More

    ನ.1ಕ್ಕೆ ಕೋಲಾರ ನಗರಸಭೆ ಚುನಾವಣೆ

    ಕೋಲಾರ: ಕೋಲಾರ ನಗರಸಭೆಗೆ ನ.1ರಂದು ನಡೆಯಲಿರುವ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ಬೇಲಿ ದಾಟುವುದನ್ನು ತಪ್ಪಿಸಲು ವಿಪ್ ಜಾರಿ ಮಾಡಲಾಗಿದೆ.

    ಒಟ್ಟು 35 ಸದಸ್ಯ ಬಲ ಹೊಂದಿರುವ ನಗರಸಭೆಗೆ 12 ಮಂದಿ ಕಾಂಗ್ರೆಸ್ ಚಿಹ್ನೆಯಡಿ ಗೆದ್ದಿದ್ದು, ಜೆಡಿಎಸ್‌ನವರು ಅಧಿಕಾರ ಹಿಡಿಯಲು ಬೇಕಾದ ಬಹುಮತಕ್ಕಾಗಿ ಕಾಂಗ್ರೆಸ್ ಸದಸ್ಯರನ್ನು ಸೆಳೆಯಲು ಯತ್ನಿಸಿರುವ ಸುಳಿವು ಅರಿತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಚಂದ್ರಾರೆಡ್ಡಿ ಗುರುವಾರ ಸಂಜೆ ವಿಪ್ ಜಾರಿ ಮಾಡಿ ಉಲ್ಲಂಘಿಸಿದಲ್ಲಿ ಸದಸ್ಯತ್ವ ಅನರ್ಹಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

    ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿಯಿಂದ ವೀಕ್ಷಕರಾಗಿ ಬಂದಿದ್ದ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಸಮ್ಮುಖದಲ್ಲಿ ಬಂಗಾರಪೇಟೆ ಸಮೀಪದ ರೆಸಾರ್ಟ್ ಒಂದರಲ್ಲಿ ನಡೆದ ಸಭೆಯಲ್ಲಿ ಕಟ್ಟುನಿಟ್ಟಿನ ಸಂದೇಶ ರವಾನಿಸಿರುವ ಅಧ್ಯಕ್ಷ ಚಂದ್ರಾರೆಡ್ಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕೈ ಬಲಪಡಿಸಲು ಹಾಗೂ ಜಿಲ್ಲೆಯಲ್ಲಿ ಪಕ್ಷವನ್ನು ಮರು ಸಂಘಟಿಸಲು ಕೋಲಾರ ನಗರಸಭೆಯಲ್ಲಿ ಅಧಿಕಾರ ಹಿಡಿಯುವುದು ಅವಶ್ಯಕ ಎಂದು ಪ್ರತಿಪಾದಿಸಿದ್ದಾರೆ.

    ಈ ನಡುವೆ ಗೋವಿಂದರಾಜು ಬೆಳಗ್ಗೆ 11ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಮುಂಬರುವ ಗ್ರಾಪಂ ಚುನಾವಣೆ ಸಿದ್ಧತೆಗಾಗಿ ಬೂತ್‌ಮಟ್ಟದಲ್ಲಿ ಏಜೆಂಟರ ನೇಮಕಾತಿ ಸಂಬಂಧ ಸಮಾಲೋಚನೆ ನಡೆಸಿದ ಬಳಿಕ ರೆಸಾರ್ಟ್‌ಗೆ ತೆರಳಿ ಹಾಜರಿದ್ದ 9 ಸದಸ್ಯರ ಜತೆ ಮೂರು ಗಂಟೆ ಕಾಂಗ್ರೆಸ್ ಸದಸ್ಯರಿಗೆ ಹಿತೋಪದೇಶ ನೀಡಿ ಒಗ್ಗಟ್ಟು ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.

    ನಮ್ಮ ಪಕ್ಷ ಅತ್ಯಧಿಕ ಸ್ಥಾನ ಪಡೆದಿದ್ದರೂ ಬಹುಮತಕ್ಕೆ ಕನಿಷ್ಠ 9 ಸದಸ್ಯರ ಅವಶ್ಯಕತೆಯಿದೆ. ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿರುವ ಸದಸ್ಯರ ಕರೆತರಲು ಮುಖಂಡರು ಪ್ರಯತ್ನ ನಡೆಸಿದ್ದಾರೆ. ಪಕ್ಷೇತರರು ನಮ್ಮೊಂದಿಗೆ ಕೈ ಜೋಡಿಸಿದರೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು ಎಂದರು.

    ನಗರಸಭೆ ಚುನಾವಣೆಯನ್ನು ನನ್ನ ಸಹಪಾಠಿ ನಸೀರ್ ಅಹ್ಮದ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಸಹ ಪಕ್ಷವನ್ನು ಅಧಿಕಾರಕ್ಕೆ ತರಲು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಆಡಳಿತ ಚುಕ್ಕಾಣಿ ಹಿಡಿಯುವುದು ಕಷ್ಟವೇನಿಲ್ಲ ಎಂದು ಅಭಿಪ್ರಾಯಿಸಿದರು.

    ಶನಿವಾರದೊಳಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿಯಲಿದ್ದು, ಯಾರೇ ಅಭ್ಯರ್ಥಿಯಾದರೂ ಬೆಂಬಲಿಸಬೇಕು, ಈ ಮಧ್ಯೆ ಜೆಡಿಎಸ್‌ನ ಕೆಲವು ಮುಖಂಡರು ಮತ್ತು ಸದಸ್ಯರಿಂದ ಸಮ್ಮಿಶ್ರ ಆಡಳಿತಕ್ಕೆ ಒಲವು ವ್ಯಕ್ತವಾಗಿರುವುದು ತಿಳಿದುಬಂದಿದ್ದು, ಒಂದು ವೇಳೆ ಕೊಟ್ಟು ತೆಗೆದುಕೊಳ್ಳುವ ಸೂತ್ರಕ್ಕೆ ಒಪ್ಪಿದಲ್ಲಿ ಪರಿಗಣಿಸಲಾಗುವುದು. ಆದರೆ ಈಗ ಲಭ್ಯವಿರುವ ಮಾಹಿತಿ ಪ್ರಕಾರ ನಾವು ಆಡಳಿತ ನಡೆಸಲು ಬೇಕಾದ ಸಂಖ್ಯೆ ಲಭ್ಯವಾಗುವುದರಿಂದ ಜೆಡಿಎಸ್ ಮುಖಂಡರ ನಿರ್ಧಾರ ಕಾದು ನೋಡಲಾಗುವುದು ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

    ಎಸ್‌ಡಿಪಿಐನ 4 ಸದಸ್ಯರ ಬೆಂಬಲ ಪಡೆಯುವ ಸಂಬಂಧ ಪ್ರಯತ್ನ ಮುಂದುವರಿದಿದೆ. ಪಕ್ಷೇತರರಾಗಿ ಗೆದ್ದಿರುವ ಅಲ್ಪಸಂಖ್ಯಾತರಲ್ಲಿ ಬಹುತೇಕರು ನಮ್ಮ ಅಭ್ಯರ್ಥಿ ಪರ ಮತದಾನ ಮಾಡುವ ನಿರೀಕ್ಷೆ ಇದೆ. ಆಮಿಷಗಳಿಗೆ ಬಲಿಯಾಗದೆ ಒಗ್ಗಟ್ಟು ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಶಾಸಕ ಎಸ್.ಎನ್. ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್, ಕಿಸಾನ್‌ಖೇತ್ ಅಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ನಗರಸಭೆ ಸದಸ್ಯ ಮುಬಾರಕ್ ಇದ್ದರು.

    ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ: ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಒಮ್ಮತಕ್ಕೆ ಬರಲು ಮುಖಂಡರಿಗೆ ಈವರೆಗೆ ಸಾಧ್ಯವಾಗಿಲ್ಲ. ಎಮ್ಮೆಲ್ಸಿ ನಸೀರ್ ಅಹ್ಮದ್ ಬೆಂಬಲಿತ ಮೂವರು ಸದಸ್ಯರು ಸಭೆಗೆ ಗೈರಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅಲ್ಪಸಂಖ್ಯಾತ ಅಥವಾ ಕುರುಬ ಸಮುದಾಯಕ್ಕೆ ಅವಕಾಶ ಮಾಡಿಕೊಡಲು ಚರ್ಚೆ ನಡೆಯುತ್ತಿದೆ. ಈ ಎರಡು ಸ್ಥಾನದಲ್ಲಿ ಕುರುಬ ಸಮುದಾಯಕ್ಕೆ ಅವಕಾಶ ಮಾಡಿಕೊಟ್ಟಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಪಕ್ಷೇತರರಾಗಿ ಗೆದ್ದಿರುವ ಈ ಸಮುದಾಯದ ಸದಸ್ಯರು ಒಗ್ಗೂಡಿ ಬೆಂಬಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯುವ ಅವಕಾಶ ಶೇ.50 ರಷ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts