More

    ಅಂತಸ್ಪುರಣೆ ಮಾನವೀಯತೆಯೆಡೆಗೆ ತುಡಿಯಲಿ

    ಹಾಸನ: ದಯವೇ ಧರ್ಮದ ಮೂಲವಯ್ಯ ಎನ್ನುವ ಜನರಿರುವ ದೇಶವನ್ನು ಇಂದು ಭಯವೇ ಧರ್ಮದ ಶೂಲವಯ್ಯ ಎನ್ನುವ ಪಕ್ಷ ಆಳುತ್ತಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖಾ ಬೇಸರ ವ್ಯಕ್ತಪಡಿಸಿದರು.

    ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಸಾನಂ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    ನಮ್ಮೊಳಗಿನ ಅಂತಸ್ಪುರಣೆ ಮಾನವೀಯತೆ ಕಡೆಗೆ ತುಡಿಯಬೇಕು. ಅಂತಹ ಹಲವಾರು ಮನಸ್ಸುಗಳು ನಮ್ಮೊಂದಿಗೆ ಕೆಲಸ ಮಾಡುತ್ತಿವೆ. ನಂಜುಂಡೇಗೌಡ ಕುವೆಂಪು ಅವರ ತತ್ವವನ್ನು ಗ್ರಾಮೀಣ ಸೊಗಡಿನ ಸಿನಿಮಾ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ. ದಶಕಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ದುಡಿದ ಅವರಿಗೆ ಹಾಸನದ ನಾಗರಿಕರು ನೀಡುತ್ತಿರುವ ಗೌರವ ಸರ್ವಶ್ರೇಷ್ಠವಾದ ಪ್ರಶಸ್ತಿಯಾಗಿದೆ ಎಂದರು.

    ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ್ ಪ್ರಕಾಶ್ ಮಾತನಾಡಿ, ನಾಯಕ ಎಂದರೆ ತನ್ನ ಜತೆಗಾರರಿಗೆ ನ್ಯಾಯ ನೀಡುವ ಸಾಮರ್ಥ್ಯ ಉಳ್ಳವನು ಎಂದರ್ಥ. ಸಾಲಗಾಮೆ ನಂಜುಂಡೇಗೌಡ ಆ ಅರ್ಥದಲ್ಲಿ ನಿಜವಾದ ನಾಯಕ. ವೈಚಾರಿಕ ಪ್ರಜ್ಞೆಯನ್ನು ಹೊಂದಿದ್ದರೆ ಮಾತ್ರವೇ ನೂರಾರು ಜನರು ಪಾಲ್ಗೊಳ್ಳುವಿಕೆಯ ಪ್ರಕ್ರಿಯೆಯಾಗಿರುವ ಸಿನಿಮಾದ ನಿರ್ದೇಶಕ ಎಲ್ಲರಿಗೂ ನ್ಯಾಯ ಒದಗಿಸಲು ಸಾಧ್ಯ ಎಂದರು.

    ಯಾವುದೇ ಕ್ಷೇತ್ರವಾದರೂ ಅಲ್ಲಿ ಕೆಲಸ ಮಾಡುವವರಿಗೆ ಒಂದು ಸೈದ್ಧಾಂತಿಕ ಬದ್ಧತೆ, ಹಿನ್ನೆಲೆ, ಶಕ್ತಿಯಿದ್ದರೆ ಅವರ ಉತ್ಪನ್ನ ಶ್ರೇಷ್ಠವಾಗಿರುತ್ತದೆ. ನಂಜುಂಡೇಗೌಡ ಅವರ ಸಿನಿಮಾಗಳು ಸೃಜನಶೀಲ ಮನಸ್ಸಿನ ಕಾರಣಕ್ಕಾಗಿ ಕುವೆಂಪು ದೃಷ್ಟಿಯ ಮಹಾಕಾವ್ಯಗಳಾಗಿವೆ ಎಂದು ಬಣ್ಣಿಸಿದರು.

    ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ನಾನು ಸದಸ್ಯನಾಗಿದ್ದ ಅವಧಿಯಲ್ಲಿ ಅವರು ಆ ಪ್ರಶಸ್ತಿಗೆ ಅತ್ಯಂತ ಅರ್ಹರು ಎಂಬ ಕಾರಣಕ್ಕಾಗಿ ಅವರ ಹೆಸರು ಸೇರಿಸಿದ್ದೆವು. ಆದರೆ, ಅವರದೇ ರಂಗದ ನಿರ್ದೇಶಕರೊಬ್ಬರು ಅದಕ್ಕೆ ಅಡ್ಡಗಾಲು ಹಾಕಿದ್ದಲ್ಲದೆ, ಕಡೇ ಕ್ಷಣದಲ್ಲಿ ಬೇರೊಬ್ಬರಿಗೆ ಪ್ರಶಸ್ತಿ ದೊರೆಯುವಂತೆ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

    ಸಿನಿಮಾ ನಿರ್ಮಾಪಕ, ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದ್, ಜಾನಪದ ವಿದ್ವಾಂಸ ಪ್ರೊ.ಹಿ.ಶಿ. ರಾಮಚಂದ್ರಗೌಡ ಮಾತನಾಡಿದರು.

    ನಿರ್ದೇಶಕ ನಂಜುಂಡೇಗೌಡ ದಂಪತಿಯನ್ನು ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಸನ್ಮಾನಿಸಿದರು. ಕಿರುತೆರೆ ನಟಿ ನೇಹಾ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದರಾಮಯ್ಯ, ರೈತ ಹೋರಾಟಗಾರ ಮಂಜುನಾಥ ದತ್ತ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಚಿತ್ರೋತ್ಸವ ಸಮಿತಿ ಅಧ್ಯಕ್ಷ ರವಿ ನಾಕಲಗೂಡು ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts