More

    ದಸಂಸದಿಂದ ಬೆಳಗಾವಿ ಚಲೋ

    ದಾವಣಗೆರೆ:ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗಾಗಿ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸಹಯೋಗದಲ್ಲಿ ಡಿ.20ರಂದು ಬೆಳಗಾವಿ ಚಲೋ ಹಮ್ಮಿಕೊಂಡಿದ್ದು, ಅಂದು ಅಲ್ಲಿನ ರಾಣಿ ಚನ್ನಮ್ಮ ವೃತ್ತದಿಂದ ಸುವರ್ಣಸೌಧವರೆಗೆ ಸಾಮಾಜಿಕ ನ್ಯಾಯ ಸಂಕಲ್ಪ ರ‌್ಯಾಲಿ ನಡೆಸಲಿದೆ.
    ರಾಜ್ಯದ 31 ಜಿಲ್ಲೆಯ ದಲಿತ ಮುಖಂಡರು, ಸಮಾನ ಮನಸ್ಕ ಸಂಘಟನೆಗಳು ಭಾಗವಹಿಸಲಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಡಾ.ಎನ್.ಮೂರ್ತಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    101 ಪರಿಶಿಷ್ಟ ಜಾತಿಗಳಿಗೆ ನೀಡುತ್ತಿರುವ ಮೀಸಲು, ಜಾತಿಗಳ ಮಧ್ಯೆ ಸಮನಾಗಿ ಹಂಚಿಕೆ ಆಗಿಲ್ಲ. ಒಳಮೀಸಲು ವರ್ಗೀಕರಣ ಸಂಬಂಧ ಎ.ಜೆ.ಸದಾಶಿವ ಆಯೋಗ ವರದಿ ಸಲ್ಲಿಸಿ 17 ವರ್ಷ ಕಳೆದರೂ ಸರ್ಕಾರ ಅದನ್ನು ಅಂಗೀಕರಿಸಿಲ್ಲ. 2004ರಿಂದ ಇದುವರೆಗಿನ ಸರ್ಕಾರಗಳು ಪರಿಶಿಷ್ಟರಿಗೆ ಮೋಸ ಎಸಗಿವೆ ಎಂದು ದೂರಿದರು.
    ಒಳ ಮೀಸಲು ಎಂಬುದು ನಿರುದ್ಯೋಗ ನಿವಾರಣೆಗಾಗಿ ಅಥವಾ ಆರ್ಥಿಕ ಸಮಾನತೆಗಾಗಿ ಇಲ್ಲ. ಬದಲಾಗಿ ಸಾಮಾಜಿಕ ನ್ಯಾಯಕ್ಕಾಗಿ ಬೇಕು. ಸದಾಶಿವ ಆಯೋಗ ವರದಿ ಜಾರಿಯಾದರೆ ಕೊರಚ, ಕೊರಮ ಭೋವಿ, ಲಂಬಾಣಿ ಸಮುದಾಯಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಅವರಿಗೂ ಶೇ.3ರಷ್ಟು ಮೀಸಲು ಶಿಫಾರಸು ಆಗಿದ್ದು ಅದನ್ನು ನೀಡಬೇಕೆಂಬುದೇ ನಮ್ಮ ಒತ್ತಡ.
    ಆದರೆ ಮೀಸಲು ಪಟ್ಟಿಯಿಂದಲೇ ಕೈಬಿಡಲಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಅಲ್ಲದೆ ಸದಾಶಿವ ಆಯೋಗದ ವರದಿಗೆ ವಿರೋಧಿಸಲಾಗುತ್ತಿದೆ, ಇದು ಸರಿಯಲ್ಲ. ಹಾಗೆ ವಿರೋಧ ಮಾಡುವವರು ಸಂವಿಧಾನ ಹಾಗೂ ಅಂಬೇಡ್ಕರ್ ವಿರೋಧಿಗಳು ಎಂದು ಟೀಕಿಸಿದರು.
    ಚಳಿಗಾಲದ ಅಧಿವೇಶನದಲ್ಲಿ ಆಯೋಗದ ವರದಿ ಮಂಡಿಸಿ, ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಪರಿಶಿಷ್ಟರ ಮೀಸಲು ವರ್ಗೀಕರಣಕ್ಕಾಗಿ ಸಂವಿಧಾನದ ಅನುಚ್ಛೇದ 341(3)ಕ್ಕೆ ತಿದ್ದುಪಡಿ ತರಬೇಕು.
    ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಶೇ.17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.7ರ ಮೀಸಲು ಹೆಚ್ಚಿಸಿದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಒಪ್ಪಿ ಅನುಷ್ಠಾನಗೊಳಿಸಬೇಕು. ಪರಿಶಿಷ್ಟರ ಭೂಮಿಪರಭಾರೆ ಕಾಯ್ದೆಗೆ ತಿದ್ದುಪಡಿ ತರಬೇಕು, ಎಸ್‌ಸಿಎಸ್‌ಪಿ/ ಟಿಎಸ್‌ಪಿ ಕಾಯ್ದೆಯ ಕ್ಲಾಸ್ 7 ಡಿಯನ್ನು ರದ್ದುಪಡಿಸುವಂತೆ ಪ್ರತಿಭಟನೆ ಮೂಲಕ ಆಗ್ರಹಿಸಲಾಗುವುದು ಎಂದರು.
    ಸುದ್ದಿಗೋಷ್ಠಿಯಲ್ಲಿ ಅಣ್ಣಪ್ಪ ತಣಿಗೆರೆ, ಪರಶುರಾಂ, ನಾಗೇಶ್ವರ, ಉಮಾ ತೋಟಪ್ಪ, ಬೈಲಹೊನ್ನಯ್ಯ, ಮಲ್ಲಪ್ಪ ಇತರರಿದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts