More

    ಕುಡಿಯುವ ನೀರಿಗೆ ಸಮಸ್ಯೆಯಾಗದಿರಲಿ

    ಲಕ್ಷ್ಮೇಶ್ವರ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಪರಶುರಾಮ ಇಮ್ಮಡಿ ಸೂಚಿಸಿದರು.

    ಪಟ್ಟಣದ ತಾಪಂನಲ್ಲಿ ಸೋಮವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ನಿಂಗಪ್ಪ ಜಾಲವಾಡಗಿ ಮಾತನಾಡಿ, ಬಾಲೆಹೊಸೂರಿನಲ್ಲಿ ಬೋರ್​ವೆಲ್​ಗಳು ಹಾಳಾಗಿ 5 ವರ್ಷಗಳಾದರೂ ದುರಸ್ತಿಪಡಿಸಿಲ್ಲ. ಕೆರೆಗಳಿಗೆ ನದಿ ನೀರು ಹರಿಸುವ ಯೋಜನೆ ಸ್ಥಗಿತಗೊಂಡಿದೆ ಎಂದು ಆರೋಪಿಸಿದರು. ಗಿರಿಜವ್ವ ಲಮಾಣಿ ಮಾತನಾಡಿ, ಆದ್ರಳ್ಳಿಯಲ್ಲಿ ಕುಡಿಯುವ ನೀರು ಪೂರೈಕೆ ಪೈಪ್​ಲೈನ್ ವ್ಯವಸ್ಥೆ ಸರಿಪಡಿಸಬೇಕು. ಅಧಿಕಾರಿಗಳು ಸಮಸ್ಯೆ ಬಗೆಹರಿಸದ ಕಾರಣ ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಮೂಲಕ ನೀರು ನೀಡಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಇಒ ಆರ್.ವೈ. ಗುರಿಕಾರ ಮಧ್ಯಪ್ರವೇಶಿಸಿ, ಜಲ ಜೀವನ ಮಿಷನ್ ಯೋಜನೆಯಡಿ ತಾಲೂಕಿನ ಎಲ್ಲ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. ಹಿಂಗಾರು ಹಂಗಾಮು ಮುಗಿಯುತ್ತ ಬಂದಿದೆ. ಕೃಷಿ ಚಟುವಟಿಕೆ ಯಿಂದ ರೈತರಿಗೆ ಬಿಡುವು ಸಿಗುತ್ತದೆ. ನರೇಗಾದಡಿ ಬದು ನಿರ್ವಣ, ಬಾಂದಾರ ಹೂಳೆತ್ತುವ ಕಾರ್ಯ ಕೈಗೊಳ್ಳುವುದರಿಂದ ಉದ್ಯೋಗ ಕಲ್ಪಿಸಿದಂತಾಗುತ್ತದೆ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕ್ರಿಯಾಯೋಜನೆ ಸಿದ್ಧಪಡಿಸಬೇಕು ಎಂದರು.

    ಹಿರಿಯ ಸಹಾಯಕ ಆರೋಗ್ಯಾಧಿಕಾರಿ ಬಿ.ಎಸ್. ಹಿರೇಮಠ ಮಾತನಾಡಿ, ತಾಲೂಕಿನ ಎಲ್ಲ ಪಿಎಚ್​ಸಿ ಗಳಲ್ಲಿ ಕರೊನಾ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಕೃಷಿ ಸಹಾಯಕ ನಿರ್ದೇಶಕ ಎಂ. ಮಹೇಶಬಾಬು, ರೈತರು ಜ. 26ರೊಳಗೆ ಕಡ್ಡಾಯವಾಗಿ ಹಿಂಗಾರು ಬೆಳೆ ಸಮೀಕ್ಷೆ ಮಾಡಬೇಕು ಎಂದರು. ಸುಶೀಲವ್ವ ಲಮಾಣಿ, ನಿಂಗಪ್ಪ ಜಾಲವಾಡಗಿ ಮಾತನಾಡಿ, ಅಕಾಲಿಕ ಮಳೆಗೆ ತಾಲೂಕಿನಲ್ಲಿ ಹಿಂಗಾರಿನ ಬೆಳೆಗಳು ಹಾನಿಗೀಡಾಗಿವೆ. ಅಧಿಕಾರಿಗಳು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದರು. ಪ್ರತಿಕ್ರಿಯಿಸಿದ ಕೃಷಿ ಸಹಾಯಕ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ‘3150 ಹೆಕ್ಟೇರ್​ನಲ್ಲಿ ಜೋಳ ಬೆಳೆ ಹಾನಿಯಾದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು. ಪರಶುರಾಮ ಇಮ್ಮಡಿ ಮಾತನಾಡಿ, ಮಳೆಯಿಂದ ಹಾನಿಯಾದ ಶಾಲೆಗಳ ದುರಸ್ತಿ ಬಗ್ಗೆ ಮಾಹಿತಿ ನೀಡಬೇಕು ಎಂದರು. ಅದಕ್ಕೆ ಉತ್ತರಿಸಿದ ಬಿಇಒ ಆರ್.ಎಸ್. ಬುರಡಿ, ಆಯಾ ಎಸ್​ಡಿಎಂಸಿಯವರೇ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದು, ಅನುದಾನ ಕೊರತೆಯಿಂದ ಕಾಮಗಾರಿ ಅಪೂರ್ಣಗೊಂಡಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದರು. ಪಿಡಬ್ಲ್ಯುಡಿ ಎಇಇ ನರೇಂದ್ರ ಡಿ.ಬಿ. ಮಾತನಾಡಿ, ಗದಗ- ಲಕ್ಷ್ಮೇಶ್ವರದ 2.6 ಕಿ.ಮೀ. ರಸ್ತೆ ಮರು ಡಾಂಬರೀಕರಣಕ್ಕೆ ಟೆಂಡರ್ ಕರೆಯಲಾಗಿದೆ ಎಂದರು. ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿದರು.

    ಸರ್ಕಾರ ‘ಒಂದು ಜಿಲ್ಲೆ ಒಂದು ಬೆಳೆ’ ಯೋಜನೆಯಡಿ ಬ್ಯಾಡಗಿ ಮೆಣಸಿನಕಾಯಿ ಬೆಳೆ ಬೆಳೆಯಲು ಗದಗ ಜಿಲ್ಲೆಯನ್ನು ಗುರುತಿಸಿದೆ. ಮುಂದಿನ ದಿನಗಳಲ್ಲಿ ಈ ಬೆಳೆ ಕ್ಷೇತ್ರ ವಿಸ್ತರಣೆ, ಸಂಶೋಧನೆ, ಮೌಲ್ಯವರ್ಧನೆಗೆ ಪ್ರಾಶಸ್ಱ ನೀಡಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
    | ಸುರೇಶ ಕುಂಬಾರ, ತೋಟಗಾರಿಕೆ ಇಲಾಖೆ, ಸಹಾಯಕ ನಿರ್ದೇಶಕ, ಶಿರಹಟ್ಟಿ/ ಲಕ್ಷೆ್ಮೕಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts