ಜಿಪಂ ಗದ್ದುಗೆ ಗುದ್ದಾಟ ತಾರಕಕ್ಕೆ

ಅಶೋಕ ಶೆಟ್ಟರ್, ಬಾಗಲಕೋಟೆ

ಬಾಗಲಕೋಟೆ ಜಿಲ್ಲಾ ಪಂಚಾಯಿತಿಯಲ್ಲಿ ಆಡಳಿತ ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಮ್ಮೆ ಭಿನ್ನಮತದ ಹೊಗೆ ದಟ್ಟವಾಗಿ ಹೊರ ಸೂಸತೊಡಗಿದೆ. ಸದಸ್ಯರ ಭಿನ್ನಸ್ವರದಿಂದ ಆಡಳಿತ ಯಂತ್ರಕ್ಕೆ ತುಕ್ಕು ಹಿಡಿದಿದೆ.

ಬಹುಮತ ಇಲ್ಲದೇ ಇದ್ದರೂ ಹೇಗೋ ಏನೋ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಕಳೆದ 30 ತಿಂಗಳ ಅವಧಿಯಲ್ಲಿ ಒಂದೇ ಒಂದು ಸಾಮಾನ್ಯ ಸಭೆಯನ್ನು ಸುಸೂತ್ರವಾಗಿ ನಡೆಸಿರುವ ಉದಾಹರಣೆ ಇಲ್ಲ.

ಅಧಿಕಾರ ಕೈಚೆಲ್ಲಿ ಪ್ರತಿಪಕ್ಷ ಸ್ಥಾನದಲ್ಲಿರುವ ಬಿಜೆಪಿಯಿಂದ ಯಾವುದೇ ತೊಂದರೆ ತಾಪತ್ರಯಗಳು ಇಲ್ಲದಿದ್ದರೂ ಅಧಿಕಾರ ಚಲಾಯಿಸುವಲ್ಲಿ ಆಡಳಿತ ಕಾಂಗ್ರೆಸ್ ಪಕ್ಷ ಮತ್ತೆ ಮತ್ತೆ ಎಡುವುತ್ತಲೇ ಇದೆ. ಕಾಂಗ್ರೆಸ್ ಪಕ್ಷದ ಆಂತರಿಕ ಜಗಳಕ್ಕೆ ಸಿಕ್ಕು ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಇದ್ಯಾವುದರ ಕಡೆಗೆ ಗಮನ ಹರಿಸದ ಆಡಳಿತ ಪಕ್ಷ ಸದಸ್ಯರು ಒಬ್ಬರ ಮೇಲೆ ಮತ್ತೊಬ್ಬರ ಮೇಲೆ ಕತ್ತಿ ಮಸೆಯುವ ಕೆಲಸದಲ್ಲಿ ನಿರತವಾಗಿರುವುದು ಜನರಲ್ಲಿ ಬೇಸರ ತರಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಭಿವೃದ್ಧಿಯ ದೃಷ್ಟಿಯಿಂದ ಪ್ರತಿ ಎರಡು ತಿಂಗಳಿಗೊಮ್ಮೆ ಸಾಮಾನ್ಯ ಸಭೆ ನಡೆಸಬೇಕು. ಇದು ಆಡಳಿತ ಪಕ್ಷದ ಕರ್ತವ್ಯ. ಆದರೆ, ಬಾಗಲಕೋಟೆ ಜಿಲ್ಲಾ ಪಂಚಾಯಿತಿಗೆ ಆರಂಭದಿಂದಲೇ ಹಿಡಿದಿರುವ ಗ್ರಹಣದಿಂದಾಗಿ ಈವರೆಗೂ ಒಂದೇ ಒಂದು ಸಾಮಾನ್ಯ ಸಭೆಯೂ ಸುಸೂತ್ರವಾಗಿ ನಡೆಯುತ್ತಿಲ್ಲ. ಅದಕ್ಕೆ ಅವರ ಪಕ್ಷದವರೇ ತೊಡರುಗಾಲು ಹಾಕುತ್ತಿರುವುದು ಮಾತ್ರ ವಿಪರ್ಯಾಸ.

ಈ ಮೊದಲು ಅಧ್ಯಕ್ಷರು ಹಾಗೂ ಸದಸ್ಯರ ನಡುವಿನ ಮುಸುಕಿನ ಗುದ್ದಾಟ ಸಾಮಾನ್ಯ ಸಭೆಗೆ ಕಗ್ಗಂಟಾಗಿತ್ತು. ಇದೀಗ ಅಧ್ಯಕ್ಷರ ರಾಜೀನಾಮೆ ವಿಷಯವಾಗಿ ಕತ್ತಿ ಮಸಿಯುವ ಕೆಲಸ ನಡೆದಿದೆ ಎಂದು ಹೇಳಲಾಗುತ್ತಿದೆ.

ಹಾಲಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಎರಡೂವರೆ ವರ್ಷಗಳ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬೇರೆಯವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎನ್ನುವುದು ಕಾಂಗ್ರೆಸ್ ಪಕ್ಷದ ಕೆಲ ಮಹಿಳಾ ಸದಸ್ಯರ ಒತ್ತಾಯವಾಗಿದೆ. ಅಧಿಕಾರ ಹಂಚಿಕೆ ಒಪ್ಪಂದ ವರಿಷ್ಠರ ಎದುರಿಗೆ ಆಗಿತ್ತು ಎನ್ನುವುದು ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಬಾಯಕ್ಕ ಮೇಟಿ ಅವರ ವಾದವಾಗಿದೆ.

ಆದರೆ, ನಾನು ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಾಗ ಎರಡೂವರೆ ವರ್ಷ ಎಂದು ಒಪ್ಪಂದ ಆದಂತಿಲ್ಲ. ಅದನ್ನು ಈ ವರೆಗೂ ಪಕ್ಷದ ಮುಖಂಡರು ತಮ್ಮ ಗಮನಕ್ಕೆ ತಂದಿಲ್ಲ. ಯಾರೋ ಒಬ್ಬರು ಹೇಳಿದರೆ ಹೇಗೆ? ಅಷ್ಟಕ್ಕೂ ಈ ವಿಚಾರವನ್ನು ಮುಖಂಡರ ಎದುರು ಹೇಳಬೇಕು, ಕುಳಿತು ರ್ಚಚಿಸಬೇಕು. ಅದನ್ನು ಬಿಟ್ಟು ಸಾಮಾನ್ಯ ಸಭೆಗೆ ಗೈರು ಉಳಿದು ಜಿಲ್ಲೆಯ ಅಭಿವೃದ್ಧಿಗೆ ಅಡ್ಡಿಪಡಿಸಿದರೆ ಹೇಗೆ ಎನ್ನೋದು ಅಧ್ಯಕ್ಷೆ ವೀಣಾ ಕಾಶಪ್ಪನವರ ಪ್ರಶ್ನೆ.

ಭಿನ್ನಮತಕ್ಕೆ ನಾಯಕತ್ವ ಯಾರದ್ದು?: ಜಿಲ್ಲಾ ಪಂಚಾಯಿತಿಯ ಆಡಳಿತ ಕಾಂಗ್ರೆಸ್ ಪಕ್ಷದಲ್ಲಿ ನಡೆದಿರುವ ಬಂಡಾಯಕ್ಕೆ ನಾಯಕತ್ವ ಯಾರದ್ದು ಎಂದು ಸ್ಪಷ್ಟವಾಗಿ ಹೇಳುತ್ತಿಲ್ಲವಾದರೂ ಮೇಲ್ನೋಟಕ್ಕೆ ಬಾವುಟ ಹಿಡಿದಿರೋದು ಮಾಜಿ ಸಚಿವ ಎಚ್.ವೈ. ಮೇಟಿ ಅವರ ಪುತ್ರಿ ಬಾಯಕ್ಕ ಮೇಟಿ ಅನ್ನೋದು ಜಿ.ಪಂ. ಮೊಗಸಾಲೆಯಲ್ಲಿ ಪ್ರತಿಧ್ವನಿಸುತ್ತಿದೆ. ಜಿಪಂ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿರುವ ಅವರು ತಮಗೆ ಅಸಮಾಧಾನ ಇದ್ದಾಗಲೆಲ್ಲ ಸಾಮಾನ್ಯ ಸಭೆಗೆ ಗೈರು ಉಳಿಯುತ್ತಾರೆ. ಅವರು ಸಭೆಗೆ ಬಂದಿಲ್ಲವೆಂದರೆ ಅಂದಿನ ಸಭೆಗೆ ಕೋರಂ ಕೊರತೆ ಉಂಟಾಗುತ್ತಿರುವುದು ಅನುಮಾನಗಳಿಗೆ ಪುಷ್ಟಿ ಕೊಡುತ್ತಿದೆ.

ನಮ್ಮ ಅವರ ನಡುವೆ ಏನಿಲ್ಲ?: ಸದ್ಯಕ್ಕೆ ಜಿಲ್ಲಾ ಪಂಚಾಯಿತಿಯಲ್ಲಿ ವೀಣಾ ಕಾಶಪ್ಪನವರ ವರ್ಸಸ್? ಬಾಯಕ್ಕ ಮೇಟಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ, ಇದನ್ನು ಅಲ್ಲಗಳೆಯುವ ಬಾಯಕ್ಕ, ನಮ್ಮ ಅವರ ನಡುವೆ ಏನಿಲ್ಲ. ನಾವಿಬ್ಬರೂ ಒಂದೇ ತಾಯಿಯ ಮಕ್ಕಳು ಎನ್ನುತ್ತಾರೆ. ಬೆನ್ನಲ್ಲೇ ಹಾಗೇನಾದರೂ ಇದ್ದರೆ ವರಿಷ್ಠರು ಸರಿಪಡಿಸುತ್ತಾರೆ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಾರೆ. ಜಿಪಂ ಅಧ್ಯಕ್ಷ ಸ್ಥಾನಕ್ಕೆ ನಾನು ಸೇರಿ ಅನೇಕರು ಆಕಾಂಕ್ಷಿಗಳು ಇದ್ದೇವೆ. ಆರಂಭದಲ್ಲೂ ನಾನು ಆಕಾಂಕ್ಷಿ ಇದ್ದೆ. ಆಗ ನನ್ನನ್ನು ಸುಮ್ಮನಿರು, ಮುಂದೆ ಅವಕಾಶ ಕೊಡಿಸುವುದಾಗಿ ಅಭಯ ನೀಡಿದ್ದರು ಎನ್ನುವ ಬಾಯಕ್ಕ, ಭರವಸೆ ನೀಡಿದ್ದ್ಯಾರು ಅನ್ನೋದು ಬಹಿರಂಗ ಪಡಿಸುತ್ತಿಲ್ಲ.

ಅವರು ಆಡಿಸಿದಂತೆ ಆಡಬೇಕಷ್ಟೆ!: ಹಾಗೆ ನೋಡಿದರೆ ಜಿಪಂ ಸದಸ್ಯರ ಪೈಕಿ ಕಾಂಗ್ರೆಸ್​ನ ಪ್ರಭಾವಿ ಮುಖಂಡರ ಕುಟುಂಬ ಸದಸ್ಯರು ಇದ್ದಾರೆ. ಮಾಜಿ ಸಚಿವ ಎಚ್.ವೈ. ಮೇಟಿ ಅವರ ಪುತ್ರಿ ಬಾಯಕ್ಕ ಮೇಟಿ, ಮತ್ತೊಬ್ಬ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಸಹೋದರಿ ಕವಿತಾ ತಿಮ್ಮಾಪುರ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ ಇದ್ದಾರೆ. ಇದೀಗ ಅಧ್ಯಕ್ಷರಾಗಿರೋದು ವೀಣಾ, ಅವರನ್ನು ಕೆಳಗೆ ಇಳಿಸಿ ಅಧ್ಯಕ್ಷರಾಗಬೇಕೆಂದು ಕೊಂಡವರು ಬಾಯಕ್ಕ ಮೇಟಿ. ಹೀಗಾಗಿ ಕೈ ಮುಖಂಡರ ಕುಟುಂಬಗಳ ನಡುವೆಯೇ ಅಧಿಕಾರ ಗದ್ದುಗೆ ಗುದ್ದಾಟ ನಡೆದಿದ್ದು, ಉಳಿದಂತೆ ಸದಸ್ಯರ ಸ್ಥಿತಿ ಬಿಸಿತುಪ್ಪವಾಗಿರೋದಂತೂ ಸತ್ಯ. ಒಂದು ಕಡೆಗೆ ಅವರು ಮತ್ತೊಂದು ಕಡೆಗೆ ಇವರು ಆಡಿಸಿದಂತೆ ಆಡೋದಷ್ಟೆ ನಮ್ಮ ಕೆಲಸವಾಗಿದೆ. ಇದನ್ನು ಬಾಯಿ ಬಿಟ್ಟು ಹೇಳುವಂತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಸದಸ್ಯರೊಬ್ಬರು ಹೇಳುತ್ತಾರೆ.

ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಎಲ್ಲರಿಗೂ ಅಧ್ಯಕ್ಷರಾಗಬೇಕು. ಜನರ ಸೇವೆ ಮಾಡಬೇಕು ಎನ್ನುವ ಆಸೆ ಇರುತ್ತದೆ. ಈ ಹಿಂದೆ ವರಿಷ್ಠರು ಮುಂದೆ ಅವಕಾಶ ಕೊಡುವುದಾಗಿ ಹೇಳಿದ್ದರು. ಈಗ ಕೇಳುತ್ತೇನೆ, ಅನೇಕ ಆಕಾಂಕ್ಷಿಗಳ ಪೈಕಿ ನಾನು ಒಬ್ಬಳು. ಈ ಬಗ್ಗೆ ಈ ಹಿಂದೆಯೇ ಸಿದ್ದರಾಮಯ್ಯ ಬಾದಾಮಿಗೆ ಬಂದಿದ್ದಾಗ ಅವರ ಬಳಿಯೂ ಹೇಳಿದ್ದೇವೆ. ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳಬೇಕು.

| ಬಾಯಕ್ಕ ಮೇಟಿ ಸದಸ್ಯರು, ಜಿಲ್ಲಾ ಪಂಚಾಯಿತಿ ಬಾಗಲಕೋಟೆ

ಜಿಪಂನಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ಕಲಹದಿಂದ ಆಡಳಿತ ಯಂತ್ರ ಕುಸಿದಿದೆ. ಇದರಲ್ಲಿ ಬಿಜೆಪಿ ಪಾತ್ರ ಏನೂ ಇಲ್ಲ. ಅವರ ಪಕ್ಷದ ಸದಸ್ಯರೇ ಸಭೆಗೆ ಗೈರು ಉಳಿದು ಕೋರಂ ಕೊರತೆ ಉಂಟಾಗುವಂತೆ ಮಾಡುತ್ತಿದ್ದಾರೆ. ಇವರ ಆಂತರಿಕ ಗೊಂದಲದಲ್ಲಿ ಜಿಲ್ಲೆಯ ಅಭಿವೃದ್ಧಿ ನಿಂತು ಹೋಗಿದೆ. ಕೂಡಲೇ ಅಧ್ಯಕ್ಷೆ ವೀಣಾ ಕಾಶಪ್ಪನವರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.

| ವಿರೇಶ ಉಂಡೋಡಿ ಸದಸ್ಯರು, ಜಿಲ್ಲಾ ಪಂಚಾಯಿತಿ ಬಾಗಲಕೋಟೆ

ಜಿಪಂನಲ್ಲಿ ಏನು ನಡೆಯುತ್ತಿದೆಂದು ಜಿಲ್ಲೆಯ ಜನರು ನೋಡುತ್ತಿದ್ದಾರೆ. ಮನಸ್ಸಿಗೆ ನೋವು ಆಗುತ್ತಿದೆ. ಸಾಮಾನ್ಯ ಸಭೆ ನಡೆಯದಿದ್ದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಅಧ್ಯಕ್ಷ ಸ್ಥಾನಕ್ಕೆ ನಾನು ಸಮರ್ಥ ಇಲ್ಲ ಅಂದರೆ ವರಿಷ್ಠರ ಗಮನಕ್ಕೆ ತರಬೇಕು. ಅದನ್ನು ಬಿಟ್ಟು ಹೀಗೆ ಸಭೆಗೆ ಗೈರು ಉಳಿದರೆ ಏನರ್ಥ? ಈ ಎಲ್ಲ ವಿಚಾರಗಳನ್ನು ಪಕ್ಷದ ಮುಖಂಡರ ಗಮನಕ್ಕೆ ತರುತ್ತೇನೆ. ಜತೆಗೆ ಬಾದಾಮಿ ಶಾಸಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪರಿಸ್ಥಿತಿ ವಿವರಿಸಿ, ಸಮಸ್ಯೆ ಬಗೆಹರಿಸುವಂತೆ ಕೋರುತ್ತೇನೆ.

| ವೀಣಾ ಕಾಶಪ್ಪನವರ ಅಧ್ಯಕ್ಷರು ಜಿಪಂ, ಬಾಗಲಕೋಟೆ