More

    ಬೀದಿನಾಯಿಗಳ ಹಾವಳಿಗೆ ತತ್ತರ

    ಕುಣಿಗಲ್: ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದೆ. ಮಕ್ಕಳು ಹಾಗೂ ಹಿರಿಯ ನಾಗರಿಕರು ಬೀದಿಗಳಲ್ಲಿ ಆತಂಕದಿಂದ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಬೀದಿ ನಾಯಿಗಳ ಹಾವಳಿಗೆ ಸೂಕ್ತ ಕ್ರಮಕೈಗೊಳ್ಳಬೇಕಾದ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. 2019-20ರಲ್ಲಿ ಪಶುವೈದ್ಯ ಇಲಾಖೆ ಸರ್ವೇ ಪ್ರಕಾರ ಪಟ್ಟಣದಲ್ಲಿ 739 ಬೀದಿ ನಾಯಿಗಳಿದ್ದು, 4 ವರ್ಷದಲ್ಲಿ ಈಗ ಅವುಗಳ ಸಂಖ್ಯೆ ದುಪ್ಪಟ್ಟಾಗಿದೆ. ಎಲ್ಲ ಬಡಾವಣೆಗಳಲ್ಲಿಯೂ ಆಟವಾಡುವ ಮಕ್ಕಳು ಸೇರಿ ವೃದ್ಧರ ಮೇಲೆ ದಾಳಿ ಮಾಡುತ್ತಿವೆ. ಪತ್ರಿಕೆ ಹಂಚುವ ಹುಡುಗರು ಕೂಡ ನಾಯಿ ದಾಳಿಗೆ ಹೆದರಿ ಪತ್ರಿಕೆ ಹಾಕಲೂ ಹಿಂಜರಿಯುತ್ತಿದ್ದಾರೆ. ನಾಯಿಗಳನ್ನು ಹಿಡಿದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗಿದೆ.

    ಟೆಂಡರ್‌ಗೆ ಮುಂದೆ ಬರದ ಏಜೆನ್ಸಿಗಳು: ನಾಯಿಗಳ ಸಂತಾನ ಶಕ್ತಿಹರಣ ಸರ್ಕಾರದ ಮಾರ್ಗಸೂಚಿಯಾಗಿದ್ದು, ಇದಕ್ಕಾಗಿ ಸರ್ಕಾರ ಒಂದು ನಾಯಿಗೆ 1,650ರೂ. ನಿಗದಿ ಮಾಡಿದೆ. ಪುರಸಭೆ ಅಡಳಿತ ನಾಲ್ಕು ಬಾರಿ ಟೆಂಡರ್ ಕರೆದಿದ್ದು, ಯಾವ ಏಜೆನ್ಸಿಯವರೂ ನಾಯಿ ಸಂತಾನಹರಣ ಶಸ್ತ್ರಚಿಕಿತ್ಸೆ ಟೆಂಡರ್ ಪಡೆಯಲು ಮುಂದಾಗಿಲ್ಲ. ಇದರಿಂದ ನಾಯಿಗಳ ಹಾವಳಿ ದಿನೇದಿನೆ ಹೆಚ್ಚಳವಾಗಲು ಕಾರಣವಾಗಿದೆ ಎಂಬುದು ಪುರಸಭೆ ಅಧಿಕಾರಿಗಳ ಪ್ರತಿಕ್ರಿಯೆಯಾಗಿದೆ.

    ಇಲಾಖೆಗಳ ಸಾಮರಸ್ಯ ಕುಂಠಿತ: ಪಟ್ಟಣದಲ್ಲಿ ಪುರಸಭೆ ಹಾಗೂ ಪಶುವೈದ್ಯ ಇಲಾಖೆ ಸಹಯೋಗದಲ್ಲಿ ನಾಯಿ ಹಾವಳಿ ತಡೆಗಟ್ಟಲು ಮಾರ್ಗಸೂಚಿ ಕಂಡುಕೊಳ್ಳಬೇಕಾಗಿದೆ. ಆದರೆ, ಎರಡು ಇಲಾಖೆಯ ಸಾಮರಸ್ಯದ ಕೊರತೆಯಿಂದ ಸಾಧ್ಯವಾಗಿಲ್ಲ. ಕೂಡಲೇ ಪುರಸಭೆ ಹಾಗೂ ಪಶುವೈದ್ಯ ಇಲಾಖೆ ಅಧಿಕಾರಿಗಳು ನಾಯಿ ಹಾವಳಿಗೆ ಕಡಿವಾಣ ಹಾಕಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಪಟ್ಟಣದಲ್ಲಿ ನಾಯಿಗಳ ಸಂಖ್ಯೆ ವಿಪರೀತ ಹೆಚ್ಚಳವಾಗಿ ರಸ್ತೆಗಳಲ್ಲಿ ಸಾರ್ವಜನಿಕರು ಓಡಾಡುವುದೇ ಕಷ್ಟವಾಗಿದೆ. ನಾಯಿಗಳ ದಾಳಿ ಪ್ರಕರಣಗಳಲ್ಲಿ ನಿತ್ಯ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳದೆ ಕಣ್ಣುಮುಚ್ಚಿ ಕುಳಿತಿದ್ದಾರೆ. |ರಾಮಣ್ಣ ಹಿರಿಯ ನಾಗರಿಕ, ಕುಣಿಗಲ್

    ನಾಲ್ಕು ವರ್ಷದಿಂದ ನಾಯಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಟೆಂಡರ್ ಕರೆಯುತ್ತಿದ್ದರೂ ಯಾರೂ ಟೆಂಡರ್‌ಗೆ ಅರ್ಜಿ ಹಾಕಿಲ್ಲ. ತಕ್ಷಣವೇ ನಾಯಿ ಹಾವಳಿ ತಡೆಗಟ್ಟಲು ಅಗತ್ಯ ಸೂಕ್ತ ಕ್ರಮಕೈಗೊಳ್ಳಲಾಗುವುದು. | ಶಿವಪ್ರಸಾದ್, ಮುಖ್ಯಾಧಿಕಾರಿ, ಪುರಸಭೆ ಕುಣಿಗಲ್.

    ನಾಯಿ ಹಾವಳಿ ತಡೆಗಟ್ಟಲು ಪುರಸಭೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ನಮ್ಮ ಇಲಾಖೆಯಿಂದ ಸೂಪರವೈಸ್ ಮಾಡಲಾಗುವುದು. 2019-20ರ ಸರ್ವೇ ಪ್ರಕಾರ 739 ನಾಯಿಗಳು ಪಟ್ಟಣದಲ್ಲಿ ಇವೆ. ಈ ಈ ಸಂಖ್ಯೆ ಇನ್ನೂ ಹೆಚ್ಚಳವಾಗಿದೆ. | ಕೃಷ್ಣಮೂರ್ತಿ, ಪಶುವೈದ್ಯಾಧಿಕಾರಿ ಕುಣಿಗಲ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts