More

    ಠಿಕಾಣಿ ಹೂಡಿವೆ ಕುರಿಗಳ ಹಿಂಡು

    ಶಶಿಧರ ಕುಲಕರ್ಣಿ ಮುಂಡಗೋಡ

    ಮುಂಡಗೋಡ ತಾಲೂಕಿನಲ್ಲಿ ಪ್ರತಿ ವರ್ಷ ಭತ್ತದ ಮತ್ತು ಗೋವಿನ ಜೋಳದ ಕಟಾವು ಆರಂಭವಾದೊಡನೆಯೇ ಬೆಳಗಾವಿ, ನಿಪ್ಪಾಣಿ, ಚಿಕ್ಕೋಡಿ ಹಾಗೂ ಗದಗ ಭಾಗಗಳಿಂದ ಕುರಿಗಳ ಹಿಂಡು ಬರುವುದು ವಿಶೇಷ. ಆದರೆ, ತಾಲೂಕಿನಲ್ಲಿ ಇನ್ನೂ ಬೆಳೆ ಕಟಾವು ಪೂರ್ತಿಯಾಗಿ ಮುಗಿದಿಲ್ಲ. ಈಗಾಗಲೇ ಕುರಿಗಳ ಹಿಂಡು ತಾಲೂಕಿಗೆ ಬಂದು ಠಿಕಾಣಿ ಹೂಡಿವೆ.

    ಬಯಲು ಸೀಮೆಯ ಭಾಗಗಳಿಂದ ಕುರುಬರು ಆಹಾರದ ಅಭಾವದಿಂದ ತಮ್ಮ ಕುರಿ ಹಿಂಡುಗಳನ್ನು ಇಲ್ಲಿಗೆ ಮೇಯಿಸಲು ತರುತ್ತಾರೆ. ತಾಲೂಕಿನ ಸನವಳ್ಳಿ, ಬಾಚಣಕಿ, ಸಾಲಗಾಂವ, ಚವಡಳ್ಳಿ, ಚಿಗಳ್ಳಿ, ಕಾತೂರ, ಪಾಳಾ, ಓಣಿಕೇರಿ ಮುಂತಾದ ಗ್ರಾಮಗಳ ಹೊಲ-ಗದ್ದೆಗಳಲ್ಲಿ ಇವರು ವಾಸ್ತವ್ಯ ಹೂಡುತ್ತಾರೆ. ಆದರೆ, ಈಗ ಇನ್ನೂ ಪೈರು ಕಟಾವು ಆಗಿಲ್ಲ. ಹೊಲ-ಗದ್ದೆಗಳಿಗೆ ಕುರಿಗಳ ಹಿಂಡು ಹೋಗುವಂತಿಲ್ಲ. ಗೋವಿನ ಜೋಳದ ಬೆಳೆ ಕಟಾವು ಮುಗಿದಿದ್ದು, ಅಲ್ಲಿ ಮೇಯ್ದ ಕುರಿಗಳ ಹಿಂಡು ಅರಣ್ಯ ಪ್ರದೇಶದಲ್ಲಿ ಇಲ್ಲವೇ ರಸ್ತೆ ಪಕ್ಕದ ಬಯಲು ಪ್ರದೇಶಗಳಲ್ಲಿ ಆಶ್ರಯ ಪಡೆಯುತ್ತಿವೆ. ಬಯಲು ಪ್ರದೇಶ, ಡ್ಯಾಂಗಳ ಕೆಳಭಾಗದ ಹಸಿರು ಪ್ರದೇಶದಲ್ಲಿ ಮೇಯುತ್ತಿವೆ. 10-12 ಮನೆತನದವರಿಗೆ ಸೇರಿದ ಒಂದೊಂದು ಕುರಿಗಳ ಹಿಂಡಿನಲ್ಲಿ ಸುಮಾರು 300-400 ಕುರಿಗಳು ಇರುವುದು ಸಾಮಾನ್ಯ.

    ಭೂಮಿಯ ಫಲವತ್ತತೆ: ಪ್ರತಿ ವರ್ಷ ಬೆಳೆಯ ಕಟಾವಿನ ನಂತರ ತಾಲೂಕಿನ ರೈತರು ತಮ್ಮ ಗದ್ದೆಗಳಲ್ಲಿ ಕುರಿಗಳನ್ನು ಮೇಯಿಸಲು ಕುರಿಗಾಹಿಗಳಿಗೆ ಅನುವು ಮಾಡಿಕೊಡುತ್ತಾರೆ. ಕುರಿಗಳು ಮೇಯುತ್ತಾ ಹಾಕಿದ ಹಿಕ್ಕೆಗಳಿಂದ ಮತ್ತು ಮೂತ್ರದಿಂದ ಗದ್ದೆಗಳ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಮತ್ತು ಭೂಮಿ ಸ್ವಚ್ಛವಾಗುತ್ತದೆ ಎಂಬ ಉದ್ದೇಶದಿಂದ ಕುರಿಗಳನ್ನು ಮೇಯಿಸಲು ಬಿಟ್ಟು ಕುರಿಗಾಹಿಗಳಿಗೆ ಖುಷಿಯಿಂದ ದುಡ್ಡು, ಕಾಳು-ಕಡಿ ಉಡುಗೊರೆಯಾಗಿ ನೀಡುತ್ತಾರೆ.

    ಕುರಿಗಳನ್ನು ಮೇಯಿಸುವುದೇ ನಮ್ಮ ಕಾಯಕ. ಸರ್ಕಾರದಿಂದ ಯಾವ ಸವಲತ್ತೂ ಇಲ್ಲ. ದುಡ್ಡು ಕೊಟ್ಟು ಕುರಿಗಳಿಗೆ ಔಷಧ ಖರೀದಿಸಬೇಕು. ಕೆಲವು ಹೊಲದ ಮಾಲೀಕರು ಖುಷಿಯಿಂದ ದವಸ-ಧಾನ್ಯ, ಕೆಲವರು ದುಡ್ಡು ಕೊಡುತ್ತಾರೆ. ಇನ್ನು ಕೆಲವರು ಏನೂ ಕೊಡುವುದಿಲ್ಲ.
    | ಮಾಳಪ್ಪ ಹೆಗ್ಗಣ್ಣವರ ಚಿಕ್ಕೋಡಿ ಕುರಿಗಾಹಿ

    ತಾಲೂಕಿನಲ್ಲಿ ಇನ್ನೂ ಬೆಳೆ ಕಟಾವು ಪೂರ್ತಿಯಾಗಿ ಮುಗಿದಿಲ್ಲ. ಗೋವಿನ ಜೋಳದ ಬೆಳೆ ಕಟಾವು ಅಲ್ಲಲ್ಲಿ ಆಗಿದೆ. ಈ ಬಾರಿ ಕುರಿಗಳ ಹಿಂಡು ವಾಡಿಕೆಗಿಂತ ಮೊದಲೇ ಬಂದು ಗದ್ದೆಗಳ ಬದಲು ಬಯಲು ಪ್ರದೇಶಗಳಲ್ಲಿ ಠಿಕಾಣಿ ಹೂಡಿವೆ.
    | ರಾಜು ಗುಬ್ಬಕ್ಕನವರ ಸನವಳ್ಳಿ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts