More

    ಎಪಿಎಂಸಿ ಖಾಸಗೀಕರಣ ಕ್ರಮಕ್ಕೆ ವಿರೋಧ



    ಗದಗ: ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಖಾಸಗೀಕರಣಗೊಳಿಸುವ ಕ್ರಮ ವಿರೋಧಿಸಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

    ಕರ್ನಾಟಕದಲ್ಲಿ ಎಪಿಎಂಸಿ ಕಾರ್ಯ ನಿರ್ವಹಣೆ ಐದು ದಶಕಗಳಿಂದಲೂ ನಡೆಯುತ್ತಿದ್ದು, ಇಡೀ ದೇಶಕ್ಕೆ ಮಾದರಿಯಾಗಿದೆ. ಇಲ್ಲಿ ರೈತ ಬಾಂಧವರಿಗೆ ಸಿಗುತ್ತಿರುವ ಸ್ಪರ್ಧಾತ್ಮಕ ದರ, ಸರಿಯಾದ ತೂಕ, ಅಚ್ಚುಕಟ್ಟಾದ ಹಣಕಾಸು ಪಾವತಿ ಮಾದರಿಯಾಗಿದೆ. ಶತಮಾನಗಳಿಂದ ರೈತರು ಹಾಗೂ ವ್ಯಾಪಾರಸ್ಥರ ನಡುವಿನ ಸಂಬಂಧ ಅನ್ಯೋನ್ಯವಾಗಿದೆ. ಈಗಾಗಲೇ ಎಪಿಎಂಸಿ ವರ್ತಕರು ಶೇ. 1.5ರಷ್ಟು ಮಾರುಕಟ್ಟೆ ಶುಲ್ಕ ಪಾವತಿಸಿ ಸರಕುಗಳನ್ನು ಖರೀದಿಸಿ ರೈತರ ಹಾಗೂ ರಾಜ್ಯದ ಹಿತ ಕಾಪಾಡುವಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಆದರೆ, ಕಾರ್ಪೆರೇಟ್ ಮತ್ತು ಸ್ಪಾರ್ಟಪ್ ಕಂಪನಿಗಳು ಎಪಿಎಂಸಿ ಶುಲ್ಕ ಪಾವತಿಸದೇ ರೈತರ ಉತ್ಪನ್ನಗಳನ್ನು ಖರೀದಿ ಮಾಡಿದಲ್ಲಿ ರೈತರಿಗೆ ಮತ್ತು ಸರ್ಕಾರಕ್ಕೆ ಬರುವಂತಹ ಆದಾಯ ಕಡಿಮೆಯಾಗಲಿದೆ. ಈ ಕಾಯ್ದೆ ತಿದ್ದುಪಡಿಯಾದರೆ ರಾಜ್ಯದಲ್ಲಿನ 148 ಎಪಿಎಂಸಿ ಮಾರುಕಟ್ಟೆ ಯಾರ್ಡ್​ನ ವರ್ತಕರು, ಕಾರಕೂನರು, ಹಮಾಲರು ಅವರ ಅವಲಂಬಿತ ಕುಟುಂಬ ವರ್ಗದವರ ಬದುಕು ಬೀದಿಗೆ ಬರುತ್ತದೆ. ಆದ್ದರಿಂದ ಇಂತಹ ಪ್ರಮುಖ ವಿಷಯದ ಕರಡನ್ನು ತಿದ್ದುಪಡಿ ಮಾಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಕುರಡಗಿ ಹಾಗೂ ಎಪಿಎಂಸಿ ಉಪ ಸಮಿತಿ ಚೇರ್ಮನ್ ಸಂಗಮೇಶ ದುಂದೂರ, ಚಂದ್ರು ಬಾಳಿಹಳ್ಳಿಮಠ, ತಾತನಗೌಡ ಪಾಟೀಲ ಮತ್ತಿತರರು ಇದ್ದರು.

    ಸುಗ್ರೀವಾಜ್ಞೆ ಹಿಂಪಡೆಯಲಯ ಒತ್ತಾಯ

    ನರಗುಂದ: ರೈತ ಸಮುದಾಯಕ್ಕೆ ಮಾರಕವಾಗಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡುವಂತೆ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ಸದಸ್ಯರು ತಹಸೀಲ್ದಾರ್ ಎ.ಎಚ್. ಮಹೇಂದ್ರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

    ರೈತಸಂಘ ತಾಲೂಕು ಅಧ್ಯಕ್ಷ ವಿಠ್ಠಲ ಜಾಧವ ಮಾತನಾಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕುರಿತು ಸದನದಲ್ಲಿ ವಿಷಯ ಮಂಡಿಸಿಲ್ಲ. ಪ್ರತಿಪಕ್ಷಗಳೊಂದಿಗೂ ರ್ಚಚಿಸಿಲ್ಲ. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗಿ ಕಂಪನಿಗಳಿಗೆ ಮಣೆ ಹಾಕುವ ನಿಟ್ಟಿನಲ್ಲಿ ಕೃಷಿಕರಿಗೆ ಸಾಕಷ್ಟು ಅನ್ಯಾಯ ಮಾಡುತ್ತಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣವೇ ಎಪಿಎಂಸಿ ಕಾಯ್ದೆ ತಿದ್ದುಪಡಿಯ ಸುಗ್ರೀವಾಜ್ಞೆ ಹಿಂಪಡೆಯಬೇಕು. ಮೆಕ್ಕೆಜೋಳದ ಬೆಂಬಲಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಎಲ್ಲ ಅಸಂಘಟಿತ ವಲಯದವರಿಗೂ ವಿಶೇಷ ಪ್ಯಾಕೇಜ್ ಘೊಷಿಸಬೇಕು ಎಂದು ಆಗ್ರಹಿಸಿದರು. ಡಿ.ಎಂ. ನಾಯ್ಕರ, ರವಿ ಒಡೆಯರ್, ಎಂ.ಬಿ. ಸಂಕನಗೌಡ್ರ, ಎನ್.ಬಿ. ಮಠಪತಿ, ಚನ್ನು ನಂದಿ, ಬಸವರಾಜ ತಾವರೆ, ಎಂ.ಜಿ. ಅಳಗವಾಡಿ, ಎ.ಪಿ. ಪಾಟೀಲ, ಇತರರಿದ್ದರು.

    ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಬೇಡ

    ಗಜೇಂದ್ರಗಡ: ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿರವುದು ರೈತರ ಪಾಲಿಗೆ ಮರಣಶಾಸನದಂತಿದೆ. ಸರ್ಕಾರ ಕೂಡಲೆ, ಈ ನಿರ್ಧಾರ ಕೈ ಬಿಡಬೇಕು ಎಂದು ಎಪಿಎಂಸಿ ವರ್ತಕರ ಸಂಘ ಹಾಗೂ ಸ್ಥಳೀಯ ವಾಣಿಜ್ಯೋದ್ಯಮ ಸಂಸ್ಥೆಯಿಂದ ಬುಧವಾರ ಉಪ ತಹಸೀಲ್ದಾರ್ ವೀರಣ್ಣ ಅಡಗತ್ತಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

    ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದರೆ ರೈತರು ತಮ್ಮ ಉತ್ಪನ್ನಗಳನ್ನು ರಾಷ್ಟ್ರ ವ್ಯಾಪ್ತಿಯಲ್ಲಿ ಎಲ್ಲಿ ಬೇಕಾದರೂ ಮಾರಬಹುದು ಎಂಬುದಾಗಿದೆ. ಇದು ನೆಪ ಮಾತ್ರವಾಗಿದ್ದು ಕಾರ್ಪೆರೇಟ್ ಕಂಪನಿಗಳಿಗೆ ಅನುಕೂಲವಾಗುವಂತೆ ಕಾನೂನು ರೂಪಿಸಲಾಗುತ್ತಿದೆ ಮನವಿಯಲ್ಲಿ ಆರೋಪಿಸಲಾಗಿದೆ.

    ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಅಮರೇಶ ಬಳಿಗೇರ, ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಂ.ಎಸ್. ಹಿರೇಮನಿ, ಶ್ರೇಯಾಂಸ್ ಬಾಗಮಾರ, ಬಸವರಾಜ ಬೇಲೇರಿ, ಈಶಣ್ಣ ಮ್ಯಾಗೇರಿ, ಬಸವರಾಜ ಚೋಳಿನ, ವಿಜಯ ಬುದಿಹಾಳ, ಬಸವರಾಜ ಪುರ್ತಗೇರಿ, ಸುಭಾಸ ಮ್ಯಾಗೆರಿ, ಸುನೀಲ ನಂದಿಹಾಳ, ಶಿವಪ್ಪ ಸಂಗನಾಳ, ಹನುಮಗೌಡ ಶಿನ್ನೂರ ಇತರರು ಇದ್ದರು.

    ಹಮಾಲರಿಗೆ ನೆರವು ನೀಡಲು ಮನವಿ

    ಲಾಕ್​ಡೌನ್​ನಿಂದಾಗಿ ಎಪಿಎಂಸಿ ಹಮಾಲಿ ಕಾರ್ವಿುಕರು ಸಂಕಷ್ಟದಲ್ಲಿದ್ದು, ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಹಮಾಲಿ ಕಾರ್ವಿುಕರ ಫೆಡರೇಷನ್ ಮತ್ತು ಜೈ ಹನುಮಾನ ಹಮಾಲರ ಸಂಘದ ವತಿಯಿಂದ ಉಪ ತಹಸೀಲ್ದಾರ್ ವೀರಣ್ಣ ಅಡಗತ್ತಿ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

    ಜೈ ಹನುಮಾನ ಹಮಾಲರ ಸಂಘದ ಅಧ್ಯಕ್ಷ ಸಿದ್ದಪ್ಪ ಚಲವಾದಿ ಮಾತನಾಡಿ, ಎಲ್ಲ ಹಮಾಲರಿಗೆ ಕನಿಷ್ಠ 10,000 ರೂ. ಆರ್ಥಿಕ ನೆರವು ನೀಡಬೇಕು. ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

    ಸಿಐಟಿಯುನ ಬಾಲು ರಾಠೋಡ ಮಾತನಾಡಿ, ‘ರಾಜ್ಯದಲ್ಲಿರುವ 155 ಮುಖ್ಯ ಮಾರುಕಟ್ಟೆಗಳು, 385 ಉಪ ಮಾರುಕಟ್ಟೆಗಳಲ್ಲಿ ಪರವಾನಗಿ ಪಡೆದು ಕೆಲಸ ನಿರ್ವಹಿಸುತ್ತಿರುವ ಅಂದಾಜು 24 ಸಾವಿರ ಹಮಾಲಿ ಕಾರ್ವಿುಕರು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ದಿನದ ಕೂಲಿಯೇ ಇವರಿಗೆ ಜೀವನಾಧಾರವಾಗಿದೆ. ಹೀಗಾಗಿ ಹಮಾಲರಿಗೆ ನೆರವು ನೀಡಬೇಕು’ ಎಂದು ಒತ್ತಾಯಿಸಿದರು. ಪುರಸಭೆ ಮಾಜಿ ಸದಸ್ಯ ಎಂ.ಎಸ್. ಹಡಪದ, ಫಯಾಜ್ ತೋಟದ, ಯಲ್ಲಪ್ಪ ಕಲಾಲ, ಪ್ರದೀಪ ಕಲಾಲ, ಬಿ.ಆರ್. ಸುರಕೋಡ, ರವಿ ಕಲಾಲ, ಯಲ್ಲಪ್ಪ ವದೇಗೋಳ, ಭೀಮಪ್ಪ ಗಡಾದ, ಸಂತೋಷ ಕುಮಾರ, ಎಂ.ಮುತ್ತಪ್ಪ ಗೌಡ ಇದ್ದರು.

    ರೈತರಿಗೆ ಅನ್ಯಾಯ

    ಮುಂಡರಗಿ: ಕೃಷಿ ಉತ್ಪನ್ನ ಮಾರುಕಟ್ಟೆ ಖಾಸಗೀಕರಣ ವಿರೋಧಿಸಿ ಪಟ್ಟಣದ ಎಪಿಎಂಸಿ ವರ್ತಕರ ಸಂಘದ ವತಿಯಿಂದ ಬುಧವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

    ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಖಾಸಗೀಕರಣ ಮಾಡುವ ನಿರ್ಧಾರ ಖಂಡನೀಯ. ಈಗಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯವಸ್ಥಿತವಾದ ಕಂಪ್ಯೂಟರ್ ತೂಕ ಹಾಗೂ ಸ್ಪರ್ಧಾತ್ಮಕ ಧಾರಣಿ ಇರುವುದರಿಂದ ರೈತರಿಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗಿದೆ. ಆದರೆ, ಖಾಸಗೀಕರಣ ಮಾಡುವುದರಿಂದ ದೊಡ್ಡ ಕಂಪನಿಗಳು ತಮಗೆ ಅನುಕೂಲಕರವಾದ ರೀತಿಯಲ್ಲಿ ಯಾವುದೇ ನೀತಿ ನಿಯಮವಿಲ್ಲದೆ ರೈತರ ಸರಕು ಖರೀದಿಸುತ್ತವೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತದೆ. ಅಲ್ಲದೆ, ಈಗಿರುವ ಸಣ್ಣ ವ್ಯಾಪಾರಸ್ಥರು ಹಾಗೂ ದಲಾಲರು ಬೀದಿ ಪಾಲಾಗಬೇಕಾಗುತ್ತದೆ. ಈ ಖಾಸಗೀಕರಣ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ತಹಸೀಲ್ದಾರ್ ಪರವಾಗಿ ಶಿರಸ್ತೇದಾರ್ ಎಸ್.ಎಸ್.ಬಿಚ್ಚಾಲಿ ಅವರು ಮನವಿ ಸ್ವೀಕರಿಸಿದರು. ವರ್ತಕರ ಪ್ರತಿನಿಧಿ ಕೊಟ್ರೇಶ ಅಂಗಡಿ, ವರ್ತಕರ ಸಂಘದ ಅಧ್ಯಕ್ಷ ವೀರಣ್ಣ ಬೇವಿನಮರದ, ಗೌತಮಚಂದ ಚೋಪ್ರಾ, ವೀರಣ್ಣ ಮೇಟಿ, ವೆಂಕಟೇಶ ಹೆಗ್ಗಡಾಳ, ಅಂದಪ್ಪ ಶಿವಶಟ್ಟಿ, ನಾಗರಾಜ ಹೆಗ್ಗಡಾಳ, ಭರಮೋಜಿ ಬೀಡನಾಳ, ಪ್ರಶಾಂತ ತಾವರಗೇರಿ, ಪವನ ಚೋಪ್ರಾ, ಮುದುಕಪ್ಪ ಬೆಟಗೇರಿ, ಅಮೀನಸಾಬ್ ಬಿಸನಳ್ಳಿ, ಹಬೀಬ್ ಮುಲ್ಲಾ, ವೀರೇಶ ಗೋಡಿ, ಬಾಲಾಜಿ ಕಾಲವಾಡ, ಖಾಸಿಂಸಾಬ್ ಹರಿವಾಣ ಇತರರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts