More

    ಭಿಕ್ಷೆ ಎತ್ತುವ ಮೂಲಕ ವಿನೂತನ ಪ್ರತಿಭಟನೆ

    ಸಕಲೇಶಪುರ: ತಹಸೀಲ್ದಾರ್ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಮುಖಂಡ ಹೆತ್ತೂರು ದೇವರಾಜ್, ಕಚೇರಿಗೆ ಬಂದು ಹೋಗುವ ಖರ್ಚನ್ನು ಸರಿದೂಗಿಸಲು ಭಿಕ್ಷೆ ಎತ್ತುವ ಮೂಲಕ ಗುರುವಾರ ವಿನೂತನವಾಗಿ ಪ್ರತಿಭಟನೆ ಮಾಡಿದರು.

    ಪಟ್ಟಣದ ಮಿನಿ ವಿಧಾನಸೌಧದ ದ್ವಾರದಲ್ಲಿ ಗುರುವಾರ ಬೆಳಗ್ಗೆ 10.30ಕ್ಕೆ ಪ್ರತಿಭಟನೆಗೆ ಕುಳಿತ ಹೆತ್ತೂರು ದೇವರಾಜ್, ತಹಸೀಲ್ದಾರ್ ಮಂಜುನಾಥ್ ಇಲ್ಲಿಗೆ ವರ್ಗವಾಗಿ ಬಂದ ನಂತರ ಕಂದಾಯ ಇಲಾಖೆಯ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಕಾನೂನು ಪ್ರಕಾರ ಕಡತಗಳು ಇದ್ದರೂ ಇಲ್ಲದ ಕಾರಣಗಳನ್ನು ಹುಡುಕಿ ಷರಾ ಬರೆದು ಕಡತ ವಿಲೇವಾರಿಗೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ, ಜನರು ಕಚೇರಿಗೆ ಅಲೆದು ಅಲೆದು ಬಸ್ ಚಾರ್ಜ್‌ಗೂ ಹಣವಿಲ್ಲದಂತಾಗಿದೆ ಎಂದು ದೂರಿದರು. ನಂತರ ಕರ್ಚಿಫ್ ಹಾಸಿಕೊಂಡು ಭಿಕ್ಷೆ ಎತ್ತುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

    ತಹಸೀಲ್ದಾರ್ ಆವಾಜ್‌ಗೆ ಥಂಡಾ: ಕರ್ತವ್ಯ ನಿಮಿತ್ತ ಕಚೇರಿಯಿಂದ ಹೊರ ಹೋಗುತ್ತಿದ್ದ ತಹಸೀಲ್ದಾರ್ ಪ್ರತಿಭಟನಾನಿರತ ದೇವರಾಜ್‌ಗೆ ‘ಏಯ್ ಇಲ್ಯಾಕೆ ಕುಳಿತಿದ್ದೀಯ ಎದ್ದೋಗೋ, ಪ್ರತಿಭಟನೆ ಮಾಡಲು ಅನುಮತಿ ಬೇಕು ಗೊತ್ತಾ? ಪೊಲೀಸರಿಗೆ ಹೇಳಿ ಒಳಗೆ ಹಾಕಿಸಲಾ’ ಎಂದು ಹೇಳಿ ಜೀಪಿನ ಬಳಿಗೆ ತೆರಳಿದರು.

    ಇದಕ್ಕೆ ಪ್ರತಿಕ್ರಿಯಿಸಿದ ದೇವರಾಜ್ ಪೊಲೀಸ್ ಸ್ಟೇಷನ್‌ಗೆ ಹಾಕಿಸಿ ಸ್ವಾಮಿ, ಅದಕ್ಕೂ ಮೊದಲು ಸರಿಯಾಗಿ ಕೆಲಸ ಮಾಡಿ, ಸಾರ್ವಜನಿಕರನ್ನು ಅಲೆಸಬೇಡಿ ಎಂದರು.

    ಇದರಿಂದ ಕೆಂಡಮಂಡಲರಾದ ತಹಸೀಲ್ದಾರ್ ಜೀಪು ಬಳಿಯಿಂದ ಮರಳಿ ಬಂದು ‘ಇಲ್ನೋಡು ಏಳೂವರೆಗೆ ಕಚೇರಿಗೆ ಬರ‌್ತೇನೆ. ರಾತ್ರಿ 10 ಗಂಟೆವರೆಗೆ ಕೆಲಸ ಮಾಡ್ತೇನೆ. ಕೆಲಸದ ಬಗ್ಗೆ ನನಗೆ ಹೇಳ ಬೇಡ, ನನ್ನ ಕೆಲಸ ಅಣಕಿಸ ಬೇಡ. ನಾನು ಮಾಜಿ ಸೈನಿಕ. ಇಲ್ನೋಡು ಕಾಲಲ್ಲಿ 18 ಹೊಲಿಗೆ ಹಾಕಿದ್ದಾರೆ. ಆದ್ರೂ ಕೆಲಸ ಮಾಡ್ತೇನೆ’ ಎಂದು ಹೇಳಿ ತೆರಳಿದರು. ಬಳಿಕ ದೇವರಾಜ್ ಪ್ರತಿಭಟನೆ ಕೈಬಿಟ್ಟು ಸ್ಥಳದಿಂದ ಕಾಲ್ಕಿತ್ತರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts