More

    ಗಾಂಜಾ ಕುಳಗಳಿಗೆ ಪೊಲೀಸ್ ಗಾಳ

    ಧಾರವಾಡ: ಬೆಂಗಳೂರಿನಲ್ಲಿ ಗಾಂಜಾ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಅಧಿಕಾರಿಗಳು ರಾಜ್ಯಾದ್ಯಂತ ದಾಳಿ ನಡೆಸಿ, ಗಾಂಜಾ ದಂಧೆ ಮಟ್ಟ ಹಾಕುವ ಕಾರ್ಯ ನಡೆಸಿದ್ದಾರೆ. ಹುಬ್ಬಳ್ಳಿ ಧಾರವಾಡದಲ್ಲಿ ಸಹ ಈ ಕಾರ್ಯ ನಡೆದಿದ್ದು, ಭಾನುವಾರ 6 ಜನರನ್ನು ಬಂಧಿಸಿರುವ ಪೊಲೀಸರು 3.1 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

    ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿಸಿಪಿ ಪಿ. ಕೃಷ್ಣಕಾಂತ, ನಗರದ ನುಚ್ಚಂಬ್ಲಿ ಬಾವಿ ಬಳಿ ಕಾರು- ಬೈಕ್​ನಲ್ಲಿ ಗಾಂಜಾ ಮಾರಾಟ ಮಾಡುತ್ತಾರೆ ಎಂಬ ದೂರು ಕೇಳಿ ಬಂದಿತ್ತು. ಖಚಿತ ಮಾಹಿತಿ ಮೇರೆಗೆ ಶಹರ ಠಾಣೆ ಪೊಲೀಸರು ದಾಳಿ ನಡೆಸಿದಾಗ 6 ಜನರು ಸಿಕ್ಕಿಬಿದ್ದಿದ್ದು, ಒಬ್ಬ ಪರಾರಿಯಾಗಿದ್ದಾನೆ. ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದರು.

    ನಗರದ ಮದಾರಮಡ್ಡಿ ಜೈ ಭೀಮ ನಗರದ ಪೃಥ್ವಿ ಗಿರೀಶ ಕೊಂಡಪಲ್ಲಿ (25), ಲೈನ್​ಬಜಾರ್ ಸೌದಾಗರ ಚಾಳದ ಸತ್ಕಾರ ಗೋವಿಂದ ಮಾಡಲಗಿ (28), ರಸೂಲಪುರ ಓಣಿಯ ಜಾವೀದ ಅಹ್ಮದ್ ಮಹ್ಮದ್​ಯುೂಸುಫ್ ಬಾದಾಮಿ (42), ನಿಜಾಮುದ್ದೀನ್ ಕಾಲನಿಯ ಮೆಹಬೂಬಸಾಬ ಅಲಿಯಾಸ್ ಶಬ್ಬೀರಖಾನ್ ಅಮೀರಖಾನ್ ಪಠಾಣ (31), ಲೈನ್​ಬಜಾರ ಮಸಾಲಗಾರ ಓಣಿಯ ಮಹ್ಮದ್ ಸಾದಿಕ್ ಬಸೀರ್ ಖತೀಬ (20) ಹಾಗೂ ಹತ್ತಿಕೊಳ್ಳದ ಅಬ್ದುಲ್​ಖಾದರಸಾಬ ಕರೀಂಸಾಬ ದಾವಣಗೆರೆ (60) ಬಂಧಿತರು. ನವಲೂರಿನ ರಾಜೇಸಾಬ ಫಕ್ರುಸಾಬ ಹಂಚಿನಾಳ ಪರಾರಿಯಾಗಿದ್ದಾನೆ ಎಂದರು.

    ದಾಳಿ ವೇಳೆ 62,000 ರೂ. ಮೌಲ್ಯದ 3.100 ಕೆಜಿ ಗಾಂಜಾ, ಕಾರು, ಬೈಕ್ ಹಾಗೂ 5 ಮೊಬೈಲ್ ಸೇರಿ ಒಟ್ಟು 8.75 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಗೆ ಗಾಂಜಾ ನೀಡುತ್ತಿದ್ದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದಲ್ಲದೆ ಇವರು ಮಾರಾಟ ಮಾಡುತ್ತಿದ್ದ ಸ್ಥಳ ಸೇರಿ ಇನ್ನೂ ಅನೇಕ ವಿಷಯಗಳ ಕುರಿತು ತನಿಖೆ ನಡೆಸಲಾಗುತ್ತಿದೆ. ಇವರ ಹಿಂದಿರುವ ಜಾಲದ ಬಗ್ಗೆಯೂ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.ದಾಳಿಯಲ್ಲಿ ಎಸಿಪಿ ಅನುಷಾ ಜಿ., ಶಹರ ಪೊಲೀಸ್ ಠಾಣೆ ಪಿಐ ಶ್ರೀಧರ ಸತಾರೆ, ಎಎಸ್​ಐಗಳಾದ ಎಂ.ವೈ. ಕುರ್ತಕೋಟಿ, ಎಸ್.ಎಚ್. ಸಾಳುಂಕೆ, ಸಿಬ್ಬಂದಿ ಎನ್.ಒ. ಜಾಧವ, ಯು.ಎನ್. ಸಣ್ಣಿಂಗನವರ, ಪ್ರತಾಪ ಮಾಳಗಿ, ಎಂ.ಎನ್. ಚವ್ಹಾಣ, ಲಕ್ಷ್ಮಣ ಲಮಾಣಿ ಇತರರು ಪಾಲ್ಗೊಂಡಿದ್ದರು. ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿರುವ ಕಾರ್ಯಕ್ಕೆ ಪೊಲೀಸ್ ಆಯುಕ್ತ ಆರ್. ದಿಲೀಪ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು. ಎಸಿಪಿ ಅನುಷಾ ಜಿ., ಶರಹ ಠಾಣೆ ಪಿಐ ಶ್ರೀಧರ ಸತಾರೆ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಡ್ರಗ್ಸ್ ಮಾಫಿಯಾ ಹತ್ತಿಕ್ಕುತ್ತೇವೆ
    ಹುಬ್ಬಳ್ಳಿ:
    ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣವಾಗಿ ಹತ್ತಿಕ್ಕಲು ರಾಜ್ಯ ಸರ್ಕಾರ ಎಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವವರು ಎಷ್ಟೇ ದೊಡ್ಡ ವ್ಯಕ್ತಿಗಳಾಗಿರಲಿ ಕಾನೂನು ಕ್ರಮ ತಪ್ಪಿದ್ದಲ್ಲ. ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆ ಕಾನೂನು ಕ್ರಮ ಜರುಗಿಸುವ ಕೆಲಸ ಮಾಡಿದೆ ಎಂದರು.

    ಕಿಮ್ಸ್​ನಲ್ಲಿ ಕರೊನೇತರ ರೋಗಿಗಳ ಚಿಕಿತ್ಸೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಪ್ರತ್ಯೇಕ ಕಟ್ಟಡವೇ ಇದೆ. ಉಳಿದಂತೆ ತುರ್ತು ಚಿಕಿತ್ಸೆ, ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ತಡೆಯಾಜ್ಞೆ ತೆರವುಗೊಂಡ ಬಳಿಕ ತಕ್ಷಣವೇ ಚುನಾವಣೆ ನಡೆಸಲು ಸರ್ಕಾರ ಪ್ರಯತ್ನ ಮಾಡಲಿದೆ ಎಂದು ಹೇಳಿದರು.

    ಪ್ರತ್ಯೇಕ ಪ್ರಕರಣದಲ್ಲಿ 6 ಜನ ಸೆರೆ
    ಹುಬ್ಬಳ್ಳಿ:
    ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ ಆರು ಜನ ಗಾಂಜಾ ಮಾರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ಗೋಕುಲ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಾರಿಹಾಳ ನಿವಾಸಿ ಇಮಾಮಹುಸೇನ ದಾವಲಸಾಬ ಬಿಜಾಪೂರ (55), ಗಾಂಧಿವಾಡದ ಯಶವಂತ ಸಂಗೀತರಾವ ಮುನಿಗೇಟ (22), ಫೆಸಿಪಿಕ್ ಪಾರ್ಕ್​ನ ಪ್ರಶಾಂತ ಲಾಜರಸ ಬಪ್ಪೊರೆ (20) ಹಾಗೂ ಚಾಲುಕ್ಯನಗರದ ನೆಲ್ಸನ್ ಯೋಹಾನ ಮೈಲಾ (24) ಎಂಬುವವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

    ಕುರಿ ಮೇಯಿಸುವ ಇಮಾಮಹುಸೇನ ಗೋಕುಲ ರಸ್ತೆ ತಾರಿಹಾಳ ಬೈಪಾಸ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಗೋಕುಲ ರೋಡ್ ಠಾಣೆ ಇನ್ಸ್​ಪೆಕ್ಟರ್ ನಾಗರಾಜ ಕಮ್ಮಾರ ಹಾಗೂ ತಂಡ ದಾಳಿ ನಡೆಸಿ 8360 ರೂ. ಮೌಲ್ಯದ 836 ಗ್ರಾಂ ಗಾಂಜಾ ಮತ್ತು 400 ರೂ. ನಗದು ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ನವಲಗುಂದ ತಾಲೂಕು ತಿರ್ಲಾಪುರ ಗ್ರಾಮದ ಮಾರುತಿ ಹರಿಣಶಿಕಾರಿ ತಲೆಮರೆಸಿಕೊಂಡಿದ್ದಾನೆ.

    ಪೇಂಟಿಂಗ್ ಕೆಲಸ ಮಾಡಿಕೊಂಡಿರುವ ಯಶವಂತ, ಐಟಿಐ ವಿದ್ಯಾರ್ಥಿ ಯಶವಂತ ಲಾಜರಸ ಹಾಗೂ ಕ್ಯಾಟರಿಂಗ್ ಕೆಲಸಗಾರ ನೆಲ್ಸನ್ ಮೈಲಾ ಮೂವರೂ ಸೇರಿಕೊಂಡು ಗದಗ ರಸ್ತೆಯ ಫ್ಲೈ ಓವರ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರು. ಆ ವೇಳೆ ಕೇಶ್ವಾಪುರ ಇನ್ಸ್​ಪೆಕ್ಟರ್ ಸುರೇಶ ಕುಂಬಾರ ನೇತೃತ್ವದ ತಂಡ ದಾಳಿ ನಡೆಸಿ, 6,000 ರೂ. ಮೌಲ್ಯದ 600 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನರೇಂದ್ರದಲ್ಲೂ ಒಬ್ಬನ ಬಂಧನ: ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಒಬ್ಬನನ್ನು ಗ್ರಾಮೀಣ ಠಾಣೆ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಗ್ರಾಮದ ಚನ್ನಮಲ್ಲಪ್ಪ ಬಾಳಪ್ಪ ಕೋಮಾರದೇಸಾಯಿ ಬಂಧಿತ ವ್ಯಕ್ತಿ. ಈತನಿಂದ ಅಂದಾಜು 8 ಸಾವಿರ ರೂ. ಮೌಲ್ಯದ 500 ಗ್ರಾಂ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಚನ್ನಮಲ್ಲಪ್ಪ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಸಂದರ್ಭದಲ್ಲಿ ನರೇಂದ್ರ ಕ್ರಾಸ್ ಬಳಿ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಲಘಟಗಿಯಲ್ಲಿ ಒಬ್ಬ ಆರೋಪಿ ಬಂಧನ: ಕಲಘಟಗಿ ಪಟ್ಟಣದ ಹನ್ನೆರಡುಮಠದ ಸಮೀಪ ಹುಬ್ಬಳ್ಳಿ-ಕಾರವಾರ ಹೆದ್ದಾರಿಗೆ ಹೊಂದಿಕೊಂಡಿರುವ ತಡಸ ಕ್ರಾಸ್ ಬಳಿ ಗಾಂಜಾ ಸಾಗಿಸುತ್ತಿದ್ದ ತಾಲೂಕಿನ ತಬಕದಹೊನ್ನಿಹಳ್ಳಿ ಗ್ರಾಮದ ಮುದಕಪ್ಪ ಡೊಳ್ಳಿನ (45) ಎಂಬಾತನನ್ನು ಕಲಘಟಗಿ ಸಿಪಿಐ ವಿಜಯ ಬಿರಾದಾರ ನೇತೃತ್ವದ ತಂಡ ಭಾನುವಾರ ಬಂಧಿಸಿದೆ. ಆರೋಪಿಯಿಂದ 7,500 ರೂ. ಮೌಲ್ಯದ ಗಾಂಜಾ, ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts