More

    ನಷ್ಟದಲ್ಲಿ ಕಲ್ಲಂಗಡಿ ಬೆಳೆಗಾರ

    ಅಂಕೋಲಾ: ಕರೊನಾದಿಂದ ಕಂಗೆಟ್ಟಿದ್ದ ಕಲ್ಲಂಗಡಿ ಬೆಳೆಗಾರರಿಗೆ ತೌಕ್ತೆ ಚಂಡಮಾರುತದ ಅಬ್ಬರವು ಗಾಯದ ಮೇಲೆ ಬರೆ ಎಳೆದಿದೆ.
    ಕೋವಿಡ್​ನಿಂದ ಲಾಕ್​ಡೌನ್ ಆಗಿ ಹಣ್ಣು ಖರೀದಿಸುವವರೇ ಇಲ್ಲದಂತಾಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಚಂಡಮಾರುತದ ಅಬ್ಬರದಿಂದಾಗಿ ಕಲ್ಲಂಗಡಿ ಗದ್ದೆಗೆ ಉಪ್ಪು ನೀರು ನುಗ್ಗಿ ಮತ್ತಷ್ಟು ಹಾನಿ ಉಂಟಾಗಿದೆ.
    ಅಂಕೋಲಾ ತಾಲೂಕಿನ ಬೇಲೆಕೇರಿ, ಭಾವಿಕೇರಿ, ಪೂಜಗೇರಿ, ತೆಂಕಣಕೇರಿ, ಸಿಂಗನಮಕ್ಕಿ ಸೇರಿ ತಾಲೂಕಿನಲ್ಲಿ ಸುಮಾರು 300 ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ. ಬೇಲೆಕೇರಿಯಲ್ಲಿ ಮಾರುತಿ ಎಂ. ನಾಯ್ಕ ಎಂಬ ರೈತ 2 ಎಕರೆ ಜಮೀನನ್ನು ಗೇಣಿ ಪಡೆದು ಕಲ್ಲಂಗಡಿ ಬೆಳೆದಿದ್ದರು. ಆದರೆ, ಕರೊನಾ ಹಿನ್ನೆಲೆಯಲ್ಲಿ ಕಲ್ಲಂಗಡಿ ಹಣ್ಣು ಖರೀದಿಸುವವರೆ ಇಲ್ಲದಿರುವುದರಿಂದ ಜಮೀನಿನಲ್ಲೇ ರಾಶಿ ಹಾಕಿದ್ದಾರೆ. ಮತ್ತೊಂದೆಡೆ ರಾಶಿ ಹಾಕಿದ್ದ ಕಲ್ಲಂಗಡಿಗೆ ಕಳೆದ ಎರಡು ದಿನದಿಂದ ಸಮುದ್ರದ ಉಪ್ಪು ನೀರು ನುಗ್ಗಿ ಕೊಳೆಯಲಾರಂಭಿಸಿವೆ.
    ಕಳೆದ ವರ್ಷ 1 ಟನ್​ಗೆ 12ರಿಂದ 15 ಸಾವಿರದವರೆಗೂ ಬೆಲೆ ಇತ್ತು. ಆದರೆ, ಈ ವರ್ಷ ಬೆಲೆ ಇಲ್ಲದ್ದರಿಂದ ಖರೀದಿದಾರರಿಗೆ ಬೆಲೆ ನಿಗದಿ ಮಾಡದೆ ಕೊಟ್ಟಷ್ಟು ಕೊಡಲಿ ಎಂದು ಮಾರಾಟ ಮಾಡುತ್ತಿದ್ದಾರೆ.

    2 ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗೆ 3 ಲಕ್ಷ ರೂ. ಆದಾಯ ಬರಬೇಕಾಗಿತ್ತು. ಆದರೆ, ಕರೊನಾದಿಂದಾಗಿ ಯಾರೂ ಬೆಲೆ ನಿಗದಿಪಡಿಸಲು ಮುಂದಾಗದಿದ್ದರಿಂದಾಗಿ ಒಬ್ಬರಿಗೆ 12 ಟನ್ ಕಲ್ಲಂಗಡಿ ಹಣ್ಣನ್ನು ನೀಡಿದ್ದೇನೆ. ಕಳೆದ ವರ್ಷ 1 ಟನ್​ಗೆ 14ರಿಂದ 15 ಸಾವಿರಕ್ಕೆ ಮಾರಾಟ ಮಾಡಿದ್ದೆ. ಆದರೆ, ಈ ಬಾರಿ ಹಣ್ಣು ಹಾಳಾಗುವ ಮುನ್ನ ಯಾರಾದರೂ ತೆಗೆದುಕೊಂಡು ಹೋದರೆ ಸಾಕು ಎನ್ನುವಂತಾಗಿದೆ.
    | ಮಾರುತಿ ಎಂ. ನಾಯ್ಕ, ಕಲ್ಲಂಗಡಿ ಬೆಳೆಗಾರ


    ಕರೊನಾದಿಂದಾಗಿ ಕಲ್ಲಂಗಡಿ ಬೆಳೆಗಾರರಿಗೆ ಹಾನಿ ಉಂಟಾಗಿದೆ. ಇದನ್ನು ಖರೀದಿಸಿ ಬೇರೆಡೆ ಸಾಗಿಸುವವರಿಗೆ ತೊಂದರೆ ಉಂಟಾಗಿದೆ. ಇದರಿಂದ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಇದರ ನಡುವೆಯೇ ಈಗ ಚಂಡಮಾರುತದಿಂದಾಗಿ ಭಾವಿಕೇರಿ ಭಾಗಗಳಲ್ಲಿ ಕಲ್ಲಂಗಡಿ ಬೆಳೆದ ಪ್ರದೇಶಕ್ಕೆ ಸಮುದ್ರದ ಉಪ್ಪು ನೀರು ನುಗ್ಗಿ ಹಾನಿಯಾಗಿದೆ. ಇದಕ್ಕೆ ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು.
    | ಎನ್.ಎಂ. ಭಂಡಾರಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅಂಕೋಲಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts