More

    ಅಭ್ಯರ್ಥಿಗಳಿಂದ ಪ್ರತಿಭಟನೆ

    ಹುಬ್ಬಳ್ಳಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಕೆಎಸ್​ಆರ್​ಟಿಸಿ ಸೆಕ್ಯುರಿಟಿ ಗಾರ್ಡ್ ಗ್ರೇಡ್ 3 ಹುದ್ದೆಗಾಗಿ ಇಲ್ಲಿನ ನೆಹರು ಕಾಲೇಜಿನ ಕೇಂದ್ರದಲ್ಲಿ ಭಾನುವಾರ ನಡೆದಿದ್ದ ಲಿಖಿತ ಪರೀಕ್ಷೆಯಲ್ಲಿ ಒಎಂಆರ್ ಶೀಟ್​ನಲ್ಲಿ ಹೆಸರು ಅದಲು ಬದಲಾಗಿ ಗೊಂದಲ ಉಂಟಾಗಿತ್ತು. ಇದರಿಂದ ಆಕ್ರೋಶಗೊಂಡ ಕೆಲ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಹೊರಬಂದು ಪ್ರತಿಭಟನೆ ನಡೆಸಿದರು.

    200 ಖಾಲಿ ಹುದ್ದೆಗಳಿಗೆ ರಾಜ್ಯಾದ್ಯಂತ 21,000ಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಹುಬ್ಬಳ್ಳಿಯಲ್ಲಿ 10 ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಲಾಗಿತ್ತು. ನೆಹರು ಕಾಲೇಜಿನಲ್ಲಿ 682 ಅಭ್ಯರ್ಥಿಗಳ ಪೈಕಿ 430 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 300ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರು ಅದಲು ಬದಲಾಗಿ ಪ್ರಕಟಗೊಂಡಿತ್ತು. ಬಾರ್ ಕೋಡ್ ಕೂಡ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಅಭ್ಯರ್ಥಿಗಳು ಹಾಗೂ ಅಧಿಕಾರಿಗಳ ನಡುವೆ ಕೆಲಕಾಲ ವಾಗ್ವಾದ ನಡೆಯಿತು. 2018 ಜುಲೈನಲ್ಲಿ ಅರ್ಜಿ ಆಹ್ವಾನಿಸಿ 2 ವರ್ಷದ ನಂತರ ಪರೀಕ್ಷೆ ನಡೆಸಲಾಗಿದೆ. 800 ರೂ. ಅರ್ಜಿ ಶುಲ್ಕ ವಿಧಿಸಲಾಗಿತ್ತು. ಹೀಗಿದ್ದರೂ ಇಂತಹ ಎಡವಟ್ಟು ನಡೆದಿದೆ. ಪ್ರಾಮಾಣಿಕ ಅಭ್ಯರ್ಥಿಗಳಿಗೆ ಇದರಿಂದ ಅನ್ಯಾಯವಾಗಿದೆ. ಹಾಗಾಗಿ, ಮರು ಪರೀಕ್ಷೆ ನಡೆಸುವಂತೆ ಒತ್ತಾಯಿಸಿದರು.

    ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್!: ಒಎಂಆರ್ ಶೀಟ್ ಅವಾಂತರ ಒಂದು ಕಡೆಯಾದರೆ ಪರೀಕ್ಷಾ ಕೇಂದ್ರದಲ್ಲಿ ಹಲವರಿಗೆ ಮೊಬೈಲ್ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿತ್ತು. ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಇನ್ನು ಕೆಲವರಿಗೆ ಅರ್ಧ ಗಂಟೆ ಹೆಚ್ಚು ಸಮಯ ನೀಡಲಾಗಿದೆ ಎಂದು ಕಿರಣ ಬಾಳಮ್ಮನವರ, ನೀಲಕಂಠ ಪುಟ್ಟಮ್ಮನವರ ಹಾಗೂ ಇತರ ಅಭ್ಯರ್ಥಿಗಳು ಆರೋಪಿಸಿದರು.

    ಪಾರದರ್ಶಕವಾಗಿ ನಡೆದಿದೆ: ಒಎಂಆರ್ ಶೀಟ್ ಬಂಡಲ್​ನಲ್ಲಿ ಎನ್​ರೆಡ್ ಸಿರೀಸ್ ಬದಲಾಗಿ ಎನ್​ಬಿ ಸಿರೀಸ್ ಬಂದಿತ್ತು. ಹಾಗಾಗಿ, ಹೆಸರು, ರಿಜಿಸ್ಟರ್ ಸಂಖ್ಯೆ ಬದಲಾಗಿತ್ತು. ಈ ಕುರಿತು ಕೂಡಲೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಯಾವ ಒಎಂಆರ್ ಸಮಸ್ಯೆಯಾಗಿದೆಯೋ ಅಲ್ಲಿ ಅವರ ಹೆಸರು, ರಿಜಿಸ್ಟರ್ ಸಂಖ್ಯೆ ಬರೆದು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದು ಮೇಲಧಿಕಾರಿಗಳು ಫ್ಯಾಕ್ಸ್ ಮೂಲಕ ತಿಳಿಸಿದರು. ಇದಕ್ಕೆ ಒಪ್ಪಿ ಹಲವರು ಪರೀಕ್ಷೆ ಬರೆದರು. ಮತ್ತೆ ಕೆಲವರು ಹೊರಗೆ ಹೋದರು. ಅಂಥವರು ಪತ್ರ ಬರೆದರೆ ಪ್ರಾಧಿಕಾರಕ್ಕೆ ತಿಳಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾರ್ಗಾಧಿಕಾರಿ ಶಿವಕುಮಾರ ಎಂ.ಪಿ. ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts