More

    ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ವೀಕ್ಷಿಸಿದ ಜನ

    ಚಿತ್ರದುರ್ಗ: ಭಾರತ-ಆಸ್ಟ್ರೇಲಿಯಾ ನಡುವಿನ ವಿಶ್ವ ಕಪ್ ಕ್ರಿಕೆಟ್ ಫೈನಲ್ ಪಂದ್ಯಾವಳಿ ವೀಕ್ಷಿಸುವವರ ಸಂಖ್ಯೆ ಹೆಚ್ಚಿದ್ದರಿಂದ ಭಾನುವಾರ ಕೋಟೆನಗರಿಯ ಪ್ರಮುಖ ರಸ್ತೆಗಳನ್ನು ಹೊರತುಪಡಿಸಿ, ಉಳಿದೆಡೆ ಜನಸಂಚಾರ ವಿರಳವಾಗಿತ್ತು.

    ಭಾರತ ಕ್ರಿಕೆಟ್ ತಂಡ ಗೆಲುವು ಸಾಧಿಸಲೆಂದು ಜಿಲ್ಲೆಯ ಹಲವು ದೇಗುಲಗಳಲ್ಲಿ ಅಭಿಮಾನಿಗಳು ಬೆಳಗ್ಗೆ ಪೂಜೆ ಸಲ್ಲಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.

    ಬಿ.ಡಿ.ರಸ್ತೆ, ಮಹಾತ್ಮಗಾಂಧಿ, ಎಸ್‌ಬಿಐ, ಡಾ.ಬಿ.ಆರ್.ಅಂಬೇಡ್ಕರ್, ಮದಕರಿನಾಯಕ ವೃತ್ತ, ಮೆದೇಹಳ್ಳಿ, ಹೊಳಲ್ಕೆರೆ ರಸ್ತೆ ಈ ಮಾರ್ಗಗಳಲ್ಲಿ ಜನಸಂಚಾರ ಎಂದಿನಂತೆಯೇ ಇತ್ತು. ಒನಕೆ ಓಬವ್ವ ವೃತ್ತದ ಬಳಿ ವಿರಳವಾಗಿತ್ತು.

    ರಾಜ್ಯ ಸರ್ಕಾರದ ಆದೇಶದ ಮೇರೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ತಾತ್ಕಾಲಿಕವಾಗಿ ದೊಡ್ಡ ಎನ್‌ಇಡಿ ಪರದೆ ಅಳವಡಿಸಿ, ಅವಕಾಶ ಕಲ್ಪಿಸಲಾಗಿತ್ತು.

    ಆಸನಗಳ ವ್ಯವಸ್ಥೆಯೂ ಇದ್ದಿದ್ದರಿಂದಾಗಿ ಮಧ್ಯಾಹ್ನ 2.30ರ ನಂತರ ಒಬ್ಬೊಬ್ಬರಾಗಿ ಕ್ರೀಡಾಂಗಣ ಪ್ರವೇಶಿಸಲು ಮುಂದಾದರು. ಸಂಜೆ 4.30 ರ ವೇಳೆಗೆ ವೀಕ್ಷಕರ ಸಂಖ್ಯೆ ನೂರರ ಗಡಿ ದಾಟಿತು.

    ರೋಚಕ ಫೈನಲ್ ಪಂದ್ಯವಾದ ಕಾರಣ ಪೊಲೀಸರನ್ನು ಕೂಡ ಕರ್ತವ್ಯ ನಿಯೋಜಿಸಲಾಗಿತ್ತು. ಪುರುಷರು, ಮಹಿಳೆಯರು, ಮಕ್ಕಳು, ಹಿರಿಯರು ಕೂಡ ಪಂದ್ಯ ವೀಕ್ಷಿಸಿದರು.

    ಬಹುತೇಕರ ಮನೆಗಳಲ್ಲೇ ಟಿವಿಗಳು ಇರುವ ಕಾರಣ ಹೆಚ್ಚಿನ ಜನ ಕ್ರೀಡಾಂಗಣದತ್ತ ಸುಳಿಯಲಿಲ್ಲ. ಆದರೂ ಬರುವ ನಿರೀಕ್ಷೆ ಹಿನ್ನೆಲೆಯಲ್ಲಿ ಸಂಜೆ 5ಕ್ಕೆ ಮತ್ತೊಂದು ವಾಹನದಲ್ಲಿ ಆಸನಗಳನ್ನು ತರಿಸಲು ಇಲಾಖೆ ಮುಂದಾಯಿತು.

    ಬೆಳಗ್ಗೆ ಕ್ರೀಡಾಂಗಣದಲ್ಲಿ ವೀಕ್ಷಣೆಗೆ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ. ಹೀಗಾಗಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಕೆಲಕಾಲ ಪ್ರತಿಭಟಿಸಿ, ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದಾರೆ ಎಂದು ಇಲಾಖೆ ವಿರುದ್ಧ ಅಸಮಧಾನ ಹೊರಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts