More

    ‘ಬದಲಾವಣೆ ಸಮಯ’ ಎಂದುಕೊಂಡು ಬಿಜೆಪಿ ಸೇರಿದ ನವೀನ್‌ಕಿರಣ್

    ಚಿಕ್ಕಬಳ್ಳಾಪುರ: ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ‘ಬದಲಾವಣೆ ಸಮಯ’ ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸಚಿವ ಸುಧಾಕರ್‌ಗೆ ಸೆಡ್ಡು ಹೊಡೆದಿದ್ದ ಕೆ.ವಿ.ನವೀನ್ ಕಿರಣ್ ಕಮಲ ಪಾಳಯಕ್ಕೆ ಜಿಗಿದಿದ್ದಾರೆ.

    ಬೆಂಗಳೂರಿನ ಸಿಎಂ ಗೃಹ ಕಚೇರಿಯಲ್ಲಿ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಡಾ ಕೆ.ಸುಧಾಕರ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದು, ಜಿಲ್ಲೆಯ ಕೈ ಪಾಳಯಕ್ಕೆ ಆಘಾತ ನೀಡಿದೆ.

    2018ರ ವಿಧಾನಸಭಾ ಚುನಾವಣೆಯಲ್ಲಿ ಸುಧಾಕರ್ ವಿರುದ್ಧವಾಗಿಯೇ ಸ್ಪರ್ಧಿಸಿ, 29,433 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಉಪ ಚುನಾವಣೆಯಲ್ಲಿ ಕೊನೇ ಕ್ಷಣದಲ್ಲಿ ಪಕ್ಷದ ವರಿಷ್ಠರು ಟಿಕೆಟ್ ನೀಡಲು ಮುಂದಾದರೂ ಹಿಂದೆ ಸರಿದಿದ್ದರು. ಈಗ ಬಿಜೆಪಿ ಸೇರ್ಪಡೆಯಾಗಿರುವುದು ಚರ್ಚೆಗೆ ಗ್ರಾಸವೊದಗಿಸಿದೆ.

    ನಗರಸಭೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದ್ದರೂ ಸ್ವಪಕ್ಷೀಯ ಸದಸ್ಯರೇ ಕೈ ಕೊಟ್ಟು ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಗೆಲುವಿಗೆ ಕೈ ಜೋಡಿಸಿದ್ದಾಗಲೇ ಕೆ.ವಿ.ನವೀನ್ ಕಿರಣ್ ಪಕ್ಷಾಂತರಗೊಳ್ಳುವ ಗುಸುಗುಸು ಕೇಳಿ ಬಂದಿದ್ದವು. ಇದಕ್ಕೆ ಪುಷ್ಟಿ ಎಂಬಂತೆ ಗ್ರಾಪಂ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸಭೆ ಮತ್ತು ಸಮಾರಂಭಗಳಿಂದ ದೂರ ಉಳಿದುಕೊಳ್ಳುತ್ತಿದ್ದಂತೆ ಪಕ್ಷಾಂತರ ಪಕ್ಕಾ ಆಗಿದ್ದು ಕೈ ಮುಖಂಡರ ಮನವೊಲಿಕೆಯ ನಡುವೆಯೇ ಕಾಂಗ್ರೆಸ್ ತೊರೆದಿದ್ದಾರೆ.

    ರಾಜಕೀಯ ಚರ್ಚೆ: ಮಾಜಿ ಶಾಸಕ ಸಿ.ವಿ.ವೆಂಕಟರಾಯಪ್ಪ ಮೊಮ್ಮಗ ಕೆ.ವಿ.ನವೀನ್‌ಕಿರಣ್, ಮೊದಲಿನಿಂದಲೂ ಮಾಜಿ ಸಂಸದ ಆರ್.ಜಾಲಪ್ಪ ಅಳಿಯ, ಪ್ರಭಾವಿ ಮುಖಂಡ ಜಿ.ಎಚ್.ನಾಗರಾಜ್ ಬಣದಲ್ಲಿ ಗುರುತಿಸಿಕೊಂಡಿದ್ದರು. ಈ ಹಿಂದೆ ಇವರೊಂದಿಗೆ ಬಿಜೆಪಿಗೂ ಜಿಗಿದು ಬಳಿಕ ಮತ್ತೆ ಅವರನ್ನೇ ಹಿಂಬಾಲಿಸಿ ಕೈ ಸೇರಿದ್ದರು. ಹಿಂದಿನ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಕೆ.ವಿ.ನವೀನ್ ಕಿರಣ್‌ಗೆ ಬೆಂಬಲವಾಗಿದ್ದ ಜಿ.ಎಚ್.ನಾಗರಾಜ್ ಕೊನೇ ಕ್ಷಣದಲ್ಲಿ ತಟಸ್ಥರಾದರೆ, ಇವರ ಪುತ್ರ ವಿನಯ್ ಶ್ಯಾಮ್ ಜೆಡಿಎಸ್ ಸೇರಿದ್ದರು. ವಿನಯ್ ಶ್ಯಾಮ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯ ನಡುವೆಯೇ ನವೀನ್‌ಕಿರಣ್ ಪಕ್ಷಾಂತರ ಚರ್ಚೆ ಗ್ರಾಸವಾಗಿದೆ. ಇತ್ತೀಚೆಗೆ ಕೆ.ವಿ.ನವೀನ್ ಕಿರಣ್ ಅವರ ಅಧೀನದಲ್ಲಿದ್ದ ಪಂಚಗಿರಿ ಬೋಧನಾ ಪ್ರೌಢಶಾಲೆಯನ್ನು ನ್ಯಾಯಾಲಯದ ಆದೇಶದಂತೆ ಜಿಲ್ಲಾಡಳಿತ, ನಗರಸಭೆಗೆ ಸೇರಿದ ಶಾಲೆ ಎಂದು ವಶಪಡಿಸಿಕೊಂಡಿತ್ತು. ಇದರ ನಡುವೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಸೂಕ್ತ ಸ್ಥಾನಮಾನ ಸೇರಿ ಹಲವು ಬೇಡಿಕೆಗಳ ಚರ್ಚೆಯೊಂದಿಗೆ ಪಕ್ಷ ಸೇರ್ಪಡೆಯ ಮಾತುಕತೆಯಾಗಿತ್ತು ಎಂಬ ಮಾತು ಕೇಳಿ ಬಂದಿದೆ.

    ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ. ವಿಪಕ್ಷಗಳನ್ನು ದ್ವೇಷಿಸಬಾರದೆಂಬ ತಾತ, ಮಾಜಿ ಶಾಸಕ ಸಿ.ವಿ.ವೆಂಕಟರಾಯಪ್ಪ ತತ್ವವನ್ನು ನಂಬಿದವನು ನಾನು. ಈಗ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದೇನೆ.
    ಕೆ.ವಿ.ನವೀನ್ ಕಿರಣ್, ಬಿಜೆಪಿ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts