More

    ಪಿಯು ಫಲಿತಾಂಶ ಗಣನೀಯ ಹೆಚ್ಚಳ * ದಾವಣಗೆರೆ ಜಿಲ್ಲೆಗೆ ಶೇ.75.72 ರಿಸಲ್ಟ್, 21ನೇ ಸ್ಥಾನ

    ದಾವಣಗೆರೆ: ದಾವಣಗೆರೆ ಜಿಲ್ಲೆಗೆ ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.75.72ರಷ್ಟು ಫಲಿತಾಂಶ ಲಭಿಸಿದೆ. ಕಳೆದ ಬಾರಿ 62.72 ಫಲಿತಾಂಶದೊಂದಿಗೆ 19ನೇ ಸ್ಥಾನದಲ್ಲಿತ್ತು.
    ಈ ಬಾರಿ ಶೇ.13ರಷ್ಟು ಫಲಿತಾಂಶ ಪ್ರಮಾಣ ಏರಿಕೆಯಾಗಿದ್ದರೂ 32 ಶೈಕ್ಷಣಿಕ ಜಿಲ್ಲೆಗಳ ಪೈಕಿ 21ನೇ ಸ್ಥಾನ ಪಡೆದಿದೆ. ಕಳೆದ ಸಲಕ್ಕಿಂತ ಎರಡು ಸ್ಥಾನ ಕುಸಿತ ಕಂಡಿದೆ.
    ಪರೀಕ್ಷೆ ಎದುರಿಸಿದ್ದ ಒಟ್ಟು 19654 ವಿದ್ಯಾರ್ಥಿಗಳಲ್ಲಿ 14272 ಮಂದಿ ತೇರ್ಗಡೆಯಾಗಿದ್ದಾರೆ. ಪಾಸಾದವರಲ್ಲಿ 12999 ಹೊಸಬರು, 138 ಖಾಸಗಿ, 1135 ಪುನರಾವರ್ತಿತ ಅಭ್ಯರ್ಥಿಗಳಿದ್ದಾರೆ.
    ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 10263ರಲ್ಲಿ 8021 (ಶೇ.7815) ಬಾಲೆಯರು ತೇರ್ಗಡೆಯಾಗಿದ್ದಾರೆ. 9391 ಬಾಲಕರಲ್ಲಿ 6251 (ಶೇ.66.56) ಪಾಸಾಗಿದ್ದಾರೆ.
    ವಿಭಾಗವಾರು ತಾಳೆ ಹಾಕಿದಾಗ ಶೇ.85.63ರಷ್ಟು ಫಲಿತಾಂಶ ಪಡೆದ ವಿಜ್ಞಾನ ವಿಭಾಗ ಮೊದಲ ಸ್ಥಾನದಲ್ಲಿದೆ. ಇಲ್ಲಿ ನೊಂದಾಯಿತ 9436 ವಿದ್ಯಾರ್ಥಿಗಳ ಪೈಕಿ 8080 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
    ವಾಣಿಜ್ಯ ವಿಭಾಗದಲ್ಲಿ ನೊಂದಾಯಿತ 4717 ಅಭ್ಯರ್ಥಿಗಳ ಪೈಕಿ 3298 ವಿದ್ಯಾರ್ಥಿಗಳು (ಶೇ.69.92), ಕಲಾ ವಿಭಾಗದಲ್ಲಿ ನೊಂದಾಯಿತ 5501 ಅಭ್ಯರ್ಥಿಗಳಲ್ಲಿ 2894 ಮಂದಿ (ಶೇ.52.61) ತೇರ್ಗಡೆಯಾಗಿದ್ದಾರೆ.
    ನಗರವಾಸಿ ವಿದ್ಯಾರ್ಥಿಗಳು ಗ್ರಾಮೀಣರನ್ನು ಮೀರಿಸಿದ್ದಾರೆ. ನೊಂದಾಯಿತ ನಗರವಾಸಿ 15904 ಅಭ್ಯರ್ಥಿಗಳಲ್ಲಿ 11634 (ಶೇ.73.15), ಗ್ರಾಮೀಣ ಭಾಗದ 3750 ನೊಂದಾಯಿತರಲ್ಲಿ 2638 ವಿದ್ಯಾರ್ಥಿಗಳು (ಶೇ.70.35) ಉತ್ತೀರ್ಣರಾಗಿದ್ದಾರೆ.

    * ಬಿ.ಪೂಜಾ ಜಿಲ್ಲೆಗೆ ಟಾಪರ್
    ಮಾಗನೂರು ಬಸಪ್ಪ ಪಪೂ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಬಿ. ಪೂಜಾ 591 (ಶೇ.98.50) ಅಂಕ ಗಳಿಸುವ ಮೂಲಕ ಜಿಲ್ಲೆಗೆ ಟಾಪರ್ ಆಗಿದ್ದಾಳೆ. ರಸಾಯನಶಾಸ್ತ್ರ-ಗಣಿತಶಾಸ್ತ್ರ ಎರಡೂ ವಿಷಯದಲ್ಲಿ ಪೂರ್ಣ 100 ಅಂಕ ಗಳಿಸಿದ್ದು, ಜೀವಶಾಸ್ತ್ರ, ಭೌತಶಾಸ್ತ್ರದಲ್ಲಿ ತಲಾ 99, ಕನ್ನಡದಲ್ಲಿ 97, ಇಂಗ್ಲಿಷ್‌ನಲ್ಲಿ 96 ಅಂಕ ಪಡೆದಿದ್ದಾಳೆ.
    ಬಿ. ಪೂಜಾ, ದಾವಣಗೆರೆಯ ಆನೆಕೊಂಡ ನಿವಾಸಿ, ಪೆಟ್ರೋಲ್‌ಬಂಕ್ ಒಂದರ ವ್ಯವಸ್ಥಾಪಕ ಬಸವರಾಜ್- ಬಿ.ಶಾರದಾ ದಂಪತಿಯ ಪುತ್ರಿ. ಎಸ್ಸೆಸ್ಸೆಲ್ಸಿಯಲ್ಲಿ 619 ಅಂಕ (ಶೇ.99.04) ಪಡೆದಿದ್ದ ಪೂಜಾ, ಪಿಯುನಲ್ಲೂ ಉತ್ತಮ ಫಲಿತಾಂಶದೊಂದಿಗೆ ರಾಜ್ಯಕ್ಕೆ ಆರನೇ ಸ್ಥಾನ ಗಳಿಸಿ ಗಮನ ಸೆಳೆದಿದ್ದಾಳೆ. ಫಲಿತಾಂಶ ಬಂದೊಡೆನೆ ಪಾಲಕರು ಸಿಹಿ ತಿನ್ನಿಸಿ ಸಂಭ್ರಮಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಪ್ರಸಾದ್ ಬಂಗೇರ, ನಿರ್ದೇಶಕ ಡಾ. ಜಿ.ಎನ್.ಎಚ್. ಕುಮಾರ್ ಹೂ ಗುಚ್ಛ ನೀಡಿ ಅಭಿನಂದಿಸಿದರು.
    ‘ಇದಕ್ಕಿಂತಲೂ ಹೆಚ್ಚಿನ ಅಂಕಗಳನ್ನು ನಿರೀಕ್ಷೆ ಮಾಡಿದ್ದೆ. ಆದಾಗ್ಯೂ ಜಿಲ್ಲೆಗೆ ಟಾಪರ್ ಆಗಿದ್ದು ಖುಷಿ ತಂದಿದೆ. ದಿನದಲ್ಲಿ 16 ತಾಸು ಓದುತ್ತಿದ್ದೆ. ಅಧ್ಯಾಪಕರೊಂದಿಗೆ ಸಮಸ್ಯೆಗಳ ಬಗ್ಗೆ ಪರಿಹರಿಸಿಕೊಳ್ಳುತ್ತಿದ್ದೆ. ಕಾಲೇಜು ಮತ್ತು ತಂಗಿದ್ದ ಹಾಸ್ಟೆಲ್‌ನಲ್ಲಿ ಓದಿಗೆ ಉತ್ತಮ ಸಹಕಾರ ನೀಡಿತು. ಅಧ್ಯಾಪಕರೊಂದಿಗೆ ಸಮಸ್ಯೆಗಳ ಬಗ್ಗೆ ಪರಿಹರಿಸಿಕೊಳ್ಳುತ್ತಿದ್ದೆ’ ಎಂದು ಮಾಧ್ಯಮಗಳಿಗೆ ಅನಿಸಿಕೆ ಹೇಳಿಕೊಂಡ ಬಿ.ಪೂಜಾ, ಭವಿಷ್ಯದಲ್ಲಿ ಹೃದ್ರೋಗ ತಜ್ಞೆಯಾಗುವ ಹಂಬಲ ಹೊಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts