More

    ಚುನಾವಣೇಲಿ ಪಕ್ಷನಿಷ್ಠೆ ಪ್ರದರ್ಶಿಸಿ – ಬಿ.ಎಲ್.ಸಂತೋಷ್ ಕಿವಿಮಾತು

    ದಾವಣಗೆರೆ: ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಯಾರಿಗೇ ಟಿಕೆಟ್ ನೀಡಲಿ, ಒಗ್ಗಟ್ಟಾಗಿ ಕೆಲಸ ಮಾಡಿ. ಯಾರದೋ ಮೇಲಿನ ಇಷ್ಟಕ್ಕಿಂತ ಪಕ್ಷ ನಿಷ್ಠೆ ಪ್ರದರ್ಶಿಸಿ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕಿವಿಮಾತು ಹೇಳಿದರು.
    ನಗರದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ಜಿಲ್ಲಾ ಬಿಜೆಪಿ ಶಕ್ತಿ ಕೇಂದ್ರಗಳ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದರು.
    ಚುನಾವಣೆ ಹಿನ್ನೆಲೆಯಲ್ಲಿ ಮುಖಂಡರು, ಕಾರ್ಯಕರ್ತರು ಪಕ್ಷಕ್ಕಾಗಿ ಕೆಲಸ ಮಾಡಬೇಕು. ಗೋಡೆ ಬರಹಗಳನ್ನು ಬರೆಸಲು ಖುದ್ದು ಕಾರ್ಯಕ್ಷೇತ್ರಕ್ಕೆ ಇಳಿಯಬೇಕು. ಕೈ-ಬಟ್ಟೆಗೆ ಬಣ್ಣವಾಗಲಿದೆ ಎಂಬ ಹಿಂಜರಿಕೆ ಬೇಡ. ಮುಖಂಡರು ಪೋಸ್ಟರ್‌ಗಳನ್ನು ಅಂಟಿಸಿದರೆ ತಪ್ಪೇನಲ್ಲ ಎಂದರು.
    ಪಕ್ಷ ಚುನಾವಣೆ ಸಂದರ್ಭದಲ್ಲೂ ಬೆಳೆಯಲಿದೆ. ಹೀಗಾಗಿ ನಿಮ್ಮ ವಿಧಾನಸಭೆ, ಮತಗಟ್ಟೆ ವ್ಯಾಪ್ತಿಯಲ್ಲಿ ಪರಿಚಿತ ವೈದ್ಯರು, ವಕೀಲರು, ವರ್ತಕರು ಹಾಗೂ ಇತರೆ ಜನರನ್ನು ಪಕ್ಷಕ್ಕೆ ಸೇರಿಸಿ. ಎರಡು ದಿನಕ್ಕೊಮ್ಮೆ ಸೇರ್ಪಡೆ ಕಾರ್ಯಕ್ರಮ ರೂಪಿಸಿ ಎಂದೂ ಹೇಳಿದರು.
    ಸಿದ್ದು ಸಿಎಂ ಆಗಬೇಕಾ?
    ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಒನಕೆ ಓಬವ್ವ, ಮದಕರಿನಾಯಕ, ಕೆಂಪೇಗೌಡ ನೆನಪಾಗಲಿಲ್ಲ, ಟಿಪ್ಪು ಜಪ ಮಾಡಿದರು. ಇಂಥವರು ಸಿಎಂ ಆಗಬೇಕಾ ಎಂದು ಸಂತೋಷ್ ಪ್ರಶ್ನಿಸಿದರು.
    ವಿದೇಶದಲ್ಲಿ ಭಾರತ ವಿರೋಧಿ ಹೇಳಿಕೆ ನೀಡುವ ರಾಹುಲ್‌ಗಾಂಧಿ ಒಬ್ಬ ಅಪ್ರಬುದ್ಧ ರಾಜಕಾರಣಿ. ಅಂಥವರ ಪಕ್ಷ ಅಧಿಕಾರಕ್ಕೆ ಬರಬೇಕಾ ಎಂದು ಪ್ರಶ್ನಿಸಿದರು. ರಾಜ್ಯದಲ್ಲೂ ಇಂತಹ ಮಾನಸಿಕತೆಯುಳ್ಳ ಕೆಲವು ರಾಜಕಾರಣಿಗಳಿದ್ದು, ಮಾ. 25ರ ನಂತರದಲ್ಲಿ ಅಂಥರನ್ನು ಮನೆಗೆ ಕಳುಹಿಸುವ ಕೆಲಸಕ್ಕೆ ಸಜ್ಜಾಗಿ ಎಂದು ಹೇಳಿದರು.
    ಲೋಕಾ ದಾಳಿ ಘಟನೆಯಿಂದಾದ ಬೆಳವಣಿಗೆಗಳ ಬಗ್ಗೆ ಬೇಸರವಿದೆ. ಈ ಪ್ರಕರಣದಲ್ಲಿ ಲೋಕಾಯುಕ್ತರು, ಪೊಲೀಸರು ತೀರ್ಮಾನ ಮಾಡಲಿದ್ದಾರೆಯೆ ಹೊರತು ನಾವಲ್ಲ. ಚನ್ನಗಿರಿ ಕ್ಷೇತ್ರದಲ್ಲಿ ಅಭ್ಯರ್ಥಿ ಕುರಿತು ಪಕ್ಷ ನಿರ್ಧಾರ ಕೈಗೊಳ್ಳಲಿದೆ. ಪಕ್ಷ ಸಂಘಟನೆ, ಗೆಲುವಷ್ಟೇ ಮುಖ್ಯವಾಗಬೇಕು ಎಂದರು.
    ಮಾ.25ರಂದು ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನದ ಸಮಾರೋಪ ನಡೆಯಲಿದೆ. ಅಲ್ಲಿ ಭಾಷಣವೂ ಚೆನ್ನಾಗಿರಬೇಕು. ಕಾರ್ಯಕರ್ತರ ಸಂಖ್ಯೆಯೂ ಹೆಚ್ಚಿರಬೇಕು. ಅವರಲ್ಲಿ ಉತ್ಸಾಹವೂ ತುಂಬಿರಬೇಕು. ಸುಮಾರು 10 ಲಕ್ಷ ಜನರನ್ನು ಸೇರಿಸುವ ಉದ್ದೇಶವಿದೆ. ಪ್ರತಿ ಮತಗಟ್ಟೆಯಿಂದ ಕನಿಷ್ಠ 100 ಜನರನ್ನು ಕರೆ ತರಬೇಕೆಂದರು. ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರ, ಎಂಎಲ್ಸಿ ನವೀನ್, ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಶಾಸಕ ಎಂ.ಬಸವರಾಜನಾಯ್ಕ, ಬಿ.ಪಿ.ಹರೀಶ್, ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಸುಧಾ ಜಯರುದ್ರೇಶ್, ಜಿಲ್ಲಾ ಪ್ರಭಾರಿ ಶಿವಲಿಂಗಪ್ಪ, ಬಿ.ಎಸ್.ಜಗದೀಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts