More

    ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ

    ಹೊನ್ನಾವರ: ನೆರೆಹಾವಳಿಯಿಂದ ಪ್ರತಿ ವರ್ಷ ತೊಂದರೆ ಅನುಭವಿಸುತ್ತಿರುವವರಿಗೆ ಶಾಶ್ವತ ಪರಿಹಾರ ನೀಡಲಾಗುವುದು. ತಗ್ಗುಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಸರ್ಕಾರಿ ಭೂಮಿಯಲ್ಲಿ ವಸತಿ ನಿರ್ಮಾಣ ಮಾಡಲು ಮುಖ್ಯಮಂತ್ರಿಗಳೊಂದಿಗೆ ರ್ಚಚಿಸಿ 10 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

    ತಾಲೂಕಿನ ಗುಂಡಬಾಳ ನದಿ ತೀರದ ಹಡಿನಬಾಳ, ಕಡಗೇರಿ, ಚಿಕ್ಕನಕೋಡದ ನೆರೆ ಪೀಡಿತ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿದ ಅವರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ಸಂತ್ರಸ್ತರಿಗೆ ಧೈರ್ಯತುಂಬಿದರು.

    ರಾಜ್ಯದಲ್ಲಿ ಕೊವಿಡ್ ಸಮಸ್ಯೆ ಇರುವಾಗಲೂ ನೆರೆ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸುತ್ತಿದ್ದೇವೆ. ಸರ್ಕಾರ ಯುದ್ದೋಪಾದಿಯಲ್ಲಿ ನೆರೆ ಮತ್ತು ಕೊವಿಡ್ ಸಮಸ್ಯೆಗೆ ಸ್ಪಂದಿಸುತ್ತಿದೆ. ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರಕ್ಕಾಗಿ 340 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.

    ಗುಂಡಬಾಳ ನದಿ ತೀರದಲ್ಲಿ ಪ್ರತಿ ವರ್ಷ ನೆರೆಯಿಂದ ತೊಂದರೆಯಾಗುತ್ತಿದೆ. ಈ ಭಾಗದಲ್ಲಿ 500 ಜನರಿಗೆ ಸಾಕಾಗುವಂತೆ ವಸತಿ ಸಮುಚ್ಛಯ ನಿರ್ವಿುಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ವಾಚನಾಲಯ ವ್ಯವಸ್ಥೆಯೂ ಇರುವಂತೆ ನೋಡಿಕೊಳ್ಳಲಾಗುವುದು ಎಂದರು.

    ಇದರಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರು ಗುಣಮಟ್ಟದ ಕಾಮಗಾರಿಯಾಗುವಂತೆ ನೋಡಿಕೊಳ್ಳಬೇಕು. ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಯಾವುದೇ ತಾರತಮ್ಯವಾಗದಂತೆ ನೋಡಿಕೊಳ್ಳಬೇಕು ಎಂದರು.

    ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ, ಜಿ.ಪಂ.ಸಿಇಒ ರೋಶನ್, ತಹಸೀಲ್ದಾರ ವಿವೇಕ ಶೇಣ್ವಿ ಇತರರು ಇದ್ದರು.

    ಸಂಪೂರ್ಣ ಮನೆ ಹಾನಿಗೆ 5 ಲಕ್ಷ ರೂ.: ಮನೆ ಸಂಪೂರ್ಣ ಹಾನಿಯಾದರೆ 5 ಲಕ್ಷ ರೂ., ಪಾರ್ಶ್ವ ಮನೆ ಹಾನಿಯಾದರೆ 3 ಲಕ್ಷ ರೂ., ಭಾಗಶಃ ಹಾನಿಯಾದರೆ 1 ಲಕ್ಷ ರೂ., ಮನೆಗೆ ನೀರು ನುಗ್ಗಿದಲ್ಲಿ 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ತಿಳಿಸಿದರು.

    ಶಾಸಕರಿಂದ ಮನವಿ: ಶಾಸಕ ಸುನೀಲ ನಾಯ್ಕ ಮಾತನಾಡಿ, ಕಳೆದ 30 ವರ್ಷಗಳಿಂದ ಈ ಭಾಗದಲ್ಲಿ ಸತತ ಮಳೆಯಿಂದ ಗುಂಡಬಾಳ ನದಿ ಉಕ್ಕಿ ಹರಿದು ನೆರೆ ಭೀತಿ ಉಂಟಾಗುತ್ತಿದೆ. ಲಿಂಗನಮಕ್ಕಿ ಜಲಾಶಯದ ನೀರು ಬಿಟ್ಟಾಗಲೂ ಈ ಪ್ರದೇಶ ನೀರಿನಿಂದ ಆವೃತವಾಗುತ್ತಿದೆ. ನೆರೆಯಿಂದ 345 ಮನೆಗಳಿಗೆ ನೀರು ನುಗ್ಗಿದೆ. ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆರ್.ಅಶೋಕ ಅವರಿಗೆ ಮನವಿ ಮಾಡಿದರು.

    ನೆಲದ ಮೇಲೆ ಕುಳಿತು ಸಮಸ್ಯೆ ಆಲಿಸಿದ ಸಚಿವರು: ಗುಂಡಬಾಳ ನದಿ ತೀರದ ಚಿಕ್ಕನಕೋಡದ ಗುಂಡಿಬೈಲ್ ನಂ.1 ಶಾಲೆಯಲ್ಲಿ ಕಾಳಜಿ ಕೇಂದ್ರಕ್ಕೆ ಸಚಿವ ಆರ್.ಅಶೋಕ ಭೇಟಿ ನೀಡಿದರು. ಕಾಳಜಿಕೇಂದ್ರದಲ್ಲಿ ಎಲ್ಲೆಂದರಲ್ಲಿ ಮಲಗಿದ್ದ ಮಕ್ಕಳ ಸ್ಥಿತಿಯನ್ನು ನೋಡಿ ಮರುಗಿದ ಸಚಿವರು ನೆಲದಲ್ಲಿಯೇ ಕುಳಿತು ಅವರ ಸಮಸ್ಯೆ ಆಲಿಸಿದರು.

    ಊಟ, ಉಪಾಹಾರ ಬಗೆಗೆ ಸಮಾಲೋಚನೆ ನಡೆಸಿದರು. ಉಳಿಯಲು ಹಾಸಿಗೆ, ಬೆಡ್​ಶೀಟ್, ತಲೆದಿಂಬು, ಗುಣಮಟ್ಟದ ಆಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

    ಶಾಸಕ ಸುನೀಲ್ ನಾಯ್ಕ ಮತ್ತು ಅಧಿಕಾರಿಗಳಿಂದ 3 ಎಕರೆ ಕಂದಾಯ ಭೂಮಿ ಇರುವುದರ ಕುರಿತು ಮಾಹಿತಿ ಪಡೆದ ಸಚಿವ ಅಶೋಕ ಅವರು ‘ತಗ್ಗು ಪ್ರದೇಶದಲ್ಲಿದ್ದು ಸಮಸ್ಯೆ ಎದುರಿಸುತ್ತಿರುವವರಿಗೆ ನಿಮಗೆ ವಸತಿ ಸಮುಚ್ಛಯವನ್ನು ನಿರ್ವಿುಸಿಕೊಡಲಾಗುವುದು. ಈಗಿರುವ ಮನೆಗಳನ್ನು ನೆಲಸಮಗೊಳಿಸಿ ಹೊಸಮನೆಯಲ್ಲಿ ಉಳಿದುಕೊಳ್ಳಬೇಕು ಎಂದರು. ಇದರಿಂದ ಕಂಗಾಲಾದ ಸಂಸ್ತ್ರಸ್ತರು, ‘ನಮ್ಮ ತೋಟ ಗದ್ದೆಗಳು ಮನೆಯ ಸಮೀಪವೇ ಇವೆ. ಈಗಿರುವ ಮನೆಯನ್ನು ಬಿಡಲು ಆಗುವುದಿಲ್ಲ ಎಂದು ಅಳಲು ತೋಡಿಕೊಂಡರು.

    ‘ನಿಮ್ಮ ತೋಟದಲ್ಲಿ ಕೃಷಿಚಟುವಟಿಕೆಗಳನ್ನು ಮಾಡಲು ಅಭ್ಯಂತರವಿಲ್ಲ. ವಾಸ್ತವ್ಯವನ್ನು ಸರ್ಕಾರ ನೀರ್ವಿುಸುವ ಹೊಸ ಮನೆಯಲ್ಲಿ ಮಾತ್ರ ಮಾಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts