More

    ನಿರ್ವಹಣೆ ಇಲ್ಲದ ರಸ್ತೆ

    ಸಿದ್ದಾಪುರ: ಮಳೆಗಾಲ ಆರಂಭವಾದರೂ ತಾಲೂಕಿನ ಮುಖ್ಯರಸ್ತೆಗಳ ನಿರ್ವಹಣೆ ಹಾಗೂ ಗಟಾರ್ ಹೂಳೆತ್ತುವ ಕಾಮಗಾರಿಗಳು ಆರಂಭಗೊಳ್ಳದೆ ಇರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ನಿತ್ಯ ಸಂಕಟಪಡುವಂತಾಗಿದೆ.

    ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ, ಲೋಕೋಪಯೋಗಿ, ಜಿಪಂ ಇಲಾಖೆ ಹಾಗೂ ಗ್ರಾಮೀಣ ರಸ್ತೆಗಳಲ್ಲಿ ಹೊಂಡ ಬಿದ್ದಿರುವುದರಿಂದ ನೀರು ನಿಂತು ವಾಹನ ಸವಾರರು ಜೀವ ಭಯದಲ್ಲೇ ಓಡಾಡುವಂತಾಗಿದೆ. ಇನ್ನು ಗಟಾರದಲ್ಲಿ ಹರಿಯಬೇಕಿದ್ದ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಇದು ರಸ್ತೆಯೋ ಅಥವಾ ಸಣ್ಣ ಹಳ್ಳವೋ ಎಂದು ಜನತೆ ಆಡಿಕೊಳ್ಳುವಂತಾಗಿದೆ.

    ಇಷ್ಟೂ ಸಾಲದೆಂಬಂತೆ ರಸ್ತೆಯ ಇಕ್ಕೆಲಗಳಲ್ಲಿ ಮರಮಟ್ಟು, ಜೀಡುಗಳು, ಬಿದಿರಿನ ಹಿಂಡುಗಳು ರಸ್ತೆಗೆ ಬಾಗಿ ನಿಂತಿದೆ. ಅಲ್ಲದೆ, ಕೆಲವೆಡೆ ರಸ್ತೆಯ ಪಕ್ಕದಲ್ಲಿ ಅಪಾಯದಂಚಿನಲ್ಲಿ ಮರಗಳಿದ್ದು, ಇವು ಯಾವುದೇ ಕ್ಷಣದಲ್ಲಿ ಬೀಳಬಹುದಾಗಿದೆ. ಈಗಾಗಲೇ ಗಾಳಿ-ಮಳೆಗೆ ಹತ್ತಾರು ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದು ತಂತಿ ತುಂಡಾಗಿದ್ದಲ್ಲದೆ, ವಿದ್ಯುತ್ ಕಂಬಗಳು ಮುರಿದು ಹಾನಿ ಸಂಭವಿಸಿದೆ.

    ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಸಿದ್ದಾಪುರ-ಕುಮಟಾ, ಸಿದ್ದಾಪುರ-ಮಾವಿನಗುಂಡಿ-ಜೋಗ, ಮಾವಿನಗುಂಡಿ-ಹೊನ್ನಾವರ, ಸಿದ್ದಾಪುರ-ಶಿರಸಿ, ಸಿದ್ದಾಪುರ-ಸಾಗರ, ಸಿದ್ದಾಪುರ-ಸೊರಬ ಮಾರ್ಗದ ಗಟಾರ್​ಗಳ ಅವ್ಯವಸ್ಥೆಯೇ ಹೀಗಾದರೆ ಇನ್ನು ಗ್ರಾಮೀಣ ಪ್ರದೇಶದ ರಸ್ತೆಗಳ ಸ್ಥಿತಿ ಹೇಳತೀರದಾಗಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಳೆಗಾಲದ ಪೂರ್ವದಲ್ಲಿ ಮಾಡಬೇಕಾದ ಕಾಮಗಾರಿಗಳನ್ನು ಯಾಕೆ ಮಾಡುತ್ತಿಲ್ಲ ಎಂದು ಜನತೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

    ಕೆಲವೆಡೆ ಗಟಾರ್​ಗಳಲ್ಲಿನ ಹೂಳನ್ನು ತೆಗೆಯಲಾಗಿದೆ. ಮೂರ್ನಾಲ್ಕು ದಿನದಲ್ಲಿ ಗಟಾರ್ ಹೂಳನ್ನು ತೆಗೆಯುವ ಕಾಮಗಾರಿ ಹಾಗೂ ರಸ್ತೆ ಪಕ್ಕದ ಜೀಡುಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಮಾಡಲಾಗುವುದು.

    | ಎಂ. ಎಚ್. ಮುದುಕಣ್ಣನವರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts