದಕ್ಕೆ ವಿರೋಧವಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ಬಗ್ಗೆ ಕಾಂಗ್ರೆಸ್ ಸರ್ಕಾರ ನಿರ್ಧರಿಸಿರುವುದು ಹಿಂದು ಸಮಾಜಕ್ಕೆ ಮಾಡಿದ ದ್ರೋಹವಾಗಿದೆ. ಕೂಡಲೇ ನಿಲುವು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
    ಹಿಂದಿನ ಸರ್ಕಾರ ಶಾಲಾ ಪಠ್ಯದಲ್ಲಿ ಸೇರ್ಪಡೆ ಮಾಡಿದ್ದ ಸಾವರ್ಕರ್, ಭಗತ್‌ಸಿಂಗ್, ಸುಖದೇವ್, ರಾಜಗುರು ಮೊದಲಾದ ದೇಶಭಕ್ತರ ಪರಿಚಯದ ಪಠ್ಯವನ್ನು ತೆಗೆದುಹಾಕಲು ನಿರ್ಧರಿಸಿರುವುದು ಕೂಡ ಒಳ್ಳೆಯದಲ್ಲ. ಕೂಡಲೆ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
    ಬಜರಂಗದಳ ಮುಖಂಡ ಸತೀಶ್ ಪೂಜಾರಿ ಮಾತನಾಡಿ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ ದೇಶವನ್ನು ಹಾವಾಡಿಗರ ದೇಶವಾಗಿ ಮಾಡಲು ಹೊರಟಿದೆ. ಕಾಯ್ದೆ ಹಿಂಪಡೆದಿದ್ದೇ ಆದಲ್ಲಿ ಇದು ಈ ಸರ್ಕಾರದ ಶವಪೆಟ್ಟಿಗೆಗೆ ಹೊಡೆದ ಮೊದಲ ಮೊಳೆಯಾಗಲಿದೆ ಎಂದು ಹೇಳಿದರು.
    ಹಾಸನದಲ್ಲಿ ಶೇ.70ರಷ್ಟು ಜನ ಒಕ್ಕಲಿಗರು ಮತಾಂತರಗೊಂಡಿದ್ದಾರೆ. ಇದನ್ನು ಅರಿಯದಿದ್ದರೆ ಡಿ.ಕೆ.ಶಿವಕುಮಾರ್ ಒಕ್ಕಲಿಗರ ನಾಯಕನಗಿ ಉಳಿಯುವುದಿಲ್ಲ. ಬೇರೆಯವರು ಅಧಿಕಾರದಲ್ಲಿ ಬರುತ್ತಾರೆ ಎಂಬ ಎಚ್ಚರವಿರಲಿ. ರಾಜ್ಯದ ಜನರ ಹಿತದಿಂದಾಗಿ ಈ ಕಾಯ್ದೆ ಜಾರಿ ಮಾಡಲಾಗಿತ್ತೇ ಹೊರತಾಗಿನ ರಾಜಕೀಯ ಕುಚೇಷ್ಟೆಗಾಗಿ ಅಲ್ಲ.
    ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಕಾಯ್ದೆ ಹಿಂತೆಗೆತಕ್ಕೆ ಮುಂದಾಗಿರುವ ಸಿದ್ದರಾಮಯ್ಯ ಅವರಿಗೂ ಇದು ಭವಿಷ್ಯದಲ್ಲಿ ಕುತ್ತು ತರಲಿದೆ ಎಂಬುದು ನೆನಪಿಡಬೇಕು. ಕಾಯ್ದೆ ಹಿಂಪಡೆಯದಿದ್ದಲ್ಲಿ ಸಚಿವರು ಎಲ್ಲೇ ಹೋದಲ್ಲಿ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
    ವಿಎಚ್‌ಪಿ ಜಿಲ್ಲಾ ಉಪಾಧ್ಯಕ್ಷ ಚನ್ನಗಿರಿ ಮಂಜಪ್ಪ ಮಾತನಾಡಿ ಕಾಂಗ್ರೆಸ್ ಸರ್ಕಾರ ಧರ್ಮವಿರೋಧಿ ಚಟುವಟಿಕೆಗೆ ಕೈ ಹಾಕುತ್ತಿದೆ. ಹಿಂದು ಸಂಸ್ಕೃತಿ ಉಳಿವಿಗಾಗಿ ಕಾಂಗ್ರೆಸ್‌ಮುಕ್ತ ಭಾರತ ಆಗಲೇಬೇಕಿದೆ. ಇದಕ್ಕಾಗಿ ವಿಶ್ವ ಹಿಂದು ಪರಿಷತ್ ಭೇದ ಮರೆತು ಒಗ್ಗೂಡಬೇಕಿದೆ ಎಂದರು.
    ಎಲ್ಲ ದೇವರ ಸಂಗಮವಾದ ಗೋವುಗಳನ್ನು ಕೊಲ್ಲಲು ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಗೋವುಗಳನ್ನು ರಾಜಾರೋಷವಾಗಿ ಕೊಲ್ಲುತ್ತಿದ್ದರೂ ನಾವು ಮೌನ ವಹಿಸಿದ್ದೇವೆ. ದೇಶ ವಿರೋಧಿಗಳನ್ನು ಇಲ್ಲಿ ಬೆಳೆಯಲು ಬಿಡಬಾರದು ಎಂದು ಹೇಳಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ವಿಎಚ್‌ಪಿ ಜಿಲ್ಲಾ ಕಾರ್ಯಾಧ್ಯಕ್ಷ ಡಾ. ಪ್ರೊ. ಎಂ.ಬಿ.ಪುರಾಣಿಕ್, ಬೇಕರಿ ರಾಜು, ಮುಖಂಡರಾದ ರಾಜನಹಳ್ಳಿ ಶಿವು, ಎಸ್.ಟಿ.ವೀರೇಶ್, ಸೋಗಿ ಶಾಂತಕುಮಾರ್, ಆರ್‌ಎಲ್. ಶಿವಪ್ರಕಾಶ್, ಎಲ್.ಡಿ.ಗೋಣೆಪ್ಪ, ವೈ.ಮಲ್ಲೇಶ್, ಕಲ್ಯಾಣಮ್ಮ, ಮಲ್ಲಿಕಾರ್ಜುನ, ಪ್ರಭು ಕಲಬುರಗಿ, ಎನ್. ರಾಜಶೇಖರ್, ಬಿ.ಎಸ್.ಜಗದೀಶ, ಶ್ರೀನಿವಾಸ ದಾಸಕರಿಯಪ್ಪ, ಶಿವನಗೌಡ ಪಾಟೀಲ್, ಎಚ್.ಪಿ.ವಿಶ್ವಾಸ್, ಟಿಂಕರ್ ಮಂಜಣ್ಣ, ವಿನಾಯಕ ರಾನಡೆ, ಶಂಭುಲಿಂಗಪ್ಪ, ಮಂಜಾನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts