More

    ತುಪ್ಪ ಕದ್ದವರ ವಿರುದ್ಧ ಕ್ರಮಕ್ಕೆ ಪಟ್ಟು

    ಕೋಲಾರ: ಕೋಚಿಮುಲ್‌ನಲ್ಲಿ ಹಾಲು ಉತ್ಪನ್ನಗಳನ್ನು ಕಳ್ಳತನ ಮಾಡಿ ಒಕ್ಕೂಟಕ್ಕೆ ನಷ್ಟ ಉಂಟು ಮಾಡಿರುವವರನ್ನು ಸೇವೆಯಿಂದ ವಜಾ ಮಾಡುವುದು ಇನ್ನಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಕೋಚಿಮುಲ್ ಕಾರ್ಯ ನಿರ್ವಾಹಕ ನಿರ್ದೇಶಕರಿಗೆ ಶನಿವಾರ ಮನವಿ ಸಲ್ಲಿಸಿದರು.

    ಸಂಘದ ಅಧ್ಯಕ್ಷ ವಿಟ್ಟಪ್ಪನಹಳ್ಳಿ ವೆಂಕಟೇಶ್ ಮಾತನಾಡಿ, ಒಕ್ಕೂಟದಲ್ಲಿ ಇತ್ತೀಚಿಗೆ 10.2 ಲಕ್ಷ ರೂ. ಬೆಲೆ ಬಾಳುವ ತುಪ್ಪ ಕಳ್ಳತನವಾಗಿದ್ದು, ಖಾಸಗಿ ಸಾರಿಗೆ ಗುತ್ತಿಗೆಗೆ ಸೇರಿದ ಸಹಾಯಕ ಚಾಲಕ ಹಾಗೂ ಉತ್ಪಾದನಾ ಘಟಕದ ಅಧಿಕಾರಗಳೇ ಇದಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಅವರನ್ನು ಸೇವೆಯಿಂದ ವಜಾಗೊಳಿಸಬೇಕು, ಉಂಟಾಗಿರುವ ನಷ್ಟವನ್ನು ಅವರಿಂದ ವಸೂಲಿ ಮಾಡಬೇಕು ಎಂದರು.

    ತುಪ್ಪ ಕಳ್ಳತನದ ಹಿಂದೆ ಹಿರಿಯ ಅಧಿಕಾರಿಗಳಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಉತ್ಪನ್ನ ಸೋರಿಕೆ ತಡೆದರೆ ಹಾಲು ಖರೀದಿ ದರ 27ರಿಂದ 35 ರೂಗೆ, ನೌಕರರ ಪ್ರೋತ್ಸಾಹಧನ ಹೆಚ್ಚಿಸಬಹುದು. ಒಕ್ಕೂಟದ ಅಧಿಕಾರಿಗಳು, ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಪಶು ಆಹಾರ ಬೆಲೆ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖಾಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದರು.
    ಸಂಘದ ಗೌರವಾಧ್ಯಕ್ಷ ಗೋಪಾಲ್ ಮಾತನಾಡಿ, ತುಪ್ಪ ಕಳ್ಳತನಕ್ಕೆ ಕಾರಣವಾಗಿರುವವರನ್ನು ಸೇವೆಯಿಂದ ವಜಾ ಮಾಡಬೇಕು. ಬೇರೆ ಒಕ್ಕೂಟಕ್ಕೆ ವರ್ಗಾವಣೆ ಮಾಡುವುದು, ಮತ್ತೆ ಕೆಲಸಕ್ಕೆ ಸೇರಿಸಿಕೊಂಡರೆ ಹೆದ್ದಾರಿ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದರು.

    ಒಕ್ಕೂಟದ ನಿರ್ವಾಹಕ ನಿರ್ದೇಶಕ ತಿಪ್ಪಾರೆಡ್ಡಿ ಮಾತನಾಡಿ, ಕಳ್ಳತನ ಪ್ರಕರಣ ಸಂಬಂಧ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಪೊಲೀಸರಿಗೆ ದೂರು ನೀಡಲಾಗಿದೆ. ಚಾಲಕನಿಗೆ ಶೋಧ ನಡೆಸುತ್ತಿದ್ದಾರೆ. ಸಾರಿಗೆ ಗುತ್ತಿಗೆಯ ರೂಟ್ ರದ್ದುಪಡಿಸಿ, ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ಮುಂದುವರಿಯದಂತೆ ಎಚ್ಚರ ವಹಿಸಲಾಗುವುದು ಎಂದರು.

    ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೌಡ, ವಿವಿಧ ಸಂಘಗಳ ಕಾರ್ಯದರ್ಶಿಗಳಾದ ಬೆಟ್ಟಬೆಣಜೇನಹಳ್ಳಿ ಅಪ್ಪಯ್ಯಣ್ಣ, ಶ್ಯಾನಬೋಗನಹಳ್ಳಿ ಗೋಪಾಲ್, ಚೌಡದೇನಹಳ್ಳಿ ವೆಂಕಟರಾಜು, ವಕ್ಕಲೇರಿ ನಾಗರಾಜ್, ಮಾರ್ಜೇನಹಳ್ಳಿ ರಮೇಶ್, ಮಾಲೂರು ಮುನಿರಾಜು, ನಾರಾಯಣಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts