More

    ಬಿಜೆಪಿ ಸರ್ಕಾರದ ಸಾಧನೆ ಶೂನ್ಯ

    ಮದ್ದೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರದ ಸಾಧನೆ ಶೂನ್ಯವಾಗಿದ್ದು, ಕೇವಲ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
    ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ ನಡೆದ 2 ಹಂತದ ಪ್ರಜಾಧ್ವನಿ ಯಾತ್ರೆಯ ಹಿನ್ನೆಲೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
    ದೇಶ ಹಾಗೂ ರಾಜ್ಯದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರಗಳಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದ್ದು, ಎಲ್ಲ ವಸ್ತುಗಳು ದುಬಾರಿಯಾಗುತ್ತಿವೆ. ಆದರೆ ಯಾವುದೇ ಅಭಿವೃದ್ಧಿಯನ್ನು ರಾಜ್ಯ ಕಂಡಿಲ್ಲ, ದೇಶದ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಹಾಕುತ್ತೇವೆ, ವಿದೇಶದಿಂದ ಕಪ್ಪು ಹಣ ತರುತ್ತೇವೆ ಎಂದು ಇವರು ಇವರ ಆಡಳಿತದಲ್ಲಿ ಜನ ಸಾಮಾನ್ಯರಿಗೆ ಅನುಕೂಲ ಮಾಡದೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
    ಈ ಹಿಂದೆ ಎಸ್.ಎಂ.ಕೃಷ್ಣ ಹಾಗೂ ಮಾಜಿ ಸಂಸದ ಜಿ.ಮಾದೇಗೌಡ ಸಹಕಾರ ಮಾಡಿರದಿದ್ದರೆ ಈಗ ಶಾಸಕರಾಗಿರುವ ಡಿ.ಸಿ. ತಮ್ಮಣ್ಣ ರಾಜಕೀಯ ಇತಿಹಾಸದ ಪುಟದಲ್ಲಿ ಇರುತ್ತಿರಲಿಲ್ಲ ಎಂದ ಅವರು, ಕಾಂಗ್ರೆಸ್‌ಗೆ ಜಿಲ್ಲೆಯ ಹಾಗೂ ರಾಜ್ಯದ ರೈತರ ಅಭಿವೃದ್ಧಿ ಮಾಡುವ ಶಕ್ತಿಯಿದೆ ಎಂದರು.
    ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಮನೆಯ ಒಡತಿಗೆ ಪ್ರತಿ ತಿಂಗಳು 2000 ರೂ. ಗಳನ್ನು ನೀಡುವುದರ ಜತೆಗೆ ಶಿಕ್ಷಣ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡಲಾಗುವುದು. ಮೇಕೆದಾಟು ಯೋಜನೆ ಸೇರಿದಂತೆ ಹಲವು ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡುವ ರೈತರ ಅಭಿವೃದ್ಧಿಗೆ ಮಹತ್ವ ನೀಡಲಾಗುವುದು ಎಂದರು.
    ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಇದ್ದಾಗ ಹಲವು ಯೋಜನೆಗಳನ್ನು ಜಾರಿಗೆ ತಂದಿತ್ತು. ಆ ಯೋಜನೆಗಳನ್ನು ಬಂದ್ ಮಾಡಲು ಬಿಜೆಪಿ ಮುಂದಾಗಿದೆ.
    ಜನರು ಹಸಿದು ಮಲಗಬಾರದು ಎಂದು ಇಂದಿರಾ ಕ್ಯಾಂಟಿನ್ ತೆರಯಲಾಗಿತ್ತು. ಕೂಲಿ ಕಾರ್ಮಿಕರು 10 ರೂ. ಕೊಟ್ಟು ಊಟ ಮಾಡುತ್ತಿದ್ದರು. ಇದೀಗ ಇಂದಿರಾ ಕ್ಯಾಂಟಿನ್ ಮುಚ್ಚಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ್ರೆ ಯಾರು ಮುಖ್ಯಮಂತ್ರಿ ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಯಾರೇ ಮುಖ್ಯಮಂತ್ರಿಯಾದ್ರು ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿಯಷ್ಟೆ ಶಕ್ತಿ ಇರುತ್ತೆ ಎಂದರು.

    ವೇದಿಕೆಯಲ್ಲಿ ಕಾಂಗ್ರೆಸ್‌ನ ರಾಜ್ಯ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಉಸ್ತುವಾರಿಗಳಾದ ಉಗ್ರಪ್ಪ, ಎಚ್.ಎಂ.ರೇವಣ್ಣ, ಬಿ.ಕೆ.ಚಂದ್ರಶೇಖರ, ಕೆಪಿಸಿಸಿ ಸದಸ್ಯ ಎಸ್.ಗುರುಚರಣ್, ವಿಧಾನ ಪರಿಷತ್ ಸದಸ್ಯರಾದ ಮಧು ಜಿ. ಮಾದೇಗೌಡ, ದಿನೇಶ್ ಗೂಳೀಗೌಡ, ಮಾಜಿ ಸದಸ್ಯ ಬಿ.ರಾಮಕೃಷ್ಣ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್.ಮೋಹನ್‌ಕುಮಾರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಗೌಡ, ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಪುರಸಭಾ ಸದಸ್ಯೆ ಪ್ರಿಯಾಂಕಾ ಅಪ್ಪುಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ಸಂದರ್ಶ, ಜೋಗಿಗೌಡ ಇದ್ದರು.

    ಹಲವು ಅಭಿವೃದ್ಧಿ ಕಾರ್ಯಗಳು: ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಎಸ್.ಗುರುಚರಣ್ ಮಾತನಾಡಿ, ತಾಲೂಕಿನ ಕೊಪ್ಪ ಹಾಗೂ ಬೆಸಗರಹಳ್ಳಿ ನೀರಾವರಿಗೆ ಹೆಚ್ಚು ಕೆಲಸವನ್ನು ನಮ್ಮ ಕುಟುಂಬ ಮಾಡಿದ್ದು, ಶಿಂಷಾ ಎಡದಂಡೆ ಮತ್ತು ಬಲದಂಡೆ ನಾಲೆ ಮಾಡಿಕೊಟ್ಟಿದ್ದು ನನ್ನ ತಾತ ಎಸ್.ಸಿ.ಮಲ್ಲಯ್ಯ. ನನ್ನ ದೊಡ್ಡಪ್ಪ ಎಸ್.ಎಂ. ಕೃಷ್ಣ ಕೊಪ್ಪ ಭಾಗದ ರೈತರು ಸಂಕಷ್ಟಕ್ಕೆ ಸ್ಪಂದಿಸಿ 1999 ರಲ್ಲಿ ಆ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ ರೈತರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಜತೆಗೆ, ತಾಲೂಕಿಗೆ ಜಿ.ಮಾದೇಗೌಡ, ಎಚ್.ಕೆ.ವೀರಣ್ಣಗೌಡ, ಮಂಚೇಗೌಡ ಸೇರಿದಂತೆ ಹಲವರು ತಾಲೂಕಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು ಸ್ಮರಿಸಿಕೊಂಡರು.
    ತಾಲೂಕಿನ ಸೋಮನಹಳ್ಳಿ ಮತ್ತು ಗೆಜ್ಜಲಗೆರೆ ಕೆಐಎಡಿಬಿ ಕೈಗಾರಿಕೆ ಪ್ರದೇಶವನ್ನು ಎಸ್.ಎಂ.ಕೃಷ್ಣ ನಿರ್ಮಾಣ ಮಾಡಿ ಈ ಪ್ರದೇಶದಲ್ಲಿ 20 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ದೊರೆಯುವಂತೆ ಮಾಡಲಾಗಿದೆ. ಇದಕ್ಕೆ ಮೂಲ ಕಾರಣ ಎಸ್.ಎಂ.ಕೃಷ್ಣ ಎಂದರು.
    ಕಾಂಗ್ರೆಸ್ ಪಕ್ಷದಲ್ಲಿ 17 ವರ್ಷಗಳಿಂದ ಕಾರ್ಯನಿರ್ವಹಿಸಿದ್ದೇನೆ. ತಾಪಂ, ಜಿಪಂ ಸೇರಿದಂತೆ ಎಲ್ಲ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ನಿಂತು ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಕೈಯನ್ನು ಬಲಪಡಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
    ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ತಾಲೂಕಿನ ಮಹನೀಯರಾದ ಎಚ್.ಕೆ ವೀರಣ್ಣಗೌಡ, ಜಿ.ಮಾದೇಗೌಡ, ಎಸ್.ಎಂ.ಕೃಷ್ಣ ಗೌರವವನ್ನು ಹೆಚ್ಚಿಸುತ್ತೀರಿ ಎಂದು ನಂಬಿಕೆಯಿದೆ. ಹಿಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 7ಕ್ಕೆ 7 ಸ್ಥಾನಗಳನ್ನು ಜೆಡಿಎಸ್‌ಗೆ ನೀಡಿದ್ದೀರಿ. ಆದರೆ ಆನಂತರ ಸರ್ಕಾರವಿದ್ದರೂ ಜಿಲ್ಲೆಗೆ ಮಹತ್ವದ ಯೋಜನೆಗಳನ್ನು ಜೆಡಿಎಸ್ ನೀಡಲಿಲ್ಲ ಎಂದು ಟೀಕಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts