More

    ಬೇರೆಯವರಿಗೆ ಮತ ಚಲಾಯಿಸಿದ ಅಭ್ಯರ್ಥಿಗಳು..!

    • ಸ್ವ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿಲ್ಲದ ಕಾರಣ
    • ಪಟ್ಟಿಯಲ್ಲಿದ್ದಾರೆ ಹಾಲಿ, ಮಾಜಿ ಶಾಸಕರು, ಸಚಿವರು

    ಸದೇಶ್ ಕಾರ್ಮಾಡ್ ಮೈಸೂರು
    ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕೆಲವು ಅಭ್ಯರ್ಥಿಗಳಿಗೆ ತಮ್ಮ ಮತವನ್ನು ತಮಗೆ ಚಲಾಯಿಸಿಕೊಳ್ಳಲು ಸಾಧ್ಯವಾಗಲಿಲ್ಲ..!

    ಪ್ರತಿಯೊಂದು ಮತವೂ ಅತ್ಯಂತ ಅಮೂಲ್ಯ. ಒಂದು ಮತ ಫಲಿತಾಂಶವನ್ನೇ ಬದಲಾಯಿಸಿರುವ ಉದಾಹರಣೆಗಳು ಇವೆ. ಹಾಗಾಗಿ ಒಂದು ಮತವನ್ನೂ ನಿರ್ಲಕ್ಷಿಸುವಂತಿಲ್ಲ. ಆದರೆ, ಜಿಲ್ಲೆಯಲ್ಲಿ ಸ್ಪರ್ಧಿಸಿರುವ ಹಲವು ಅಭ್ಯರ್ಥಿಗಳು ತಾವು ಸ್ಪರ್ಧಿಸಿರುವ ಮತ ಕ್ಷೇತ್ರದಲ್ಲಿ ಮತದಾರರಾಗಿಲ್ಲ. ಹೀಗಾಗಿ ಅವರು ತಮ್ಮ ಹೆಸರು ಹೊಂದಿರುವ ಬೇರೆ ಕ್ಷೇತ್ರದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ಈ ರೀತಿ ಮತ್ತೊಂದು ಕ್ಷೇತ್ರದಲ್ಲಿ ಮತ ಚಲಾಯಿಸಿದವರಲ್ಲಿ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಿ.ಎಚ್. ವಿಜಯಶಂಕರ್, ಶಾಸಕರಾದ ಅಶ್ವಿನ್ ಕುಮಾರ್, ಬಿ. ಹರ್ಷವರ್ಧನ್, ಎಲ್. ನಾಗೇಂದ್ರ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಡಾ.ಎನ್.ಎಲ್. ಭಾರತಿ ಶಂಕರ್ ಪ್ರಮುಖರಾಗಿದ್ದಾರೆ.

    ಯಾರು ಎಲ್ಲೆಲ್ಲಿ ಮತ ಚಲಾಯಿಸಿದರು?:

    ನಂಜನಗೂಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಹರ್ಷವರ್ಧನ್ ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದಲ್ಲಿ, ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದಲ್ಲಿ, ಕಲ್ಯಾಣರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಆರ್. ಮಾದೇಶನ್ ಎಚ್.ಡಿ. ಕೋಟೆ ಕ್ಷೇತ್ರದಲ್ಲಿ ಮತ ಚಲಾಯಿಸಿದರು.

    ಬೇರೆಯವರಿಗೆ ಮತ ಚಲಾಯಿಸಿದ ಅಭ್ಯರ್ಥಿಗಳು..!

    ತಿ.ನರಸೀಪುರ ಕ್ಷೇತ್ರದ ಕಾಂಗ್ರೆಸ್‌ನ ಡಾ.ಎಚ್.ಸಿ. ಮಹದೇವಪ್ಪ, ಜೆಡಿಎಸ್‌ನ ಎಂ. ಅಶ್ವಿನ್ ಕುಮಾರ್ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್‌ಎಸ್) ಎಂ.ಡಿ.ಮಂಜುನಾಥ ವರುಣ ಕ್ಷೇತ್ರದಲ್ಲಿ, ಇಂಡಿಯನ್ ಮೂವ್‌ಮೆಂಟ್ ಪಾರ್ಟಿಯ ಶ್ರೀನಿವಾಸ ನಂಜನಗೂಡು ಕ್ಷೇತ್ರದಲ್ಲಿ ಮತದಾನ ಮಾಡಿದರು.

    ವರುಣ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ನ ಡಾ.ಎನ್.ಎಲ್. ಭಾರತಿ ಶಂಕರ್ ನರಸಿಂಹರಾಜ ಕ್ಷೇತ್ರದಲ್ಲಿ, ಕರ್ನಾಟಕ ಜನತಾ ಪಕ್ಷದ ಎನ್. ಅಂಬರೀಷ್ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ಕ್ಷೇತ್ರದಲ್ಲಿ, ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಎಂ. ಕೃಷ್ಣಮೂರ್ತಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ, ಕನ್ನಡ ದೇಶದ ಪಕ್ಷದ ಅರುಣ್ ಲಿಂಗ ಕೋಲಾರ ಜಿಲ್ಲೆಯ ಬಂಗಾರಪೇಟೆ ಕ್ಷೇತ್ರದಲ್ಲಿ ಮತ ಚಲಾಯಿಸಿದರು.

    ಎಚ್.ಡಿ. ಕೋಟೆಯ ಬಿಜೆಪಿಯ ಕೆ.ಎಂ. ಕೃಷ್ಣ ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರದಲ್ಲಿ, ಕಾಂಗ್ರೆಸ್‌ನ ಸಿ. ಅನಿಲ್ ಕುಮಾರ್ ಹುಣಸೂರು ಕ್ಷೇತ್ರದಲ್ಲಿ, ಸಮಾಜವಾದಿ ಜನತಾ ಪಾರ್ಟಿ ಕೆ.ವಿ. ರಾಜು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾನ ಮಾಡಿದರು. ಕೆ.ಆರ್. ನಗರದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಭರತ್ ಕುಮಾರ್ ಹುಣಸೂರು ಕ್ಷೇತ್ರದಲ್ಲಿ ಮತದಾನ ಮಾಡಿದರು. ಪಿರಿಯಾಪಟ್ಟಣ ದ ಬಿಜೆಪಿಯ ಸಿ.ಎಚ್. ವಿಜಯಶಂಕರ್ ಚಾಮುಂಡೇಶ್ವರಿ ಕ್ಷೇತ್ರದಲ್ಲಿ, ಆಮ್ ಆದ್ಮಿ ಪಾರ್ಟಿಯ ರಾಜಶೇಖರ್ ದೊಡ್ಡಣ್ಣ ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಮತದಾನ ಮಾಡಿದರು.

    ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್‌ನ ಎಂ.ಕೆ. ಸೋಮಶೇಖರ್ ಚಾಮರಾಜ ಕ್ಷೇತ್ರದಲ್ಲಿ, ಇಂಡಿಯನ್ ಮೂವ್‌ಮೆಂಟ್ ಪಾರ್ಟಿಯ ಎಂ. ಲಿಂಗರಾಜು ವರುಣ ಕ್ಷೇತ್ರದಲ್ಲಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೆ.ಎಸ್. ಸೋಮಸುಂದರ ನರಸಿಂಹರಾಜ ಕ್ಷೇತ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದರು.

    ನರಸಿಂಹರಾಜ ಕ್ಷೇತ್ರದ ಬಿಜೆಪಿಯ ಎಸ್. ಸತೀಶ್ ಸಂದೇಶ್ ಸ್ವಾಮಿ ಕೃಷ್ಣರಾಜ ಕ್ಷೇತ್ರದಲ್ಲಿ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಭ್ಯರ್ಥಿ ರಿಹಾನಾ ಬಾನು ಚಾಮರಾಜ ಕ್ಷೇತ್ರದಲ್ಲಿ, ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಕ್ಷದ ಖಲೀಲ್ ಉರ್ ರಹಮಾನ್ ಷರೀಫ್ ಚಾಮುಂಡೇಶ್ವರಿ ಕ್ಷೇತ್ರದಲ್ಲಿ, ಉತ್ತಮ ಪ್ರಜಾಕೀಯ ಪಕ್ಷದ ಜೆ.ಎಸ್. ಲೀಲಾವತಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾನ ಮಾಡಿದರು.

    ಚಾಮರಾಜ ಕ್ಷೇತ್ರದ ಬಿಜೆಪಿಯ ಎಲ್. ನಾಗೇಂದ್ರ ಕೃಷ್ಣರಾಜ ಕ್ಷೇತ್ರದಲ್ಲಿ, ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಪಿ. ಚಂದ್ರಶೇಖರ್ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್‌ಎಸ್) ಡಿಪಿಕೆ ಪರಮೇಶ್ ನರಸಿಂಹರಾಜ ಕ್ಷೇತ್ರದಲ್ಲಿ ಮತದಾನ ಮಾಡಿದರು. ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿಯ ವಿ. ಕವೀಶ್ ಗೌಡ ಚಾಮರಾಜ ಕ್ಷೇತ್ರದಲ್ಲಿ, ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಜೆ. ಜಯಶಂಕರ ಕೃಷ್ಣರಾಜ ಕ್ಷೇತ್ರದಲ್ಲಿ ಮತದಾನ ಮಾಡಿದರು.

    ಸೋಮಣ್ಣ ಚಾಮರಾಜನಗರದಲ್ಲಿ ಮತದಾನ

    ವಸತಿ ಸಚಿವ ವಿ.ಸೋಮಣ್ಣ ಈ ಬಾರಿ ಮೈಸೂರು ಜಿಲ್ಲೆಯ ವರುಣ ಹಾಗೂ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಬುಧವಾರ ಅವರು ಚಾಮರಾಜನಗರದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ವಿ.ಸೋಮಣ್ಣ ವರುಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts