More

    ಜೆಡಿಎಸ್-ಕಾಂಗ್ರೆಸ್ ನಡುವೆ ನೇರ ಹಣಾಹಣಿ

    ನಾಲ್ಕೂ ಕ್ಷೇತ್ರದಲ್ಲೂ ಈ ಬಾರಿ ಶಾಸಕ ಸ್ಥಾನಕ್ಕೆ ಕಣ್ಣಿಟ್ಟಿರುವ ಹಾಲಿ ಶಾಸಕರು

    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

    ರಾಜ್ಯದಲ್ಲಿ ಹೈವೋಲ್ಟೇಜ್ ಚುನಾವಣಾ ಕಣವಾಗಿ ಗುರುತಿಸಿಕೊಂಡಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರ ಸೇರಿ ದೊಡ್ಡಬಳ್ಳಾಪುರ, ದೇವನಹಳ್ಳಿ ಹಾಗೂ ನೆಲಮಂಗಲ ಕ್ಷೇತ್ರ ವ್ಯಾಪ್ತಿಯ ಗ್ರಾಮಾಂತರ ಜಿಲ್ಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ.
    ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ನೆಲಮಂಗಲ ಹಾಗೂ ದೇವನಹಳ್ಳಿ ಜೆಡಿಎಸ್ ತೆಕ್ಕೆಯಲ್ಲಿದ್ದರೆ ದೊಡ್ಡಬಳ್ಳಾಪುರ ಕಾಂಗ್ರೆಸ್ ಭದ್ರಕೋಟೆ ಎನಿಸಿದೆ. ಹೊಸಕೋಟೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿ ವರ್ಚಸ್ಸಿನ ಮೇಲೆ ಲಿತಾಂಶ ನಿರ್ಧಾರವಾಗುವುದರಿಂದ ಈ ಬಾರಿ ಎದುರಾಳಿಗಳಾಗಿರುವ ಸಚಿವ ಎಂಟಿಬಿ ನಾಗರಾಜ್ ಹಾಗೂ ಶಾಸಕ ಶರತ್‌ಬಚ್ಚೇಗೌಡ ನಡುವೆ ನೇರ ಜಿದ್ದಾಜಿದ್ದಿ ಏರ್ಪಟ್ಟಿದೆ.
    ಜಿಲ್ಲೆಯಲ್ಲಿ ಹೇಳಿಕೊಳ್ಳುವಂತ ನೆಲೆಯಿಲ್ಲದ ಬಿಜೆಪಿ ಈ ಬಾರಿ ಕನಿಷ್ಟ ಮೂರು ಕ್ಷೇತ್ರದಲ್ಲಿ ಕಮಲ ಅರಳಿಸಲು ಬೆವರು ಹರಿಸುತ್ತಿದೆ. ಈಗಾಗಲೇ ಅಮಿತ್ ಷಾ ಸೇರಿ ರಾಷ್ಟ್ರ ನಾಯಕರು ರಾಜ್ಯದ ಪ್ರಮುಖ ಮುಖಂಡರೊಂದಿಗೆ ರೋಡ್ ಶೋ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನ ನಡೆಸುತ್ತಿದೆ. ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಸಮಾವೇಶ ನಡೆಸುವ ಮೂಲಕ ದೊಡ್ಡಮಟ್ಟದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದ ಬಿಜೆಪಿ ಈ ಬಾರಿ ಕಮಾಲ್ ಮಾಡಲಿದೆ ಎಂಬ ನಿರೀಕ್ಷೆ ಹುಟ್ಟಿಸಿದೆ. ಹೊಸಕೋಟೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಬಿಜೆಪಿ ಕಲಿಯಾಗಿರುವುದರಿಂದ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ವರಿಷ್ಟರು ಭರವಸೆ ಇಟ್ಟುಕೊಂಡಿದ್ದಾರೆ. ಉಳಿದಂತೆ ದೊಡ್ಡಬಳ್ಳಾಪುರದಲ್ಲಿ ಯುವ ಮುಖಂಡ ಧೀರಜ್‌ಮುನಿರಾಜು, ನೆಲಮಂಗಲದಲ್ಲಿ ವಲಸಿಗರಾದ ಸಪ್ತಗಿರಿ ಮೆಗರಿಕ್ ನಾಯಕ್, ದೇವನಹಳ್ಳಿಯಲ್ಲಿ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಬಿಜೆಪಿ ಅಭ್ಯರ್ಥಿಗಳಾಗಿದ್ದು ಮತಬೇಟೆಗೆ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ಹೊಸಕೋಟೆ ಹೊರತುಪಡಿಸಿ ಇನ್ನು ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ತೀವ್ರ ಪೈಪೋಟಿ ನೀಡುವ ಲಕ್ಷಣಗಳು ಸದ್ಯಕ್ಕೆ ಕಂಡುಬರುತ್ತಿಲ್ಲ. ಆದರೆ ಕ್ಷೇತ್ರಗಳಲ್ಲಿ ಸ್ಥಳೀಯ ಶಾಸಕರ ಆಡಳಿತ ವಿರೋಧಿ ಅಲೆ ಕಾಣಿಸಿಕೊಂಡಿದೆ. ಜನ ಬದಲಾವಣೆ ಬಯಸುತ್ತಿದ್ದು ಈ ಬಾರಿ ಬಿಜೆಪಿಗೆ ಅವಕಾಶ ಮಾಡಿಕೊಡಲಿದ್ದಾರೆ ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ.
    ನಾಲ್ವರು ಶಾಸಕರು ಕಣದಲ್ಲಿ: ನಾಲ್ಕೂ ಕ್ಷೇತ್ರದಲ್ಲೂ ಈ ಬಾರಿ ಶಾಸಕ ಸ್ಥಾನಕ್ಕೆ ಕಣ್ಣಿಟ್ಟಿರುವ ಹಾಲಿ ಶಾಸಕರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿಸಿದ್ದಾರೆ. ನೆಲಮಂಗಲದಲ್ಲಿ ಎರಡು ಬಾರಿ ಜೆಡಿಎಸ್‌ನಿಂದ ಗೆದ್ದಿರುವ ಡಾ.ಕೆ.ಶ್ರೀನಿವಾಸಮೂರ್ತಿ ಮೂರನೇ ಬಾರಿಯ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ದೊಡ್ಡಬಳ್ಳಾಪುರದಲ್ಲೂ ಎರಡು ಬಾರಿ ಗೆಲವು ಕಂಡಿರುವ ಕಾಂಗ್ರೆಸ್‌ನ ವೆಂಕಟರಮಣಯ್ಯ ಹ್ಯಾಟ್ರಿಕ್ ಕನಸಿನೊಂದಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ದೇವನಹಳ್ಳಿಯಲ್ಲಿ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಎರಡನೇ ಬಾರಿಯೂ ಗೆಲುವಿನ ಕನಸಿನೊಂದಿಗೆ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಏತನ್ಮಧ್ಯೆ ಕಾಂಗ್ರೆಸ್‌ನಿಂದ ಸಚಿವರಾಗಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಾಜೀನಾಮೆ ನೀಡಿ ಮರುಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಎಂಟಿಬಿ ನಾಗರಾಜ್‌ಗೆ ಇದು ತೀರ ಪ್ರತಿಷ್ಟೆಯ ಕಣವಾಗಿದೆ. ಇದು ನನ್ನ ಕಡೇ ಚುನಾವಣೆಯಂದೇ ಪ್ರಚಾರದಲ್ಲಿ ತೊಡಗಿರುವ ಎಂಟಿಬಿ ಕಾಲಿಗೆ ಚಕ್ರಕಟ್ಟಿಕೊಂಡಂತೆ ಕ್ಷೇತದಲ್ಲಿ ಮತಪ್ರಚಾರದಲ್ಲಿ ತೊಡಗಿದ್ದಾರೆ.
    ಕೆ.ಎಚ್.ಮುನಿಯಪ್ಪ ಎಂಟ್ರಿ: ಜಿಲ್ಲೆಯ ಚುನಾವಣಾ ಕಣದಲ್ಲಿ ಸಚಿವ ಎಂಟಿಬಿ ನಾಗರಾಜ್ ಹೊರತುಪಡಿಸಿ ಉಳಿದಂತೆ ದೇವನಹಳ್ಳಿಯಲ್ಲಿ ಕಾಂಗ್ರೆಸ್ ಸ್ಪರ್ಧಿಯಾಗಿರುವ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಹೈವೋಲ್ಟೆಜ್ ಸೃಷ್ಟಿಸಿದ್ದಾರೆ.
    ಮಂತ್ರಿಗಿರಿ ಮೇಲೆ ಕಣ್ಣು: ಈ ಬಾರಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ ನಾವು ಮಂತ್ರಿಯಾಗುತ್ತೇವೆ ಎಂದೇ ಬಿಂಬಿಸಿಕೊಳ್ಳುತ್ತಿರುವ ನೆಲಮಂಗಲ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಹಾಗೂ ದೇವಹಳ್ಳಿಯ ನಿಸರ್ಗ ನಾರಾಯಣಸ್ವಾಮಿ ನಿಮ್ಮ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಬೇಡವೇ ಎಂದೇ ಮತದಾರರನ್ನು ಪ್ರಶ್ನಿಸುತ್ತಾ ಮತಬುಟ್ಟಿಗೆ ಕೈಹಾಕುತ್ತಿದ್ದಾರೆ. ಇನ್ನೂ ದೇವನಹಳ್ಳಿಯ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಕಾಂಗ್ರೆಸ್ ಗೆದ್ದರೆ ಮಂತ್ರಿ ಸ್ಥಾನ ಖಚಿತ ಒಮ್ಮೆಯಾದರೂ ದೇವನಹಳ್ಳಿ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಸಿಗುವಂತೆ ಮಾಡಬೇಕು ಎಂದು ಮತಭಿಕ್ಷೆಯಲ್ಲಿ ತೊಡಗಿದ್ದಾರೆ. ಇನ್ನು ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ದೊಡ್ಡಬಳ್ಳಾಪುರದ ಶಾಸಕ ವೆಂಕಟರಮಣಯ್ಯ ಈ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಮೂರನೇ ಬಾರಿ ಗೆದ್ದ ನನ್ನನು ಪಕ್ಷ ಕೈಬಿಡುವುದಿಲ್ಲ ಸಚಿವ ಸಂಪುಟ ಸೇರಿಕೊಳ್ಳುತ್ತೇನೆ ಕ್ಷೇತ್ರವನ್ನು ಉದ್ದಾರ ಮಾಡಿಬಿಡುತ್ತೇನೆ ಎಂದು ಮತದಾರರ ಮೂಗಿಗೆ ತುಪ್ಪ ಸವರುತ್ತಿದ್ದಾರೆ.

    ನೆಲಮಂಗಲ ಜೆಡಿಎಸ್‌ಗೆ ಸುಲಭ ದಾರಿ: ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿನ ಒಳಜಗಳ, ಬಣ ರಾಜಕೀಯ ಹಾಗೂ ಬಂಡಾಯದ ಬಿಸಿ ಹ್ಯಾಟ್ರಿಗ್ ಕನಸಿನಲ್ಲಿರುವ ಜೆಡಿಎಸ್‌ಗೆ ಸುಲಭ ದಾರಿ ಮಾಡಲಿದೆ ಎಂಬ ಲೆಕ್ಕಾಚಾರ ಕೇಳಿಬರುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿದ್ದ ಹಲವು ಸ್ಥಳೀಯ ಆಕಾಂಕ್ಷಿಗಳನ್ನು ಕೈಬಿಟ್ಟು ಎರಡೂ ಪಕ್ಷದಲ್ಲಿ ಹೊಸಬರಿಗೆ ಮಣೆ ಹಾಕಿರುವುದು ಕ್ಷೇತ್ರದಲ್ಲಿ ಇವರೆಡು ಪಕ್ಷದ ಸಾಂಪ್ರದಾಯಿಕ ಮತಗಳು ಛಿದ್ರವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಕ್ಕಲಿಗ ಹಾಗೂ ಹಿಂದುಳಿದ ಮತಗಳು ನಿರ್ಣಾಯಕ ಎನಿಸಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬಂಡಾಯವಾಗಿ ಕಣಕ್ಕಿಳಿದಿರುವ ಉಮಾದೇವಿ ಕೈ ಪಕ್ಷಕ್ಕೆ ಮಗ್ಗಲ ಮುಳ್ಳಾಗಿದ್ದಾರೆ. ಇನ್ನು ಬಿಜೆಪಿಯಿಂದ ಟಿಕೆಟ್ ವಂಚಿತ ಪ್ರಮುಖ ಆಕಾಂಕ್ಷಿಗಳು ಮೇಲ್ನೋಟಕ್ಕೆ ಬಿಜೆಪಿ ಅಭ್ಯರ್ಥಿ ಪರವಿದ್ದಂತೆ ಕಂಡರೂ ಒಳಗೊಳಗೆ ಅಸಮಾಧಾನ ಹೊಗೆಯಾಡುತ್ತಿದ್ದು ಪಕ್ಷ ಸಂಘಟನೆಗೆ ಮುಳುವಾಗಿರುವುದು ಗುಟ್ಟಾಗಿ ಉಳಿದಿಲ್ಲ.

    ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ಎರಡು ಬಾರಿ ಶಾಸಕರಾಗಿ ಮರುಆಯ್ಕೆ ಬಯಸಿರುವ ಕಾಂಗ್ರೆಸ್‌ನ ವೆಂಕಟರಮಣ್ಯ ಅವರಿಗೆ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಕಾಣಿಸಿಕೊಂಡಿದೆ. ಜತೆಗೆ ಟಿಕೆಟ್ ವಂಚಿತ ಆಕಾಂಕ್ಷಿಗಳು ಈಗಾಗಲೇ ಸಿಡಿದು ಅನ್ಯ ಪಕ್ಷದ ಹೊಸ್ತಿಲು ತುಳಿದಿರುವುದು, ಪಕ್ಷದಿಂದ ಉಚ್ಚಾಟನೆಗೊಂಡ ಪ್ರಮುಖ ನಾಯಕರು ಶಾಸಕರನ್ನು ಸೋಲಿಸಲೇಬೇಕು ಎಂದು ಪಣತೊಟ್ಟಿರುವುದು ಕಾಂಗ್ರೆಸ್ ಗೆಲುವು ದುರ್ಗಮ ಎಂಬ ವಾತಾವರಣ ಕಂಡುಬರುತ್ತಿದೆ. ಈ ಬಾರಿ ಜೆಡಿಎಸ್‌ನ ಮುನೇಗೌಡ ಹಾಗೂ ಬಿಜೆಪಿಯ ಧೀರಜ್‌ಮುನಿರಾಜು ನಡುವೆ ನೇರ ಹಣಾಹಣಿ ಕಂಡುಬರುತ್ತಿದೆ. ಕಳೆದೊಂದು ವರ್ಷದಿಂದಲೇ ಬಿಜೆಪಿ ಅಭ್ಯರ್ಥಿಯೆಂದು ಬಿಂಬಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಧೀರಜ್‌ಮುನಿರಾಜು ಪ್ರಮುಖವಾಗಿ ಯುವಕರು ಹಾಗೂ ಮಹಿಳಾ ಮತದಾರರ ಮೇಲೆ ಗಮನ ಹರಿಸಿದ್ದಾರೆ. ಶಾಸಕರ 10 ವರ್ಷದ ಆಡಳಿತದ ಲೋಪದೋಷಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿರುವ ಬಿಜೆಪಿಗೆ ಸ್ಥಳೀಯವಾಗಿ ಒಲವು ವ್ಯಕ್ತವಾಗುತ್ತಿದೆ. ಈ ಬಾರಿ ದೊಡ್ಡಬಳ್ಳಾಪುರದಲ್ಲಿ ಅಚ್ಚರಿ ಲಿತಾಂಶ ಹೊರಬೀಳಲಿದೆ ಎಂಬ ಮಾತು ಹರಿದಾಡುತ್ತಿದೆ.

    ದೇವನಹಳ್ಳಿಯಲ್ಲಿ ಕೂತೂಹಲ: ಜೆಡಿಎಸ್ ಭದ್ರಕೋಟೆ ಎನಿಸಿರುವ ದೇವನಹಳ್ಳಿಯಲ್ಲಿ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿಗೆ ನೇರ ಎದುರಾಳಿಯಾಗಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಕಣಕ್ಕಿಳಿದಿರುವುದು ಕ್ಷೇತ್ರದಲ್ಲಿ ಹೈವೋಲ್ಟೇಜ್ ಸೃಷ್ಟಿಸಿದೆ. ಕಳೆದ ಚುನಾವಣೆಯಲ್ಲಿ ನಿರಾಯಾಸವಾಗಿ ಗೆಲವು ಕಂಡಿದ್ದ ಜೆಡಿಎಸ್ ಅಭ್ಯರ್ಥಿಗೆ ಈ ಬಾರಿ ಗೆಲುವು ಅಷ್ಟು ಸುಲಭವಲ್ಲ ಎಂಬ ವಾತಾವರಣ ಕಂಡುಬರುತ್ತಿದೆ. ಬಿಜೆಪಿಯ ಪಿಳ್ಳಮುನಿಶಾಮಪ್ಪ ಈ ಬಾರಿ ಹೆಚ್ಚು ಮತ ಪಡೆಯಬಹುದೆಂಬ ಲೆಕ್ಕಾಚಾರ ಕೇಳಿಬರುತ್ತಿದ್ದು ಇವರು ಪಡೆಯುವ ಮತದ ಮೇಲೆ ಕಾಂಗ್ರೆಸ್ ಜೆಡಿಎಸ್ ಭವಿಷ್ಯ ನಿರ್ಧಾರವಾಗಲಿದೆ ಎಂಬ ಲೆಕ್ಕಾಚಾರ ಕೇಳಿಬರುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ಇರುವ ಕ್ಷೇತ್ರ ಕೂತೂಹಲ ಕಾಯ್ದುಕೊಂಡಿದೆ.

    ಮಗ್ಗಲು ಬದಲಿಸುತ್ತಿರುವ ಹೊಸಕೋಟೆ: ಜಿಲ್ಲೆಯ ಮೂರು ಕ್ಷೇತ್ರದ ಮತದಾರರ ನಾಡಿ ಮಿಡಿತವನ್ನು ಊಹಿಸಬಹುದಾದರೂ ಹೊಸಕೋಟೆ ಮತದಾರರ ಲೆಕ್ಕಚಾರವನ್ನು ಸುಲಭವಾಗಿ ಎಣಿಕೆ ಮಾಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇದೆ. ಪ್ರಮುಖ ರಾಜಕೀಯ ಎದುರಾಳಿಗಳಾಗಿರುವ ಸಚಿವ ಎಂಟಿಬಿ ನಾಗರಾಜ್ ಹಾಗೂ ಶಾಸಕ ಶರತ್‌ಬಚ್ಚೇಗೌಡ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಚುನಾವಣಾ ದಿನ ಹತ್ತಿರವಾಗುತ್ತಿದ್ದಂತೆ ಒಂದೊಂದು ದಿನ ಒಂದೊಂದು ಮಗ್ಗಲು ಬದಲಿಸುವಂತೆ ಕಂಡುಬರುತ್ತಿರುವ ಕ್ಷೇತ್ರದ ಚಿತ್ರಣ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಸಚಿವ ಎಂಟಿಬಿ ಪಾಲಿಗೆ ಇದು ಕೊನೆ ಚುನಾವಣೆ ಹಾಗೂ ಮಾಡು ಇಲ್ಲವೆ ಮಡಿ ಎಂಬಂಥ ಅಗ್ನಿಪರೀಕ್ಷೆಯಾಗಿದ್ದರೆ ಶರತ್‌ಬಚ್ಚೇಗೌಡ ಪಾಲಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಕಳೆದ ಬಾರಿ ಸೋತ ಅನುಕಂಪದ ಅಲೆ, ಚುನಾವಣೆಯಲ್ಲಿ ಸೋತರೂ ಎಂಎಲ್‌ಸಿಯಾಗಿ ಮಂತ್ರಿಯಾಗಿ ಕ್ಷೇತ್ರಕ್ಕೆ ಭರಪೂರ ಅನುದಾನ ತರುವಲ್ಲಿ ಶ್ರಮಿಸಿದ ಎಂಟಿಬಿ ನಾಗರಾಜ್ ಪರ ಪ್ರಸ್ತುತ ಅಲೆ ಕಂಡುಬರುತ್ತಿದ್ದರೂ ಶರತ್ ವರ್ಚಸ್ಸು ಹಾಗೂ ಕ್ಷೇತ್ರದಲ್ಲಿನ ಒಕ್ಕಲಿಗ ಹಾಗೂ ಹಿಂದುಳಿದ, ಅಲ್ಪಸಂಖ್ಯಾತ ಮತಗಳು ಯಾರಿಗೆ ಮಣೆ ಹಾಕಲಿದೆ ಎಂಬ ಕೂತುಹಲ ಕಾಯ್ದುಕೊಂಡಿದೆ.

    ಮತದಾರರ ಅಂಕಿ ಅಂಶ
    ಕ್ಷೇತ್ರ ಮತದಾರರ ಸಂಖ್ಯೆ
    ದೊಡ್ಡಬಳ್ಳಾಪುರ 208075
    ದೇವನಹಳ್ಳಿ 206490
    ನೆಲಮಂಗಲ 211609
    ಹೊಸಕೋಟೆ 225586


    2018ರ ವಿಧಾನಸಭೆ ಚುನಾವಣೆ ಫಲಿತಾಂಶ ವಿವರ
    ಕ್ಷೇತ್ರ ಗೆದ್ದವರು ಪಡೆದ ಮತ ಸೋತವರು ಪಡೆದ ಮತ

    ದೊಡ್ಡಬಳ್ಳಾಪುರ ವೆಂಕಟರಮಣಯ್ಯ 73225 ಬಿ.ಮುನೇಗೌಡ 63280

    ದೇವನಹಳ್ಳಿ ನಾರಾಯಣಸ್ವಾಮಿ 86966 ವೆಂಕಟಸ್ವಾಮಿ 69956

    ನೆಲಮಂಗಲ ಡಾ.ಕೆ.ಶ್ರೀನಿವಾಸಮೂರ್ತಿ 69277 ನಾರಾಯಣಸ್ವಾಮಿ 44956

    ಹೊಸಕೋಟೆ ಎಂಟಿಬಿ ನಾಗರಾಜ್ 98824 ಶರತ್‌ಬಚ್ಚೇಗೌಡ 98456

    2019 ರ ಉಪಚುನಾವಣೆ ಫಲಿತಾಂಶ

    ಹೊಸಕೋಟೆ ಶರತ್‌ಬಚ್ಚೇಗೌಡ 81667 ಎಂಟಿಬಿ ನಾಗರಾಜ್ 70183

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts