More

    ತರಕಾರಿ ಮಾರುಕಟ್ಟೆಗೆ ಗ್ರಾಹಕರ ಬರ

    ರಾಣೆಬೆನ್ನೂರ: ಕರೊನಾ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಯ ತರಕಾರಿ ಮಾರುಕಟ್ಟೆಗೆ ಗ್ರಾಹಕರ ಬರ ಎದುರಾಗಿದ್ದು, ವ್ಯಾಪಾರಸ್ಥರನ್ನು ಕಂಗಾಲಾಗಿಸಿದೆ.

    ವಾಣಿಜ್ಯ ನಗರಿಗೆ ನೆಹರು ಮಾರುಕಟ್ಟೆಯೇ ಮುಖ್ಯ ವ್ಯಾಪಾರ ಕೇಂದ್ರ. ದಿನಸಿ, ತರಕಾರಿ ಸೇರಿ ಪ್ರತಿ ವಸ್ತುಗಳನ್ನು ಖರೀದಿಸಲು ಜನರು ಇಲ್ಲಿಗೆ ಬರುತ್ತಾರೆ. ಈ ಹಿಂದೆ ನಿತ್ಯವೂ ಜನಜಂಗುಳಿಯಿಂದ ತುಂಬಿರುತ್ತಿದ್ದ ಮಾರುಕಟ್ಟೆ ಈಗ ಕರೊನಾ ಹಿನ್ನೆಲೆಯಲ್ಲಿ ಗ್ರಾಹಕರಿಲ್ಲದೆ ಭಣಗುಡುತ್ತಿದೆ.

    ಜನರಲ್ಲಿ ಭಯ: ನಗರದಲ್ಲಿ ಈಗಾಗಲೇ ಎಂಟು ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಹಲವರನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ, ಸ್ಥಳೀಯ ಕರೊನಾ ಪಾಸಿಟಿವ್ ಪ್ರಕರಣಗಳಿಗಿಂತಲೂ ಜಿಲ್ಲೆಯ ಸವಣೂರ, ಶಿಗ್ಗಾಂವಿ, ಹಾನಗಲ್ಲ ಹಾಗೂ ಹಿರೇಕೆರೂರಿನಲ್ಲೂ ಕೋವಿಡ್ ಪ್ರಕರಣಗಳು ಹೆಚ್ಚಿರುವುದು ಇಲ್ಲಿಯ ವ್ಯಾಪಾರ-ವಹಿವಾಟಿಗೆ ಪೆಟ್ಟು ನೀಡಿದೆ.

    ಇಲ್ಲಿಯ ನೆಹರು ಮಾರುಕಟ್ಟೆಗೆ ರಾಣೆಬೆನ್ನೂರ ತಾಲೂಕು ಮಾತ್ರವಲ್ಲದೆ, ಗುತ್ತಲ, ಸವಣೂರ, ಶಿಗ್ಗಾಂವಿ ಸೇರಿ ಜಿಲ್ಲೆಯ ಎಲ್ಲ ತಾಲೂಕುಗಳಿಂದಲೂ ತರಕಾರಿ ಬರುತ್ತದೆ. ಹೀಗಾಗಿ, ಬೇರೆ ಬೇರೆ ತಾಲೂಕಿನ ತರಕಾರಿ ಬೆಳೆಗಾರರು, ಖರೀದಿದಾರರು ನಗರದ ಮಾರುಕಟ್ಟೆಗೆ ಹೆಚ್ಚಾಗಿ ಬಂದು ಹೋಗುತ್ತಾರೆ. ಕರೊನಾ ಯಾವ ಸಮಯದಲ್ಲಿ ಯಾರಿಗೆ ಹೇಗೆ ಬರುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಹೀಗಾಗಿ, ಜನರು ತರಕಾರಿ ಖರೀದಿಗಾಗಿ ಮಾರುಕಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಮದುವೆ, ಸಭೆ, ಸಮಾರಂಭ ಹಾಗೂ ಧಾರ್ವಿುಕ ಕಾರ್ಯಕ್ರಮಗಳು ದೊಡ್ಡ ಪ್ರಮಾಣದಲ್ಲಿ ನಡೆಯದ ಕಾರಣ ಅನಿವಾರ್ಯ ಎಂಬಂತೆ ತರಕಾರಿ ಮಾರಾಟ ಕುಂಠಿತವಾಗಿದೆ ಎನ್ನುತ್ತಾರೆ ತರಕಾರಿ ಮಾರಾಟಗಾರರು.

    ಬೆಲೆ ಹೆಚ್ಚಳ: ಮಾರುಕಟ್ಟೆಯಲ್ಲಿ ಗ್ರಾಹಕರ ಕೊರತೆಯಿದ್ದರೂ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಟೊಮ್ಯಾಟೊ ಕೆಜಿಗೆ 30 ರೂ, ಉಳ್ಳಾಗಡ್ಡಿ 25 ರೂ., ಬೆಂಡೆಕಾಯಿ 40 ರೂ., ಬದನೆಕಾಯಿ 60 ರೂ., ಬೀನ್ಸ್ 80 ರೂ., ಆಲುಗಡ್ಡೆ 50 ರೂ. ಹಾಗೂ ಇತರ ತರಕಾರಿ ಕನಿಷ್ಠವೆಂದರೂ 40 ರೂ.ಗೆ ಪ್ರತಿ ಕೆಜಿಗೆ ಮಾರಾಟ ಮಾಡಲಾಗುತ್ತಿದೆ.

    ಸದ್ಯ ಮಾರುಕಟ್ಟೆಗೆ ಬೇರೆ ಬೇರೆ ತಾಲೂಕುಗಳಿಂದ ತರಕಾರಿ ಬರುವ ಪ್ರಮಾಣ ಕಡಿಮೆ ಇದೆ. ಹೀಗಾಗಿ, ಬೆಲೆಯಲ್ಲಿ ಹೆಚ್ಚಳವಾಗಿದೆ. ಒಂದೆಡೆ ಗ್ರಾಹಕರ ಕೊರತೆಯಾದರೆ, ಮತ್ತೊಂದೆಡೆ ಬೆಲೆ ಏರಿಕೆಯಿಂದ ವ್ಯಾಪಾರ ಮಾಡುವುದೇ ದುಸ್ತರವಾಗಿದೆ ಎನ್ನುವುದು ತರಕಾರಿ ಮಾರಾಟಗಾರರ ಅಳಲು.

    ಕರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಜನತೆ ಮಾರುಕಟ್ಟೆಗೆ ಬರಲು ಹೆದರುತ್ತಿದ್ದಾರೆ. ಹೀಗಾಗಿ ತರಕಾರಿ ವ್ಯಾಪಾರ ಕುಂಠಿತವಾಗಿದೆ. ಮಾರುಕಟ್ಟೆಗೆ ಬೇರೆ ತಾಲೂಕುಗಳಿಂದ ತರಕಾರಿ ಬರುತ್ತಿಲ್ಲವಾದ್ದರಿಂದ ಬೆಲೆ ಹೆಚ್ಚಳವಾಗಿದೆ. ಆದ್ದರಿಂದ ವ್ಯಾಪಾರ ಮಾಡುವುದೇ ಕಷ್ಟಕರವಾಗಿದೆ.
    | ಮಲ್ಲೇಶಪ್ಪ ಎನ್, ತರಕಾರಿ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts